Advertisement

ಐಪಿಎಲ್‌ ತಂಡಗಳ ಸಂಖ್ಯೆ; ಇಂದಿನ ಬಿಸಿಸಿಐ ಸಭೆಯಲ್ಲಿ ಇತ್ಯರ್ಥ

11:45 PM Dec 23, 2020 | sudhir |

ಅಹ್ಮದಾಬಾದ್: ಗುರುವಾರ ಬಿಸಿಸಿಐನ 89ನೇ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯಲಿದೆ. ಹಲವು ಕಾರಣಗಳಿಂದ ಇದು ಮಹತ್ವ ಪಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಐಪಿಎಲ್‌ ತಂಡಗಳ ಸಂಖ್ಯೆ 10ಕ್ಕೆ ಏರಿಸುವ ಬಗ್ಗೆ ನಿರ್ಧಾರವಾಗಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪೂರ್ಣ ತೆರಿಗೆವಿನಾಯಿತಿಯನ್ನು ಸರಕಾರದಿಂದ ಪಡೆಯುವ ಕುರಿತು ಖಚಿತ ತೀರ್ಮಾನಕ್ಕೆ ಬರಲಾಗುವುದು. ಆಯ್ಕೆ ಮಂಡಳಿಗೆ ಮೂವರು ಹೆಚ್ಚುವರಿ ಸದಸ್ಯರ ಸೇರ್ಪಡೆ, ಅಧ್ಯಕ್ಷ ಸೌರವ್‌ ಗಂಗೂಲಿ ಮೇಲಿರುವ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಇವೆಲ್ಲ ಚರ್ಚೆಯಾಗುವ ನಿರೀಕ್ಷೆಯಿದೆ.

Advertisement

ಬಿಸಿಸಿಐ ಉಪಾಧ್ಯಕ್ಷರಾಗಿ ರಾಜೀವ್‌ ಶುಕ್ಲಾ ಅಧಿಕೃತವಾಗಿ ಆಯ್ಕೆಯಾಗ ಲಿದ್ದಾರೆ. ಸದ್ಯ ಅವರೊಬ್ಬರೇ ಉಮೇದುವಾರ ರಾಗಿರುವುದರಿಂದ ಅವಿರೋಧ ಆಯ್ಕೆ ನಿರೀಕ್ಷಿತ. ಐಪಿಎಲ್‌ ಮುಖ್ಯಸ್ಥರಾಗಿ ಬೃಜೇಶ್‌ ಪಟೇಲ್‌ ಮುಂದುವರಿಯಲಿದ್ದಾರೆ.

ಐಪಿಎಲ್‌ಗೆ 10 ತಂಡ?
ಮುಂದಿನ ವರ್ಷ ಎಪ್ರಿಲ್‌-ಮೇ ತಿಂಗಳಲ್ಲಿ 14ನೇ ಆವೃತ್ತಿ ಐಪಿಎಲ್‌ ನಡೆಯಲಿದೆ. ಆ ವೇಳೆ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸಲು ಸಾಧ್ಯವೇ? ಅಥವಾ ಸಂಖ್ಯೆಯನ್ನು 10ಕ್ಕೆ ಏರಿಸಲು ಒಪ್ಪಿಗೆ ಪಡೆದು 2022ರಲ್ಲಿ ಇದನ್ನು ಜಾರಿಗೊಳಿಸುವುದೇ? ಇವು ಸದ್ಯ ಬಿಸಿಸಿಐ ಮುಂದಿರುವ ಪ್ರಶ್ನೆ. ಮುಂದಿನ ವರ್ಷ ಐಪಿಎಲ್‌ನ ಮೆಗಾ ಹರಾಜು ಕೂಡ ನಡೆಯಲಿದೆ. ಐಪಿಎಲ್‌ ಕೂಡ ಹತ್ತಿರದಲ್ಲೇ ಇದೆ. ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಿದರೆ ನಿಭಾಯಿಸಲು ಸಾಧ್ಯವೇ? ಇದು ಆತುರದ ನಿರ್ಧಾರವಾಗುತ್ತದೆ ಎಂದು ಬಿಸಿಸಿಐ ಮೂಲಗಳೇ ಹೇಳಿವೆ.

