Advertisement

ದಕ್ಷಿಣ ಆಫ್ರಿಕಾದ ಹೀನಾಯ ಸೋಲಿಗೆ ಐಪಿಎಲ್ ಕಾರಣವಂತೆ!

09:48 AM Jun 25, 2019 | Team Udayavani |

ಲಂಡನ್‌: ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವೈಫ‌ಲ್ಯ ಮುಂದುವರಿದಿದೆ. ಪಾಕಿಸ್ಥಾನ ವಿರುದ್ಧ ಸೋಲುವುದರೊಂದಿಗೆ ಅದು ಲೀಗ್‌ ಹಂತದಲ್ಲೇ ಕೂಟದಿಂದ ಹೊರಬಿದ್ದಿದೆ. 7 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಈವರೆಗೆ ದುರ್ಬಲ ಅಫ್ಘಾನಿಸ್ಥಾನವನ್ನು ಮಾತ್ರ ಸೋಲಿಸಲು ಯಶಸ್ವಿಯಾಗಿದೆ.

Advertisement

ಹರಿಣಗಳ ಕಳಪೆ ನಿರ್ವಹಣೆಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಎಸ್‌ಎ) ಅಧಿಕಾರಿಗಳು, ನಾಯಕ ಫಾ ಡು ಪ್ಲೆಸಿಸ್‌ ಈಗ ಕಾರಣಗಳನ್ನು ಸೂಚಿಸುತ್ತಿದ್ದಾರೆ. ಇದಕ್ಕೆಲ್ಲ ಮೂಲ ಭಾರತದಲ್ಲಿ ನಡೆದ ಐಪಿಎಲ್ ಎಂಬುದು ಡು ಪ್ಲೆಸಿಸ್‌ ದೂರು.

ರಬಾಡ, ಸ್ಟೇನ್‌ಗೆ ಪೆಟ್ಟು
‘ಶ್ರೀಮಂತ ಐಪಿಎಲ್ ಕೂಟದಲ್ಲಿ ಭಾಗವಹಿಸ ದಂತೆ ಆಟಗಾರರನ್ನು ಸಿಎಸ್‌ಎ ನಿಯಂತ್ರಿಸದೇ ಇರುವುದು ಕಳಪೆ ನಿರ್ವಹಣೆಗೆ ಕಾರಣವಾಗಿದೆ. ಐಪಿಎಲ್ ಆಡುತ್ತಿರುವ ವೇಳೆ ತಂಡದ ಇಬ್ಬರು ಖ್ಯಾತ ವೇಗಿಗಳಾದ ಡೇಲ್ ಸ್ಟೇನ್‌ ಮತ್ತು ಕಾಗಿಸೊ ರಬಾಡ ಗಾಯಗೊಂಡಿದ್ದರು. ರಬಾಡ ವಿಶ್ವಕಪ್‌ನಲ್ಲಿ ಆಡಿದರೆ ಸ್ಟೇನ್‌ ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ವಿಶ್ವಕಪ್‌ನಲ್ಲಿ ರಬಾಡ ಅವರ ನಿರ್ವಹಣೆ ಅತ್ಯಂತ ಕಳಪೆ ಮಟ್ಟದಲ್ಲಿತ್ತು’ ಎಂದು ಡು ಪ್ಲೆಸಿಸ್‌ ಹೇಳಿದ್ದಾರೆ.

ತಂಡದ ಅಗ್ರ ಆಟಗಾರರು ಐಪಿಎಲ್ನಲ್ಲಿ ಆಡುವುದನ್ನು ನಾಯಕ ಡು ಪ್ಲೆಸಿಸ್‌ ಮತ್ತು ಕೆಲವು ಆಟಗಾರರು ವಿರೋಧಿಸಿದ್ದರು. ಐಪಿಎಲ್ ಕೂಟದಲ್ಲಿ ಭಾಗವಹಿಸಲು ಆಟಗಾರರಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಸಿಎಸ್‌ಎ ತಂಡ ವ್ಯವಸ್ಥಾಪಕರ ಜತೆ ಸಭೆಯನ್ನು ನಡೆಸಿತ್ತು. ಆದರೆ ಆಟಗಾರರು ಐಪಿಎಲ್ನಲ್ಲಿ ಆಡಲು ಆಸಕ್ತಿ ವಹಿಸಿದ್ದರಿಂದ ಮಂಡಳಿಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ ಎಂಬುದು ಇವರೆಲ್ಲರ ಆರೋಪ.

Advertisement

Udayavani is now on Telegram. Click here to join our channel and stay updated with the latest news.

Next