Advertisement

ಲಕ್ಕಿ ಮುಂಬೈ ಇಂಡಿಯನ್ಸ್‌ : ಈ ಸಲವೂ ಫೇವರಿಟ್‌

02:45 AM Apr 01, 2021 | Team Udayavani |

ಐಪಿಎಲ್‌ ಇತಿಹಾಸದ ಲಕ್ಕಿ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್‌. ಅಷ್ಟೇ ಬಲಿಷ್ಠ ತಂಡವೂ ಹೌದು. ಸರ್ವಾಧಿಕ 5 ಸಲ ಐಪಿಎಲ್‌ ಟ್ರೋಫಿ ಎತ್ತಿದ ಹೆಗ್ಗಳಿಕೆ ಮುಂಬೈ ತಂಡದ್ದು. ಎರಡು ಸಲ ಫೈನಲ್‌ನಲ್ಲಿ ಒಂದು ರನ್‌ ಅಂತರದ ಗೆಲುವು ಸಾಧಿಸಿದ್ದು ತಂಡದ ಅದೃಷ್ಟಕ್ಕೆ ಸಾಕ್ಷಿ. ಒಮ್ಮೆ ಮಾತ್ರ ಅದು ಫೈನಲ್‌ನಲ್ಲಿ ಎಡವಿದೆ.

Advertisement

ಮುಂಬೈ ತಂಡದ್ದು ಯಾವತ್ತೂ ಸೋಲಿನ ಆರಂಭ. ಸತತ ಎಡವಿ, ಇನ್ನೇನು ಬಹಳ ಬೇಗ ಕೂಟದಿಂದ ನಿರ್ಗಮಿಸುತ್ತದೆ ಎನ್ನುವಾಗಲೇ ಆದು ಫೀನಿಕ್ಸ್‌ನಂತೆ ಎದ್ದು ನಿಲ್ಲುವುದು, ನಾಕೌಟ್‌ ಪ್ರವೇಶಿಸುವುದು, ಫೈನಲ್‌ಗೆ ಲಗ್ಗೆ ಇಡುವುದು, ಟ್ರೋಫಿ ಎತ್ತುವುದೆಲ್ಲ ಐಪಿಎಲ್‌ನ ಮಾಮೂಲು ವಿದ್ಯಮಾನಗಳೇ ಆಗಿವೆ. ಈ ಸಲವೂ ಮುಂಬೈ ಫೇವರಿಟ್‌ ಆಗಿಯೇ ಕಣಕ್ಕಿಳಿಯಲಿದೆ.

ತಂಡದ ಬಲವೇ ಬ್ಯಾಟಿಂಗ್‌ : 

ರೋಹಿತ್‌ ಶರ್ಮ ಅವರ ಸಮಚಿತ್ತದ ಕ್ಯಾಪ್ಟನ್ಸಿ, ಬಿಗ್‌ ಹಿಟ್ಟರ್‌ಗಳನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್‌ ಸರದಿ ಮುಂಬೈ ತಂಡದ ಆಸ್ತಿ. ತಂಡವೊಂದರಲ್ಲಿ ಸೀಮಿತ ಸಂಖ್ಯೆಯ ಹೊಡಿಬಡಿ ಆಟಗಾರರಿದ್ದರೆ, ಮುಂಬೈ ತಂಡದಲ್ಲಿ ಎಲ್ಲರೂ ಮುನ್ನುಗ್ಗಿ ಬಾರಿಸುವವರೇ. ಓಪನಿಂಗ್‌ಗೆ ರೋಹಿತ್‌ ಜತೆಗೆ ಡಿ ಕಾಕ್‌, ಲಿನ್‌; ಮಧ್ಯಮ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌, ಸೂರ್ಯಕುಮಾರ್‌, ಪೊಲಾರ್ಡ್‌, ತಿವಾರಿ, ಆಲ್‌ರೌಂಡರ್‌ಗಳಾದ ಪಾಂಡ್ಯ ಬ್ರದರ್ ಸಿಡಿದು ನಿಂತರೆ ರನ್‌ ಪ್ರವಾಹಕ್ಕೇನೂ ಅಡ್ಡಿ ಇಲ್ಲ. ಏಕಾಂಗಿಯಾಗಿ ಪಂದ್ಯವನ್ನು ಗೆದ್ದುಕೊಡಬಲ್ಲ ಸಾಮರ್ಥ್ಯ ಇವರಿಗಿದೆ. ನಿಶ್ಚಿಂತೆಯಿಂದ ಎಷ್ಟೇ ದೊಡ್ಡ ಮೊತ್ತವನ್ನೂ ಚೇಸ್‌ ಮಾಡಲು ಇಂಥದೊಂದು ಬ್ಯಾಟಿಂಗ್‌ ಲೈನ್‌ಅಪ್‌ ನೆರವಾಗಲಿದೆ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ, ಬೌಲ್ಟ್, ಕೋಲ್ಟರ್‌ ನೈಲ್‌ ಘಾತಕವಾಗಿ ಪರಿಣಮಿಸಬಲ್ಲರು. ಆದರೆ ಮಾಲಿಂಗ ಸ್ಥಾನ ತುಂಬಬಲ್ಲ ಬೌಲರ್‌ ಇನ್ನೂ ಸಿಕ್ಕಿಲ್ಲ!

