ಹೊಸದಿಲ್ಲಿ: ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪರಿಣಾಮ ಐಪಿಎಲ್ ಪಂದ್ಯಗಳ ಮೇಲೂ ಆಗಿದ್ದು, ಅಗತ್ಯ ಬಿದ್ದರೆ ಚೆನ್ನೈಯಲ್ಲಿ ನಡೆಯಬೇಕಿರುವ ಎಲ್ಲ ಪಂದ್ಯಗಳನ್ನೂ ಸ್ಥಳಾಂತರಿಸಬಹುದೇ ಎಂದು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಕೇಳಿದ್ದು, ಅಂತಿಮ ನಿರ್ಧಾರವನ್ನು ಸ್ಥಳೀಯ ಫ್ರಾಂಚೈಸಿಗೆ ವಹಿಸಿದೆ.
ಮಂಗಳವಾರ ನಡೆದ ಕೋಲ್ಕತಾ ವಿರುದ್ಧದ ಪಂದ್ಯದ ವೇಳೆ ರವೀಂದ್ರ ಜಡೇಜ ಅವರತ್ತ ಕಿಡಿಗೇಡಿ ಗಳು ಶೂ ಎಸೆದಿದ್ದರು. ಪರಿಸ್ಥಿತಿ ಗಮನಿಸಿರುವ ಬಿಸಿಸಿಐ ಪಂದ್ಯ ಸ್ಥಳಾಂತರಕ್ಕೆ ನಾಲ್ಕು ಮೈದಾನಗಳನ್ನು ಗುರುತಿಸಿ, ಅಂತಿಮ ನಿರ್ಧಾರ ನಿಮ್ಮದು ಎಂದು ಚೆನ್ನೈ ಸೂಪರ್ ಕಿಂಗ್ ಮಾಲಕರಿಗೆ ತಿಳಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣ, ಮಹಾರಾಷ್ಟ್ರದ ಪುಣೆ, ಗುಜರಾತ್‌ನ ರಾಜ್‌ಕೋಟ್, ಕೇರಳದ ತಿರುವನಂತ ಪುರದಲ್ಲಿ ಸ್ಥಳೀಯ ಪಂದ್ಯಗಳನ್ನು ಆಡಿಸಲು ಹೋಮ್ ಗ್ರೌಂಡ್ ಆಗಿ ಆಯ್ದುಕೊಳ್ಳಲು ಬಿಸಿಸಿಐ ತಿಳಿಸಿದೆ. ಈ ಪೈಕಿ ವಿಶಾಖಪಟ್ಟಣ ಕುರಿತು ಸಿಎಸ್‌ಕೆ ಆಸಕ್ತಿ ತೋರಿದೆ.
ಆದರೂ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಪರಿಸ್ಥಿತಿ ಅವಲೋಕಿಸಿ ಪಂದ್ಯ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಿ ಎಂದು ಚೆನ್ನೈ ಸೂಪರ್ ಕಿಂಗ್ಸ್‌ಗೆ ತಿಳಿಸಿದ್ದೇವೆ’ ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದರು.
ಹಲ್ಲೆಗೆ ರಜನಿಕಾಂತ್ ಆಕ್ಷೇಪ: ಐಪಿಎಲ್ ಪಂದ್ಯದ ವೇಳೆ ನಡೆದ ಪ್ರತಿಭಟನೆಯಲ್ಲಿ ಮೂವರು ಪೊಲೀಸರ ಮೇಲೆ ದಾಳಿ ನಡೆದಿರುವುದನ್ನು ನಟ ರಜನೀಕಾಂತ್ ಆಕ್ಷೇಪಿಸಿದ್ದಾರೆ. ಸಮವಸ್ತ್ರ ಧರಿಸಿದ ವ್ಯಕ್ತಿಯ ಮೇಲೆ ದಾಳಿ ನಡೆಸಿರುವುದು ಹಿಂಸೆಯ ಕ್ರೂರ ರೂಪ ಎಂದು ಟ್ವೀಟ್ ಮಾಡಿದ್ದಾರೆ. ರಜನಿಕಾಂತ್ ಹೇಳಿಕೆಗೆ ಸಿನಿ ಪ್ರಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಆಡಳಿತಾರೂಢ ಎಐಎಡಿಎಂಕೆ ಮುಖಂಡರು ಸ್ವಾಗತಿಸಿದ್ದಾರೆ.
ಪುದುಚೇರಿಯಲ್ಲಿ ಬಂದ್: ಕಾವೇರಿ ಜಲ ಮಂಡಳಿ ರಚನೆಗೆ ಆಗ್ರಹಿಸಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬುಧವಾರ ಬಂದ್ ನಡೆಸಲಾಗಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷ ಬಂದ್ ಕರೆ ನೀಡಿತ್ತು. ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡಿತ್ತು. ಈ ನಡುವೆ ಜಿಪ್‌ಮರ್ ಎಂಬಲ್ಲಿ ರೈಲು ರೋಖೋ ವೇಳೆ ಹೈಟೆನ್ಸ್ನ್ ತಂತಿ ತಗುಲಿ ಪ್ರತಿಭಟನಕಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.