ಮುಂಬೈ: 2025ರ ಐಪಿಎಲ್ (IPL 2025) ಕೂಟಕ್ಕೆ ತಯಾರಿ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಸಿದ್ದತೆ ನಡೆಸುತ್ತಿದೆ. ಕಳೆದ ಕೆಲವು ವಾರಗಳಿಂದ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗೆಗಿನ ನಿಯಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಬಿಸಿಸಿಐ ನಿರ್ಧಾರ ಮಾಡಿದ್ದು, ಅದರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
ಒಂದು ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ಹತ್ತು ತಂಡಗಳಿಗೆ ಐದು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ. ಅಲ್ಲದೆ ರೈಟ್ ಟು ಮ್ಯಾಚ್ (RTM) ಕಾರ್ಡ್ ಅನ್ನು ಈ ಬಾರಿ ಮರಳಿ ತರುತ್ತಿದೆ. ಈ ಬಾರಿ ತಂಡಗಳು ಒಂದು ಆರ್‌ಟಿಎಂ ಕಾರ್ಡ್ ಬಳಸಬಹುದು.
ಐದು ಆಟಗಾರರ ಪೈಕಿ ಎಷ್ಟು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗುವುದು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ ಎಂದು ವರದಿ ತಿಳಿಸಿದೆ. ಹಿಂದಿನ ಆವೃತ್ತಿಗಳಲ್ಲಿ, ಮೂರಕ್ಕಿಂತ ಹೆಚ್ಚು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶವಿರಲಿಲ್ಲ.
ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಐಪಿಎಲ್ ಧಾರಣ ನಿಯಮಗಳ (Retention Rules) ಅಧಿಕೃತ ಘೋಷಣೆಗೆ ಕಾಯಲಾಗುತ್ತಿದೆ. ಇದೇ ವೇಳೆ ಫ್ರಾಂಚೈಸಿಗಳ ಪರ್ಸ್ 110-120 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ವರದಿ ಹೇಳಿದೆ.
ಏನಿದು ಆರ್ ಟಿಎಂ ಕಾರ್ಡ್?
ಹರಾಜಿನ ಸಮಯದಲ್ಲಿ ಯಾವುದೇ ಆಟಗಾರನನ್ನು ಒಂದು ತಂಡವು ನಿರ್ದಿಷ್ಟ ಮೊತ್ತಕ್ಕೆ ಖರೀದಿಸಿದಾಗ ಆ ಆಟಗಾರ ಅದರ ಹಿಂದಿನ ಸೀಸನ್ ನಲ್ಲಿ ಆಡಿದ್ದ ಫ್ರಾಂಚೈಸಿಯು ಆರ್ ಟಿಎಂ ಕಾರ್ಡ್ ತೋರಿಸಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು.