ಮುಂಬಯಿ: ನೂತನ ನಾಯಕ ಹಾರ್ದಿಕ್ ಪಾಂಡ್ಯ ನೇತ್ವತ್ವದ ಮುಂಬೈ ಇಂಡಿಯನ್ಸ್ ತಂಡವು ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಸೋತಿರುವ ಮುಂಬೈ ತಂಡವು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಐದು ಬಾರಿಯ ಪ್ರಶಸ್ತಿ ಗೆಲುವಿನ ನಾಯಕ ರೋಹಿತ್ ಶರ್ಮ ಅವರ ಬದಲಿಗೆ ಪಾಂಡ್ಯ ಅವರು ನೇತೃತ್ವ ವಹಿಸಿದ್ದರೂ ಐಪಿಎಲ್ ಅಭಿಯಾನದಲ್ಲಿ ಮುಂಬೈಯ ಸೋಲಿನ ಆರಂಭ ಮುಂದು ವರಿದಿದೆ. ಆರಂಭದ ಎರಡು ಪಂದ್ಯಗಳಲ್ಲಿ ಗುಜರಾತ್ ಮತ್ತು ಸನ್‌ರೈಸರ್ ಹೈದರಾಬಾದ್ ವಿರುದ್ಧ ಮುಂಬೈ ಸೋತಿರುವ ಕಾರಣ ಪಾಂಡ್ಯ ನಾಯಕತ್ವಕ್ಕೆ ಎಲ್ಲ ಕಡೆಗಳಿಂದ ಟೀಕೆಗಳು ಕೇಳಿ ಬರುತ್ತಿವೆ.
ಪಾಂಡ್ಯ ಅವರ ಮುಂಬೈ ತಂಡವು ಇನ್ನಾದರೂ ಗೆಲುವಿನ ಟ್ರ್ಯಾಕ್‌ಗೆ ಮರಳಬೇಕಾಗಿದೆ. ಗೆಲುವಿನ ಮೂಲಕ ತಮ್ಮ ರನ್‌ಧಾರಣೆಯನ್ನು ಉತ್ತಮಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಸದ್ಯ ಎಲ್ಲ ತಂಡ ಗಳಿಗಿಂತ ನಿಕೃಷ್ಟ ರನ್‌ಧಾರಣೆಯನ್ನು ಮುಂಬೈ ಹೊಂದಿದೆ. ಮುಂಬೈಯ ಎದುರಾಳಿ ರಾಜಸ್ಥಾನ್ ರಾಯಲ್ಸ್ ಸದ್ಯ ಆಡಿದ 2 ಪಂದ್ಯಗಳಲ್ಲಿ ಗೆದ್ದಿದ್ದು ಗೆಲುವಿನ ಅಭಿಯಾನ ಮುಂದು ವರಿಸುವ ವಿಶ್ವಾಸದಲ್ಲಿದೆ. ಹೀಗಾಗಿ ಈ ಹೋರಾಟ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.
ರಾಜಸ್ಥಾನ್ ವಿರುದ್ಧ ಕಳೆದ ಐದು ಪಂದ್ಯಗಳಲ್ಲಿ 4 ಗೆಲುವು 1 ಸೋಲಿನ ದಾಖಲೆ ಹೊಂದಿರುವ ಮುಂಬೈ ತಂಡವು ಸೋಮವಾರದ ಹೋರಾಟದಲ್ಲಿಯೂ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ. ಆದರೆ ಸಂಜು ಸ್ಯಾಮ್ಸನ್ ಪಡೆ ಅಷ್ಟೊಂದು ಸುಲಭವಾಗಿ ಶರಣಾಗುವ ಸಾಧ್ಯೆತೆಯಿಲ್ಲ. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಕಳೆದ ಪಂದ್ಯದ ಹೀರೋ ರಿಯಾನ್ ಪರಾಗ್, ಶಿಮ್ರಾನ್ ಹೆಟ್‌ಮೈರ್ ಬ್ಯಾಟಿಂಗ್‌ನಲ್ಲಿ ಮಿಂಚುವ ಸಾಧ್ಯತೆಯಿದೆ. ತಂಡದ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ.
ಮುಂಬೈ ತಂಡವೂ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಸೂರ್ಯಕುಮಾರ್ ಯಾದವ್ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ ರೋಹಿತ್ ಶರ್ಮ, ಪಾಂಡ್ಯ, ಇಶಾನ್ ಕಿಶನ್, ಪೀಯೂಷ್ ಚಾವ್ಲಾ, ತಿಲಕ್ ವರ್ಮ, ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುವ ಸಾಧ್ಯತೆಯಿದೆ. ಬರ್ಗರ್ ಮತ್ತು ಟ್ರೆಂಟ್ ಬೌಲ್ಟ್ ವೇಗದ ದಾಳಿಯ ನೇತೃತ್ವ ವಹಿಸಲಿದ್ದರೆ ಆರ್. ಅಶ್ವಿನ್, ಯಜುವೇಂದ್ರ ಚಹಲ್ ಸ್ಪಿನ್ ಮೋಡಿಯಿಂದ ಎದುರಾಳಿಯನ್ನು ಕಟ್ಟಿಹಾಕಲು ಸಮರ್ಥರಿದ್ದಾರೆ.
ಬ್ಯಾಟಿಂಗ್ ಸ್ನೇಹಿ ಪಿಚ್
ವಾಂಖೆಡೆಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಪಿಚ್ ಆದ ಬಳಿಕ ಚೆಂಡು ಬ್ಯಾಟ್ ಸನಿಹ ಬರುತ್ತದೆ. ಸ್ಪಿನ್ನರ್‌ಗಳು ಇಲ್ಲಿ ಪರಿಣಾಮಕಾರಿ ದಾಳಿ ನಡೆಸುವ ಸಾಧ್ಯತೆಯಿದೆ. ಚಿನ್ನಸ್ವಾಮಿಯಂತೆ ಈ ತಾಣದಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳು ದಾಖಲಾಗಿವೆ.
ಈ ಪಿಚ್‌ನಲ್ಲಿ ಇಷ್ಟರವರೆಗೆ ಐಪಿಎಲ್‌ನ 109 ಪಂದ್ಯಗಳು ನಡೆದಿವೆ. ಚೇಸಿಂಗ್ ವೇಳೆ ತಂಡವು 59 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ 50 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಒಲಿಸಿಕೊಂಡಿದೆ. 2015ರಲ್ಲಿ ಆರ್‌ಸಿಬಿ ಪೇರಿಸಿದ ಒಂದು ವಿಕೆಟಿಗೆ 235 ರನ್ ಈ ತಾಣದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ಮಳೆ ಇಲ್ಲ
ಬಿಸಿ ಮತ್ತು ಸೆಕೆಯ ವಾತಾವರಣ ವಿರಲಿದೆ. ಸಂಜೆ ವೇಳೆ 26 ಡಿ.ಸೆಲ್ಸಿಯಸ್ ತಾಪಮಾನ ಇರ ಲಿದ್ದು ಮಳೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ತಲಾ 20 ಓವರ್‌ಗಳ ಪಂದ್ಯ ಸಾಗಲಿದೆ.