Advertisement
ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್-19 ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸರಕಾರ ಕಠಿನ ಕ್ರಮಗಳನ್ನು ತರುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಐಪಿಎಲ್ ಮುಂದೂಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವುದೊಂದೆ ಬಾಕಿ. ಮಾರ್ಚ್ 29ರಿಂದಲೇ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಸೋಂಕಿನಿಂದ ಎಪ್ರಿಲ್ 15ಕ್ಕೆ ಬಿಸಿಸಿಐ ದಿನಾಂಕ ಮುಂದೂಡಿತ್ತು. ಇದೀಗ ಸರಕಾರ ಎ. 30ರ ವರೆಗೆ ಲಾಕ್‌ಡೌನ್ ವಿಸ್ತರಿಸಿದ್ದರಿಂದ ಐಪಿಎಲ್ ಕೂಡ ಮುಂದೂಡುವುದು ಸ್ಪಷ್ಟವಾಗಿದೆ.
ಐಪಿಎಲ್ ಟೂರ್ನಿಯನ್ನು ರದ್ದು ಮಾಡು ವುದಿಲ್ಲ. ಒಂದು ವೇಳೆ ಮಾಡಿದ್ದೇ ಆದಲ್ಲಿ 3,000 ಕೋಟಿ ರೂ. ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಐಪಿಎಲ್ ನಡೆಸಲು ಎರಡು ಹಾದಿಗಳು ನಮ್ಮ ಮುಂದೆ ಇವೆ. ಒಂದು ಸೆಪ್ಟಂಬರ್ ಅಥವಾ ಅಕ್ಟೋಬರ್ ಆರಂಭದಲ್ಲಿ ಅಂದರೆ, ಐಸಿಸಿ ಟಿ20 ವಿಶ್ವಕಪ್ ಆರಂಭವಾಗುವ ಮುನ್ನ ಆಯೋಜಿಸಬೇಕಾಗುತ್ತದೆ. ಇದೂ ಸಾಧ್ಯವಾಗದಿದ್ದರೆ ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯ ಹಾಗೂ ಪಾಲುದಾರರು ಒಪ್ಪಿಕೊಂಡು ಟಿ20 ವಿಶ್ವಕಪ್ ಮುಂದೂಡುವ ಪ್ರಸ್ತಾವವನ್ನು ಇರಿಸಿ ಐಪಿಎಲ್ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್ ಮರೆತುಬಿಡಿ
ಈ ಬಾರಿಯ ಐಪಿಎಲ್ ನಡೆಯುವ ಸಾಧ್ಯತೆಗಳು ತೀರಾ ಮಂಕಾಗಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಕೊಂಡಿದ್ದಾರೆ. ಜಗತ್ತಿನಾದ್ಯಂತ ಜನಜೀವನಕ್ಕೆ ಸಂಚಕಾರ ಬಂದಿರುವಾಗ ಕ್ರೀಡೆಯ ಭವಿಷ್ಯ ಎಲ್ಲಿದೆ. ಈಗಿನ ಸನ್ನಿವೇಶದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ, ವಿಮಾನ ನಿಲ್ದಾಣಗಳು ಮುಚ್ಚಿವೆ, ಜನರು ಮನೆಯಲ್ಲಿಯೇ ಇದ್ದಾರೆ, ಕಚೇರಿಗಳು ಲಾಕ್‌ಡೌನ್ ಆಗಿವೆ. ಯಾರೂ ಎಲ್ಲಿಗೂ ಹೋಗದಂತಾಗಿದೆ. ಮೇ ತಿಂಗಳ ಮಧ್ಯದವರೆಗೂ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಒಂದು ವೇಳೆ ಐಪಿಎಲ್ ನಡೆಸಿದರೆ ಆಟಗಾರರನ್ನು ಎಲ್ಲಿಂದ ಕರೆತರುವುದು, ಆಟಗಾರರು ಏಲ್ಲಿ ಪ್ರಯಾಣಿಸುತ್ತಾರೆ, ಪ್ರಪಂಚದಲ್ಲಿ ಎಲ್ಲಿಯೂ ಯಾವುದೇ ರೀತಿಯ ಕ್ರೀಡೆಯ ಪರ ಸನ್ನಿವೇಶ ಇಲ್ಲ. ಸದ್ಯಕ್ಕೆ ಐಪಿಎಲ್ ಮರೆತುಬಿಡಿ ಎಂದು ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.