Advertisement

IPL; ದಿಗ್ಗಜರ ಸಮರಕ್ಕೆ ವಾಂಖೇಡೆ ಸಜ್ಜು:ಟ್ರ್ಯಾಕ್‌ಗೆ ಮರಳಲು ಕೆಕೆಆರ್‌ ಕಾತರ

11:41 PM Apr 13, 2024 | Team Udayavani |

ಮುಂಬಯಿ: ಐಪಿಎಲ್‌ನ ಬಲಿಷ್ಠ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಗೆಲುವಿಗಾಗಿ ಶಕ್ತಿಮೀರಿ ಹೋರಾಡುವ ನಿರೀಕ್ಷೆಯಿದೆ. ತವರಿನಲ್ಲಿ ನಡೆಯುವ ಮತ್ತು ಆರ್‌ಸಿಬಿ ವಿರುದ್ಧ ನಡೆದ ಈ ಹಿಂದಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಮುಂಬೈ ತಂಡವು ಚೆನ್ನೈ ವಿರುದ್ಧವೂ ಗೆಲ್ಲುವ ವಿಶ್ವಾಸದಲ್ಲಿದೆ.

Advertisement

ಇಷ್ಟರವರೆಗೆ ಆಡಿದ ಪಂದ್ಯಗಳನ್ನು ಗಮನಿಸಿದರೆ ಚೆನ್ನೈ ಮೂರು ಪಂದ್ಯಗಳನ್ನು ಗೆದ್ದು ಆರಂಕ ಗಳಿಸಿದ್ದರೆ ಮುಂಬೈ ಎರಡು ಪಂದ್ಯ ಗೆದ್ದು ನಾಲ್ಕು ಅಂಕ ಹೊಂದಿದೆ. ಆದರೆ ಆರ್‌ಸಿಬಿ ವಿರುದ್ಧ ಮುಂಬೈಯ ಆಟವನ್ನು ಗಮನಿಸಿದರೆ ಚೆನ್ನೈ ವಿರುದ್ಧವೂ ಮುಂಬೈ ಸುಲಭವಾಗಿ ಶರಣಾಗುವ ಸಾಧ್ಯತೆಯಿಲ್ಲ. ಆರ್‌ಸಿಬಿ ವಿರುದ್ಧ ಇಶಾನ್‌ ಕಿಶನ್‌, ರೋಹಿತ್‌, ಸೂರ್ಯಕುಮಾರ್‌ ಅವರ ಅದ್ಭುತ ಆಟ ಯಾವುದೇ ತಂಡಕ್ಕೂ ಎಚ್ಚರಿಕೆಯ ಸಂಕೇತವೇ ಆಗಿದೆ.

ಧೋನಿ ಆಕರ್ಷಣೆ
ಪ್ರತಿಷ್ಠಿತ ವಾಂಖೇಡೆ ಕ್ರೀಡಾಂಗಣ ಲೆಜೆಂಡರಿ ಧೋನಿ ಅವರ ಪಾಲಿಗೆ ಕೊನೆಯ ಪಂದ್ಯ ಆಗುವ ಸಾಧ್ಯತೆಯಿದೆ. ಚೆನ್ನೈ ತಂಡದ ಆಟಗಾರರಾಗಿ ವಾಂಖೇಡೆಯಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿರುವ ಧೋನಿ ಕೊನೆಯ ಐಪಿಎಲ್‌ ಋತುವಿನಲ್ಲಿ ಆಡುತ್ತಿದ್ದಾರೆ ಎನ್ನಲಾಗಿದೆ. 2005ರ ಬಳಿಕ ಯಾವುದೇ ತಂಡದ ಪರ ಆವರು ಕೇವಲ ಆಟಗಾರರಾಗಿ ಇಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ.

ಚೆನ್ನೈ ತಂಡವು ಮುಂಬೈ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಬಾರಿ ಚೆನ್ನೈ ಗೆದ್ದ ದಾಖಲೆ ಹೊಂದಿದೆ. ಕಳೆದ ಋತುವಿನಲ್ಲಿ ಏಳು ವಿಕೆಟ್‌ಗಳ ಗೆಲುವು ಕೂಡ ಇದರಲ್ಲಿ ಸೇರಿದೆ.