ಗಂಗೂಲಿ ಜಾಹೀರಾತು?
ಸೌರವ್‌ ಗಂಗೂಲಿ ಕೆಲವು ಜಾಹೀರಾತುಗಳಿಗೆ ರಾಯಭಾರಿಯಾಗಿದ್ದಾರೆ. ಅದರಲ್ಲೂ ಮೈ 11ಸರ್ಕಲ್‌ ಎಂಬ ಆನ್‌ಲೈನ್‌ ಬೆಟ್ಟಿಂಗ್‌
ಆ್ಯಪ್‌ಗೆ ಅವರು ರಾಯಭಾರಿ.

ಮತ್ತೂಂದು ಕಡೆ ಸ್ವತಃ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕ ಸ್ಥಾನದಲ್ಲಿ ಡ್ರೀಮ್‌11 ಎಂಬ ಬೆಟ್ಟಿಂಗ್‌ ಆ್ಯಪ್‌ ಇದೆ. ಇದು ಸ್ವಹಿತಾಸಕ್ತಿ ಸಂಘರ್ಷ ಎಂಬ ಆರೋಪಗಳಿವೆ. ಈ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

Advertisement

ಕ್ರಿಕೆಟ್‌ ಸಮಿತಿಗಳ ರಚನೆ
ತಾಂತ್ರಿಕ ಸಮಿತಿ, ತೀರ್ಪುಗಾರರ ಸಮಿತಿ ಸೇರಿದಂತೆ ಹಲವಾರು ಸಮಿತಿಗಳ ರಚನೆಯನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ. ಹಾಗೆಯೇ ಆಯ್ಕೆ ಮಂಡಳಿಗೆ ಮೂವರು ಹೆಚ್ಚುವರಿ ಸದಸ್ಯರ ನೇಮಕ ಮಾಡಬೇಕು. ಇದಕ್ಕಾಗಿ ಮೂವರು ಸದಸ್ಯರಿರುವ ಕ್ರಿಕೆಟ್‌ ಸಲಹಾ ಸಮಿತಿಯ ರಚನೆಯಾಗಲಿದೆ.

ತೆರಿಗೆ ವಿನಾಯಿತಿ ಸಿಗದಿದ್ದರೆ ಟಿ20 ವಿಶ್ವಕಪ್‌ ಸ್ಥಳಾಂತರ!
ಮುಂದಿನ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಆದರೆ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರಕಾರ ನೀಡಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಆಗ್ರಹಿಸಿದೆ. ಸದ್ಯ ಹೀಗೆ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಭಾರತದಲ್ಲಿಲ್ಲ. ಒಂದು ವೇಳೆ ನೀಡದಿದ್ದರೆ ವಿಶ್ವಕಪ್‌ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸುವುದಾಗಿ ಐಸಿಸಿ ಹೇಳಿದೆ. ಬಿಸಿಸಿಐ ಏನು ಮಾಡುತ್ತದೆ ಎನ್ನುವುದೊಂದು ಕುತೂಹಲ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ: ಬಿಸಿಸಿಐ ನಿಲುವು?
2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಅನ್ನು ಸೇರ್ಪಡೆ ಮಾಡಬೇಕೆಂಬ ಕೂಗು ಜಗತ್ತಿನ ಎಲ್ಲ ಕಡೆ ಇದೆ. ಇದಕ್ಕೆ ಬಿಸಿಸಿಐ ಬೆಂಬಲಿಸುವುದೇ, ಇಲ್ಲವೇ ಎನ್ನುವುದು ಇನ್ನೊಂದು ಮುಖ್ಯ ವಿಷಯ. ಒಂದು ವೇಳೆ ಬೆಂಬಲಿಸಿದರೆ ಬಿಸಿಸಿಐ ರಾಷ್ಟ್ರೀಯ ಕ್ರೀಡಾಒಕ್ಕೂಟಗಳ ವ್ಯಾಪ್ತಿಗೆ ಬರುತ್ತದೆ. ಆಗ ಪದೇಪದೇ ಕ್ರೀಡಾ ಸಚಿವಾಲಯದ ಮಧ್ಯಪ್ರವೇಶವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇದನ್ನು ಬಗೆಹರಿಸುವುದು ಹೇಗೆ ಎಂಬುದಕ್ಕೂ ಉತ್ತರ ಕಂಡುಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next