ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿಗೆ (Mega Auction) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ತಯಾರಿ ಮಾಡುತ್ತಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಮೆಗಾ ಹರಾಜು ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ಈ ಬಾರಿ ತಂಡಗಳು ತಮ್ಮಲ್ಲಿ ಕೆಲವೇ ಆಟಗಾರರನ್ನು ಊಳಿಸಿಕೊಂಡು ಉಳಿದ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಲಿದೆ.
ಈ ಬಾರಿಯ ಮೆಗಾ ಹರಾಜು ಕಾರ್ಯಕ್ರಮ ಭಾರತದಲ್ಲಿ ನಡೆಯುವುದಿಲ್ಲ. ಸೌದಿ ಅರೇಬಿಯಾದ ರಿಯಾದ್ ನಲ್ಲಿ ಐಪಿಎಲ್ 2025 ಮೆಗಾ ಹರಾಜನ್ನು ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ. ಈ ನಿರ್ಧಾರವು ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ, ಮಾತ್ರವಲ್ಲದೆ ಕ್ರೀಡಾ ಪ್ರಪಂಚದ ಕುತೂಹಲಕ್ಕೆ ಕಾರಣವಾಗಿದೆ.
ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ನಿಗದಿಪಡಿಸಲಾಗಿದೆ. ಈ ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಲಿದೆ. ಇದೇ ದಿನ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತವು ಟೆಸ್ಟ್ ಪಂದ್ಯ ಆಡುತ್ತಿರುತ್ತದೆ.
ಬಿಸಿಸಿಐ ಅಧಿಕಾರಿಗಳು ಸಂಭಾವ್ಯ ಸ್ಥಳಗಳಿಗೆ ಪ್ರವಾಸ ಮಾಡಿದ ನಂತರ ಐಪಿಎಲ್ 2025 ಮೆಗಾ ಹರಾಜನ್ನು ಆಯೋಜಿಸಲು ರಿಯಾದ್ ಆಯ್ಕೆಯಾಗಿದೆ ಎಂದು ವರದಿ ಹೇಳಿದೆ. ಸಿಂಗಾಪುರ, ಲಂಡನ್ ಮತ್ತು ಜೆಡ್ಡಾದಂತಹ ನಗರಗಳ ಹೆಸರು ಕೂಡಾ ಕೇಳಿಬಂದಿತ್ತು. ಕಳೆದ ವರ್ಷ ದುಬೈನಲ್ಲಿ ನಡೆದ ಈವೆಂಟ್ ನ ನಂತರ ಸತತ ಎರಡನೇ ವರ್ಷ ಹರಾಜನ್ನು ಭಾರತದ ಹೊರಗೆ ನಡೆಸಲಾಗುತ್ತಿದೆ.