Advertisement

ಸ್ಪಿನ್‌ ದೌರ್ಬಲ್ಯ : 

ಮುಂಬೈ ತಂಡದ ಸ್ಪಿನ್‌ ವಿಭಾಗ ನಿರೀಕ್ಷಿತ ಮಟ್ಟದಲ್ಲಿಲ್ಲ. ಕೃಣಾಲ್‌, ರಾಹುಲ್‌ ಚಹರ್‌, ಜಯಂತ್‌ ಯಾದವ್‌ ಜತೆಗೆ ಈ ಬಾರಿ ಚಾವ್ಲಾಗೆ ಬಲೆ ಬೀಸಲಾಗಿದೆ.

ತಂಡದ “ಎ ಸೈಡ್‌’ ಬ್ಯಾಟಿಂಗ್‌ ಬಲಿಷ್ಠ ನಿಜ. ಆದರೆ ಇವರ ಸ್ಥಾನಕ್ಕೆ ಇವರಷ್ಟೇ ಸಾಮರ್ಥ್ಯದ ಪರ್ಯಾಯ ಆಯ್ಕೆಗಳಿಲ್ಲ. ತಂಡದ ಮೀಸಲು ಸಾಮರ್ಥ್ಯ ಸಾಧಾರಣ.

ತಂಡದ ಹೀರೋಸ್‌ : 

ಬ್ಯಾಟಿಂಗ್‌ ಸರದಿಯಲ್ಲಿ ಎಲ್ಲರೂ ಹೀರೋಗಳೇ. ಇವರಲ್ಲಿ ರೋಹಿತ್‌, ಪೊಲಾರ್ಡ್‌ಗೆ ಅಗ್ರಸ್ಥಾನ. ರೋಹಿತ್‌ ನಾಯಕತ್ವದ ಜವಾಬ್ದಾರಿಯ ನಡುವೆಯೂ ಅತ್ಯಧಿಕ 213 ಸಿಕ್ಸರ್‌ ಜತೆಗೆ 5,230 ರನ್‌ ಪೇರಿಸಿದ್ದಾರೆ. ಪೊಲಾರ್ಡ್‌ 3,023 ರನ್‌, 198 ಸಿಕ್ಸರ್‌ ಎತ್ತಿದ್ದಾರೆ.

ಉದಯೋನ್ಮುಖ ಪ್ರತಿಭೆ : 

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮೊದಲ ಸಲ ಐಪಿಎಲ್‌ ಆಡಲಿದ್ದು, ತಂಡದ ಆಕರ್ಷಣೆಯಾಗಿದ್ದಾರೆ.

ತಂಡ :

ರೋಹಿತ್‌ ಶರ್ಮ (ನಾಯಕ), ಆ್ಯಡಂ ಮಿಲೆ°, ಆದಿತ್ಯ ತಾರೆ, ಅನ್‌ಮೋಲ್‌ಪ್ರೀತ್‌ ಸಿಂಗ್‌, ಅನುಕೂಲ್‌ ರಾಯ್‌, ಅರ್ಜುನ್‌ ತೆಂಡುಲ್ಕರ್‌, ಕ್ರಿಸ್‌ ಲಿನ್‌, ಧವಳ್‌ ಕುಲಕರ್ಣಿ, ಹಾರ್ದಿಕ್‌ ಪಾಂಡ್ಯ, ಇಶಾನ್‌ ಕಿಶನ್‌, ಜೇಮ್ಸ್‌ ನೀಶಮ್‌, ಜಸ್‌ಪ್ರೀತ್‌ ಬುಮ್ರಾ, ಜಯಂತ್‌ ಯಾದವ್‌, ಪೊಲಾರ್ಡ್‌, ಕೃಣಾಲ್‌ ಪಾಂಡ್ಯ, ಮಾರ್ಕೊ ಜೆನ್ಸೆನ್‌, ಮೊಹ್ಸಿನ್‌ ಖಾನ್‌, ನಥನ್‌ ಕೋಲ್ಟರ್‌ ನೈಲ್‌, ಪೀಯೂಷ್‌ ಚಾವ್ಲಾ, ಕ್ವಿಂಟನ್‌ ಡಿ ಕಾಕ್‌, ರಾಹುಲ್‌ ಚಹರ್‌, ಸೌರಭ್‌ ತಿವಾರಿ, ಸೂರ್ಯಕುಮಾರ್‌ , ಟ್ರೆಂಟ್‌ ಬೌಲ್ಟ್, ಯುದ್ವೀರ್‌ ಸಿಂಗ್‌.

ಕೋಚ್‌: ಮಾಹೇಲ ಜಯವರ್ಧನೆ.

 

ಚಾಂಪಿಯನ್‌: 05 :

 2013: ಚೆನ್ನೈ ವಿರುದ್ಧ 23 ರನ್‌ ಜಯ

 2015: ಚೆನ್ನೈ ವಿರುದ್ಧ 41 ರನ್‌ ಜಯ

 2017: ಪುಣೆ ವಿರುದ್ಧ 1 ರನ್‌ ಜಯ

 2019: ಚೆನ್ನೈ ವಿರುದ್ಧ 1 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next