ನಾಯಕತ್ವ ಬದಲಾವಣೆ
ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾಗಿರುವ ಮುಂಬೈ ಮತ್ತು ಚೆನ್ನೈ ತಲಾ ಐದು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಇದೀಗ ಎರಡೂ ತಂಡಗಳಲ್ಲಿ ನಾಯಕತ್ವದಲ್ಲೂ ಬದಲಾವಣೆ ಆಗಿದೆ. ಮುಂಬೈ ತಂಡವನ್ನು ರೋಹಿತ್‌ ಶರ್ಮ ಅವರ ಬದಲಿಗೆ ಹಾರ್ದಿಕ್‌ ಪಾಂಡ್ಯ ವಹಿಸಿದ್ದರೆ ಚೆನ್ನೈ ತಂಡವನ್ನು ಧೋನಿ ಅವರ ಬದಲಿಗೆ ರುತುರಾಜ್‌ ಗಾಯಕ್ವಾಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಮುಂಬೈ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಇದು ಸಾಬೀತಾಗಿದೆ. ಸೂರ್ಯಕುಮಾರ್‌, ಇಶಾನ್‌ ಕಿಶನ್‌, ರೋಹಿತ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ತಂಡದ ಬೌಲಿಂಗ್‌ ಉತ್ತಮವಾಗಿದ್ದರೂ ಆರ್‌ಸಿಬಿಗೆ ಬಹಳಷ್ಟು ರನ್‌ ಬಿಟ್ಟುಕೊಟ್ಟಿರುವುದು ಚಿಂತೆಗೆ ಕಾರಣವಾಗಿದೆ. ಬುಮ್ರಾ ಐದು ವಿಕೆಟ್‌ ಕಿತ್ತರೂ ಆರ್‌ಸಿಬಿ ಈ ಪಂದ್ಯದಲ್ಲಿ 197 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.

ಚೆನ್ನೈ ತಂಡವೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪರಿಣಾಮಕಾರಿ ನಿರ್ವಹಣೆ ದಾಖಲಿಸಿದೆ. ಹಾಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗೆಲುವಿನ ಟ್ರ್ಯಾಕ್‌ಗೆ ಮರಳಲು ಕೆಕೆಆರ್‌ ಕಾತರ
ಕೋಲ್ಕತಾ: ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ತಂಡವು ತವರಿನಲ್ಲಿ ಆಡುವ ಲಾಭದೊಂದಿಗೆ ರವಿವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲು ಸಜ್ಜಾಗಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಹಾತೊರೆಯುತ್ತಿದೆ.

ಕೆಕೆಆರ್‌ ತಂಡವು ತವರಿನಲ್ಲಿ ಐದು ಪಂದ್ಯಗಳನ್ನು ಆಡಲಿದ್ದು ಇದು ಮೊದಲನೆಯದು. ಗೌತಮ್‌ ಗಂಭೀರ್‌ ಮಾರ್ಗದರ್ಶನ ಪಡೆದ ಕೆಕೆಆರ್‌ ತಂಡವು ತವರಿನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 2021ರ ಬಳಿಕ ಪ್ಲೇ ಆಫ್ನಲ್ಲಿ ಸ್ಥಾನ ಪಡೆಯಲು ಕೆಕೆಆರ್‌ ತವರಿನಲ್ಲಿ ಉತ್ಕೃಷ್ಟ ನಿರ್ವಹಣೆ ನೀಡುವುದು ಅನಿವಾರ್ಯವೂ ಆಗಿದೆ.

ಅಂಕಪಟ್ಟಿಯಲ್ಲಿ ಎರಡೂ ತಂಡಗಳು ತಲಾ ಮೂರು ಗೆಲುವು ಸಾಧಿಸಿ ಸಮಬಲ ಸಾಧನೆ ಮಾಡಿವೆ. ಆದರೆ ಈ ಎರಡೂ ತಂಡಗಳು ತಮ್ಮ ಈ ಹಿಂದಿನ ಪಂದ್ಯವನ್ನು ಕಳೆದುಕೊಂಡಿದ್ದರಿಂದ ಮತ್ತೆ ಗೆಲ್ಲಲು ಹೋರಾಟ ನಡೆಸುವ ಸಾಧ್ಯೆಯಿದೆ.

