Advertisement
ಐಪಿಎಲ್‌ನಲ್ಲಿ ಒಮ್ಮೆಯೂ ಫೈನಲ್‌ಗೇರದ ತಂಡ ಯಾವುದು? ಐಪಿಎಲ್‌ನಲ್ಲಿ ದ.ಆಫ್ರಿಕಾವನ್ನು ಹೋಲುವ ನತದೃಷ್ಟ ತಂಡ ಯಾವುದು? ಉತ್ತರ: ಡೆಲ್ಲಿ ಡೇರ್ ಡೆವಿಲ್ಸ್. ಐಪಿಎಲ್‌ನಲ್ಲಿ ಸದ್ಯ ಆಡುತ್ತಿರುವ ಉಳಿದೆಲ್ಲ ತಂಡಗಳು ಒಂದು ಬಾರಿಯಾದರೂ ಫೈನಲ್ ತಲುಪಿವೆ. 5 ತಂಡಗಳು ಪ್ರಶಸ್ತಿ ಗೆದ್ದಿವೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದುರದೃಷ್ಟವಂತ ತಂಡವೆಂದರೆ ಡೆಲ್ಲಿ ಡೆವಿಲ್ಸ್ ಮಾತ್ರ! ಈ ತಂಡವನ್ನು ಐಪಿಎಲ್‌ನ ದ.ಆಫ್ರಿಕಾ ತಂಡವೆನ್ನಬಹುದು. ಎಲ್ಲ ಸಾಮರ್ಥ್ಯವಿದ್ದರೂ ವಿಶ್ವಕಪ್ ಗೆಲ್ಲುವಲ್ಲಿ ಎಡವಿರುವ ದ.ಆಫ್ರಿಕಾದಂತೆ ಡೆಲ್ಲಿ ಡೆವಿಲ್ಸ್ ಕೂಡ ಯೋಗ್ಯತೆ ಇದ್ದರೂ ಕಪ್ಪನ್ನು ಮಾತ್ರ ಪ್ರತಿಬಾರಿ ಬಿಟ್ಟುಕೊಡುತ್ತಲೇ ಬಂದಿದೆ.
ವೀರೇಂದ್ರ ಸೆಹವಾಗ್ ಡೆಲ್ಲಿ ಡೆವಿಲ್ಸ್‌ಗೆ ನಾಯಕರಾಗಿದ್ದಾಗ ಆ ತಂಡ ಶ್ರೇಷ್ಠ ಎನ್ನಿಸುವಂತಹ ಸಾಧನೆ ಮಾಡಿತ್ತು. ಐಪಿಎಲ್ ಆರಂಭದ ಮೊದಲೆರಡು ವರ್ಷಗಳಲ್ಲಿ ಅಂದರೆ 2008, 2009ರಲ್ಲಿ ಈ ತಂಡ ಸೆಮಿಫೈನಲ್‌ಗೇರಿತ್ತು (ಆಗ ಐಪಿಎಲ್‌ನಲ್ಲಿ ಪ್ಲೇಆಫ್ ವ್ಯವಸ್ಥೆ ಇರಲಿಲ್ಲ). ಆಗ ನಾಯಕರಾಗಿದ್ದ ವೀರೇಂದ್ರ ಸೆಹವಾಗ್ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಐಪಿಎಲ್‌ನಲ್ಲಿ ಸತತ 5 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಸೆಹವಾಗ್ ಪಡೆದುಕೊಂಡಿದ್ದು ಇದೇ ಹಂತದಲ್ಲಿ. 2010ರಲ್ಲಿ ಸೆಹವಾಗ್ ತಾವೇ ನಾಯಕತ್ವ ಬಿಟ್ಟುಕೊಟ್ಟರು. ನಂತರ ನಾಯಕ ಪಟ್ಟಕ್ಕೆ ಏರಿದರು ಗೌತಮ್ ಗಂಭೀರ್, ಅವರ ಅವಧಿಯಲ್ಲಿ ತಂಡ ಲೀಗ್ ಹಂತದಲ್ಲೇ ಹೊರಬಿತ್ತು. 2011ರಲ್ಲಿ ಗಂಭೀರ್ ಕೋಲ್ಕತಾ ನೈಟ್‌ರೈಡರ್ಸ್ ತಂಡದ ನಾಯಕರಾದ ಪರಿಣಾಮ ಮತ್ತೆ ನಾಯಕತ್ವ ಸೆಹವಾಗ್ ಹೆಗಲಿಗೇರಿತು. ಆ ವರ್ಷವೂ ತಂಡದ ಸ್ಥಿತಿ ಸುಧಾರಿಸಲಿಲ್ಲ. 2012ರಲ್ಲಿ ಸೆಹವಾಗ್ ಸಾಹಸದಿಂದ ಮತ್ತೆ ಪ್ಲೇಆಫ್ಗೇರಿತು. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂಬ ಖ್ಯಾತಿಯಿದ್ದರೂ ದುರಾದೃಷ್ಟವಶಾತ್ ಪ್ಲೇಆಫ್ನಲ್ಲಿ ಎರಡೂ ಪಂದ್ಯ ಸೋತು ಹೋಯಿತು! ಇದೇ ಕೊನೆ ಅಲ್ಲಿಂದ ಇಲ್ಲಿಯವರೆಗೆ ಡೆಲ್ಲಿ ಲೀಗ್ ಹಂತದಲ್ಲೇ ಹೊರಹೋಗಿದೆ.
