Advertisement

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

01:12 AM Apr 13, 2024 | Team Udayavani |

ಮುಲ್ಲಾನ್ಪುರ: ಸತತ ನಾಲ್ಕು ಗೆಲುವಿನ ಬಳಿಕ ಗುಜರಾತ್‌ ಕೈಯಲ್ಲಿ ಸೋತು ಆಘಾತಕ್ಕೆ ಒಳಗಾಗಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಶನಿವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದು ಗೆಲ್ಲುವ ವಿಶ್ವಾಸದಲ್ಲಿದೆ.

Advertisement

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ರಾಜಸ್ಥಾನ್‌ ತಂಡವು ಗುಜರಾತ್‌ ವಿರುದ್ಧವೂ ಗೆದ್ದು ಸತತ ಐದನೇ ಜಯದ ಉತ್ಸಾಹದಲ್ಲಿತ್ತು. ಆದರೆ ಕೊನೆ ಹಂತ ದಲ್ಲಿ ರಶೀದ್‌ ಖಾನ್‌ ಅವರ ಅಮೋಘ ಬ್ಯಾಟಿಂಗ್‌ ನಿಂದಾಗಿ ಗುಜರಾತ್‌ ತಂಡವು ಕೊನೆ ಎಸೆತದಲ್ಲಿ ಜಯಭೇರಿ ಬಾರಿಸುವಂತಾಯಿತು. ಇದು ರಾಜಸ್ಥಾನಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸತತ ಗೆಲುವಿನ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಂಜು ಸ್ಯಾಮ್ಸನ್‌ ನೇತೃತ್ವದ ತಂಡ ಕೊನೆಯ ಎರಡು ಓವರ್‌ಗಳಲ್ಲಿ ಕಳಪೆಯಾಗಿ ಬೌಲಿಂಗ್‌ ಮಾಡಿರುವುದು ಸೋಲಿಗೆ ಪ್ರಮುಖ ಕಾರಣ ವಾಗಿದೆ. 19ನೇ ಮತ್ತು 20ನೇ ಓವರ್‌ ಎಸೆದ ಕುಲದೀಪ್‌ ಸೆನ್‌ ಮತ್ತು ಆವೇಶ್‌ ಖಾನ್‌ ಒಟ್ಟಾರೆ 12 ಎಸೆತಗಳಲ್ಲಿ 35 ರನ್‌ ಬಿಟ್ಟು ಕೊಟ್ಟಿದ್ದ ರಿಂದ ಗುಜರಾತ್‌ ಗೆಲುವಿನ ಸಂಭ್ರಮ ಆಚರಿಸುವಂತಾಯಿತು.

ಈ ಪಂದ್ಯದಲ್ಲಿ ರಾಜಸ್ಥಾನ ಇನ್ನೊಂದು ತಪ್ಪನ್ನು ಮಾಡಿದೆ. ಅನುಭವಿ ಟ್ರೆಂಟ್‌ ಬೌಲ್ಟ್ ತನ್ನ ನಾಲ್ಕು ಓವರ್‌ಗಳನ್ನು ಪೂರ್ತಿಗೊಳಿಸಲು ಅವಕಾಶವನ್ನೇ ತಂಡ ನೀಡಲಿಲ್ಲ. ಹಿರಿಯ ವೇಗಿ ಬೌಲ್ಟ್ ಕೇವಲ 2 ಓವರ್‌ ಎಸೆದಿದ್ದು ಕೇವಲ 8 ರನ್‌ ನೀಡಿದ್ದರು.
ಪಂಜಾಬ್‌ ಸದ್ಯ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿರುವ ಪಂಜಾಬ್‌ ಮುನ್ನಡೆ ಸಾಧಿಸಲು ತೀವ್ರವಾಗಿ ಹೋರಾಡ ಬೇಕಾಗಿದೆ. ಶಿಖರ್‌ ಧವನ್‌ ನೇತೃತ್ವದ ತಂಡವು ಗೆಲುವಿನ ಟ್ರ್ಯಾಕ್‌ಗೆ ಬರಲು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಬೇಕಾಗಿದೆ.

ಇಷ್ಟರವರೆಗಿನ ಪಂದ್ಯಗಳಲ್ಲಿ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ತಂಡವನ್ನು ಆಧರಿಸಿದ್ದರು. ಆದರೆ ಆರಂಭಿಕ ಜಾನಿ ಬೇರ್‌ಸ್ಟೋ ಜಿತೇಶ್‌ ಶರ್ಮ ಅವರಿಂದ ನಿರೀಕ್ಷಿತ ನಿರ್ವಹಣೆ ದಾಖಲಾಗಿಲ್ಲ. ಬೇರ್‌ಸ್ಟೋ ಆಡಿದ 5 ಪಂದ್ಯಗಳಿಂದ ಕೇವಲ 81 ರನ್‌ ಗಳಿಸಿದ್ದರೆ ಜಿತೇಶ್‌ 77 ರನ್‌ ಹೊಡೆದಿದ್ದರು. ಬೌಲಿಂಗ್‌ನಲ್ಲಿ ಸ್ಯಾಮ್‌ ಕರನ್‌ ಮಾರಕ ದಾಳಿ ಸಂಘಟಿಸಬೇಕಾಗಿದೆ. ಗಾಯಗೊಂಡಿರುವ ಲಿಯಮ್‌ ಲಿವಿಂಗ್‌ಸ್ಟೋಮ್‌ ಅವರ ಅನುಪಸ್ಥಿತಿ ತಂಡಕ್ಕೆ ಸ್ವಲ್ಪಮಟ್ಟಿನ ಹೊಡೆತ ನೀಡಿದೆ.

Advertisement

ಪಿಚ್‌ ವರದಿ
ಮೊಹಾಲಿ ಪಿಚ್‌ ಅತೀ ವೇಗದ ಮ ತ್ತು ವೇಗಿಗಳಿಗೆ ಹೆಚ್ಚಿನ ಬೌನ್ಸ್‌ ನೀಡುತ್ತದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ನಿರ್ವಹಣೆ ನೀಡಲು ಒದ್ದಾಡುತ್ತಾರೆ. ಅದರಲ್ಲಿಯೂ ಹೊಸ ಚೆಂಡಿ ನೊಂದಿಗೆ ಆಡಲು ಕಷ್ಟಪಡುತ್ತಾರೆ. ಮಂಜಿನ ವಾತಾವರಣವೂ ಆಟಗಾರರಿಗೆ ತೊಂದರೆ ನೀಡುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಟಾಸ್‌ ಗೆದ್ದ ತಂಡವು ಮೊದಲು ಬೌಲಿಂಗ್‌ ಮಾಡಲಿದೆ.ಸಂಜೆಯ ವೇಳೆ ಇಲ್ಲಿನ ತಾಪಮಾನವು 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಮಳೆ ಬರುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next