ಕೆಕೆಆರ್‌ಗೆ ಸ್ಫೋಟಕ ಆರಂಭ ಒದಗಿಸಿದ ಸುನೀಲ್‌ ನಾರಾಯಣ್‌ ಮತ್ತು ಆ್ಯಂಡ್ರೆ ರಸೆಲ್‌ ಹಾಲಿ ಚಾಂಪಿಯನ್‌ ಚೆನ್ನೈ ವಿರುದ್ಧ ಮಿಂಚಲು ವಿಫ‌ಲವಾಗಿದ್ದರು. ಇದರಿಂದ ಕೆಕೆಆರ್‌ ಏಳು ವಿಕೆಟ್‌ಗಳಿಂದ ಸೋಲು ಕಾಣುವಂತಾಯಿತು. ಎರಡು ಬಾರಿ 200 ಪ್ಲಸ್‌ ರನ್‌ ಪೇರಿಸಿದ ಕೆಕೆಆರ್‌ ತಂಡವನ್ನು ಸುನೀಲ್‌, ರಸೆಲ್‌ ಅವರಲ್ಲದೇ ಇನ್ನುಳಿದ ಆಟಗಾರರೂ ಆಧರಿಸುವ ಅಗತ್ಯವಿದೆ. ಬೆರಳ ಗಾಯಕ್ಕೆ ಒಳಗಾಗಿರುವ ನಿತೀಶ್‌ ರಾಣ ಲಕ್ನೋ ವಿರುದ್ಧ ಆಡುವುದು ಅನುಮಾನ. ನಾಯಕ ಶ್ರೇಯಸ್‌ ಅಯ್ಯರ್‌ ಅವರಿನ್ನೂ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ 0, 39 ಅಜೇಯ, 18 ಮತ್ತು 34 ರನ್‌ ಗಳಿಸಿದ್ದರು. ಇನ್ನೋರ್ವ ಬ್ಯಾಟ್ಸ್‌ಮನ್‌ ವೆಂಕಟೇಶ್‌ ಅಯ್ಯರ್‌ ಮೂರು ಬಾರಿ ಒಂದಂಕೆಯ ಮೊತ್ತ ಗಳಿಸಿದ್ದರೆ ಆರ್‌ಸಿಬಿ ವಿರುದ್ಧ ಅರ್ಧಶತಕ ಹೊಡೆದಿದ್ದರು.

ಮಾಯಾಂಕ್‌ ಯಾದವ್‌ ಇಲ್ಲ
ಈಡನ್‌ನಲ್ಲಿ ಕೆಕೆಆರ್‌ ಗೆಲುವಿನ ಫೇವರಿಟ್‌ ಆಗಿದ್ದರೂ ಲಕ್ನೋ ತಂಡ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಸೂಪರ್‌ ವೇಗಿ ಮಾಯಾಂಕ್‌ ಯಾದವ್‌ ಕೆಕೆಆರ್‌ ವಿರುದ್ಧ ಆಡದಿದ್ದರೂ ಲಕ್ನೋ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಮಾಯಾಂಕ್‌ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು ಯಾವುದೇ ಅಪಾಯ ತೆಗೆದುಕೊಳ್ಳದಿರುವ ದೃಷ್ಟಿಯಿಂದ ಕೆಲವು ಪಂದ್ಯಗಳಿಂದ ಅವರನ್ನು ಹೊರಗಿಡಲು ನಿರ್ಧರಿಸಲಾಗಿದೆ ಎಂದು ನಾಯಕ ಕೆಎಲ್‌ ರಾಹುಲ್‌ ಹೇಳಿದ್ದಾರೆ.
ಕ್ವಿಂಟನ್‌ ಡಿ ಕಾಕ್‌, ರಾಹುಲ್‌, ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ನಿಕೋಲಸ್‌ ಪೂರಣ್‌ ಅವರು ಬ್ಯಾಟಿಂಗ್‌ನಲ್ಲಿ ತಂಡವನ್ನು ಆಧರಿಸಲಿದ್ದರೆ ರವಿ ಬಿಷ್ಣೋಯಿ, ಕೃಣಾಲ್‌ ಪಾಂಡ್ಯ ನವೀನ್‌ ಉಲ್‌ ಹಕ್‌, ಯಶ್‌ ಥಾಕುರ್‌ ಬೌಲಿಂಗ್‌ನಲ್ಲಿ ಮಿಂಚುವ ಸಾಧ್ಯತೆಯಿದೆ.

ಪಿಚ್‌ ವರದಿ
ಈಡನ್‌ ಗಾರ್ಡನ್ಸ್‌ನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ, ಇಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಸರಾಸರಿ 164 ರನ್‌ ಬರಬಹುದು. ಸ್ಪಿನ್ನರ್‌ಗಳಿಗಿಂತ ವೇಗಿಗಳು ಹೆಚ್ಚಿನ ವಿಕೆಟ್‌ ಉರುಳಿಸಿದ್ದಾರೆ. ಲಕ್ನೋ ವಿರುದ್ಧ ಕೆಕೆಆರ್‌ ಪರ ರಿಂಕು ಸಿಂಗ್‌ ಗರಿಷ್ಠ ರನ್‌ (113) ಗಳಿಸಿದ ಸಾಧನೆ ಹೊಂದಿ ದ್ದಾರೆ. ಅವರ ಗರಿಷ್ಠ ಮೊತ್ತ ಅಜೇಯ 67 ಆಗಿದೆ. ಭಾರೀ ಸೆಕೆ ಇರಲಿದ್ದು 37 ಡಿಗ್ರಿ ಸೆಲ್ಸಿಯಸ್‌ ತಾಪ ಮಾನ ಇರಲಿದೆ. ಮಳೆ ಬರುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next