Related Articles
Advertisement
ಹತ್ತೂ ಆವೃತ್ತಿಗಳ ದುರಂತ ಕಥೆಯನ್ನು ನೋಡಿದ ನಂತರ ಡೆಲ್ಲಿಯ ಸ್ಥಿತಿ 11ನೇ ಐಪಿಎಲ್‌ನಲ್ಲಾದರೂ ಬದಲಾಗಲಿ ಎಂಬ ನಿರೀಕ್ಷೆಯಿಂದ ತಂಡದ ಮಾಲೀಕರು ಪೂರ್ಣವಾಗಿ ಹೊಸ ತಂಡವನ್ನೇ ಸಿದ್ಧಪಡಿಸಿದರು. ಡೆಲ್ಲಿಯನ್ನು ಬಿಟ್ಟು ಹೋಗಿದ್ದ ಗೌತಮ್ ಗಂಭೀರ್‌ರನ್ನು ಮತ್ತೆ ಕರೆಸಿ ತಂಡದ ನಾಯಕತ್ವ ಕೊಟ್ಟರು. ತನ್ನ ವೃತ್ತಿಜೀವನದ ಅಂತಿಮ ಘಟ್ಟದಲ್ಲಿರುವ ಗಂಭೀರ್‌ಗೆ ಇದು ಇಷ್ಟದ ವಿಚಾರವೇ ಆಗಿತ್ತು. ಅವರು ಹೊಸ ಹುಮ್ಮಸ್ಸಿನಲ್ಲೇ ನಾಯಕತ್ವ ವಹಿಸಿಕೊಂಡರು. ಪರಿಣಾಮ….? ಸ್ವತಃ ಗಂಭೀರ್ ಫಾರ್ಮ್ಗಾಗಿ ಒದ್ದಾಡಿದರು. ಅವರ ಬ್ಯಾಟ್‌ನಿಂದ ರನ್ ಹರಿಯಲಿಲ್ಲ, ತಂಡ ಸೋಲುವುದು ತಪ್ಪಲಿಲ್ಲ. ಇದನ್ನು ಮನಗಂಡ ಗಂಭೀರ್ ನಾಯಕತ್ವವನ್ನು ತಾನೇ ಬಿಟ್ಟುಕೊಟ್ಟು ಶ್ರೇಯಸ್ ಅಯ್ಯರ್‌ರನ್ನು ಅಲ್ಲಿ ಕೂರಿಸಿದರು.
ಅಷ್ಟುಮಾತ್ರವಲ್ಲ ತಂಡದಿಂದಲೂ ಹೊರಗುಳಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿ ನನಗೆ ಸಂಬಳವೇ ಬೇಡ ಉಚಿತವಾಗಿ ಆಡುತ್ತೇನೆಂದು ಘೋಷಿಸಿದರು. ಕ್ರಿಕೆಟ್‌ನಲ್ಲಿ ಇಂತಹ ನಿರ್ಧಾರ ಮಾಡುವಂತಹ ತ್ಯಾಗಮಯಿಗಳು ಬಹಳ ಕಡಿಮೆ. ಗಂಭೀರ್ ಸಿಡುಕ, ಹೊಂದಿಕೊಳ್ಳುವುದಿಲ್ಲ, ಜಗಳಗಂಟ ಎಂದೆಲ್ಲ ಕರೆಸಿಕೊಂಡಿದ್ದಾರೆ. ಆದರೆ ಗಂಭೀರ್ ಮಾತ್ರ ತಾನು ಸ್ವಾಭಿಮಾನಿ, ಯಾರ ಹಂಗೂ ತನಗೆ ಬೇಡ ಎಂದು ಪದೇ ಪದೇ ಸಾಬೀತುಮಾಡಿದ್ದಾರೆ. ಅದೇನೆ ಇರಲಿ; ಕ್ರಿಕೆಟ್ ಇತಿಹಾಸದಲ್ಲೇ ಧೀಮಂತ ಎನಿಸುವಂತಹ ನಿರ್ಧಾರವನ್ನು ಗಂಭೀರ್ ಮಾಡಿದರೂ ಅದು ಸ್ವಲ್ಪ ತಡವಾಯಿತು ಎನಿಸುತ್ತದೆ. ಅವರು ಜಾಗ ಬಿಡುವಾಗ ಆಗಲೇ ದೆಹಲಿ 6 ಪಂದ್ಯವಾಡಿ 5 ಸೋತಾಗಿತ್ತು. ಆ ಹಂತದಲ್ಲಿ ಪರಿಸ್ಥಿತಿಗೆ ತೇಪೆ ಹಾಕುವುದು ಸ್ವಲ್ಪ ಕಷ್ಟದಕೆಲಸ. ಆದರೂ ನಾಯಕತ್ವ ಹೊತ್ತುಕೊಂಡ ಶ್ರೇಯಸ್ ಅಯ್ಯರ್ ತಮ್ಮ ಕೈಲಾದ ಎಲ್ಲವನ್ನೂ ಮಾಡಿದ್ದಾರೆ. ಅದ್ಭುತವಾಗಿ ಬ್ಯಾಟ್ ಬೀಸಿ ಕೆಲ ಪಂದ್ಯ ಗೆದ್ದುಕೊಟ್ಟಿದ್ದಾರೆ. ನಾಯಕನಾಗಿ ತಮ್ಮ ಚಾಕಚಕ್ಯತೆಯನ್ನು ತೋರಿಸಿದ್ದಾರೆ. ಮೊನ್ನೆ ರಾಜಸ್ಥಾನ್ ವಿರುದ್ಧ ಅಂತಿಮ ಹಂತದಲ್ಲಿ ಅವರು ಮಾಡಿದ ಬೌಲಿಂಗ್ ಬದಲಾವಣೆಗಳು ಎಲ್ಲರಿಗೂ ಅವರನ್ನು ಹೊಸ ದೃಷ್ಟಿಯಿಂದ ನೋಡಲು ನೆರವಾದವು. ಅವರ ನಾಯಕತ್ವದಲ್ಲಿ ದೆಹಲಿ 4 ಪಂದ್ಯವಾಡಿ 2 ಗೆದ್ದು 2 ಸೋತಿದೆ (ಮೇ 6ರಷ್ಟೊತ್ತಿಗೆ). ಡೆಲ್ಲಿ ತಂಡದ ಬ್ಯಾಟಿಂಗ್, ಬೌಲಿಂಗ್, ಮನಃಸ್ಥಿತಿಯಲ್ಲೂ ಸುಧಾರಣೆಯಾಗಿದೆ. ಈ ಐಪಿಎಲ್‌ನ ಕೊನೆಯ ಹಂತದಲ್ಲಿ ಡೆಲ್ಲಿ ಆಡಿರುವ ರೀತಿಯನ್ನು ನೋಡಿದಾಗ ಮುಂದಿನ ಆವೃತ್ತಿಯಲ್ಲಿ ಅದು “ಐಪಿಎಲ್‌ನದ.ಆಫ್ರಿಕಾ’ ಎಂಬ ಹಣೆಪಟ್ಟಿಯಿಂದ ಹೊರಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿದೆ. ಹಾಗೆಯೇ ಗಂಭೀರ್ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಲಕ್ಷಣಗಳು ದಟ್ಟವಾಗಿವೆ! ನಿರೂಪ