Advertisement

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

07:58 AM May 19, 2024 | Team Udayavani |

ಗುವಾಹಟಿ: ಈ ಐಪಿಎಲ್‌ನ ಕಟ್ಟಕಡೆಯ ಲೀಗ್‌ ಪಂದ್ಯದಲ್ಲಿ ಟೇಬಲ್‌ ಟಾಪರ್‌ ತಂಡಗಳಾದ ಕೋಲ್ಕತಾ ನೈಟ್‌ರೈಡರ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ಸೆಣಸಾಡಲಿರುವುದು ವಿಶೇಷ. ರವಿವಾರ ರಾತ್ರಿ ಗುವಾಹಟಿಯಲ್ಲಿ ಈ ಪಂದ್ಯ ನಡೆಯಲಿದೆ.

Advertisement

ಕೆಕೆಆರ್‌ ಈಗಾಗಲೇ 19 ಅಂಕ ಹೊಂದಿದ್ದು, ಅಗ್ರಸ್ಥಾನಕ್ಕೆ ಅಂಟಿ ಕೊಂಡಿದೆ. ಸೋತರೂ ಅದು ಮೊದಲ ಸ್ಥಾನದಿಂದ ಕೆಳಗಿಳಿಯದು. ಆದರೆ ರಾಜಸ್ಥಾನ್‌ ಸತತ 4 ಪಂದ್ಯಗಳನ್ನು ಸೋತ ಆಘಾತದಲ್ಲಿದೆ. ಸೋಲಿನ ಸರಪಳಿ ಕಡಿದರೆ ದ್ವಿತೀಯ ಸ್ಥಾನವನ್ನು ಗಟ್ಟಿಗೊಳಿಸಲಿದೆ. ಒಂದು ವೇಳೆ ಸೋತರೆ, ಮೊದಲ ಪಂದ್ಯದಲ್ಲಿ ಹೈದರಾಬಾದ್‌ ಗೆದ್ದರೆ ಆಗ ರಾಜಸ್ಥಾನ್‌ ಕೆಳಗಿಳಿಯುವುದು ನಿಶ್ಚಿತ.

ರಾಜಸ್ಥಾನ್‌ ಬಲಿಷ್ಠ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಸರದಿಯನ್ನು ಹೊಂದಿರುವ ತಂಡ. ಆದರೆ ಕಳೆದೆರಡು ಪಂದ್ಯಗಳಲ್ಲಿ ನೂರೈವತ್ತರ ಗಡಿಯನ್ನೂ ತಲುಪಿಲ್ಲ. ಇಂಗ್ಲೆಂಡ್‌ ಆರಂಭಕಾರ ಜಾಸ್‌ ಬಟ್ಲರ್‌ ನಿರ್ಗಮನ ದೊಡ್ಡ ಹೊಡೆತವಿಕ್ಕಿದೆ. ಜೈಸ್ವಾಲ್‌, ಸ್ಯಾಮ್ಸನ್‌, ಸ್ಥಳೀಯ ಬ್ಯಾಟರ್‌ ರಿಯಾನ್‌ ಪರಾಗ್‌ ತಂಡದ ಬ್ಯಾಟಿಂಗ್‌ ಸರದಿಯನ್ನು ಆಧರಿಸಬೇಕಿದೆ.

2021ರ ಬಳಿಕ ಪ್ಲೇ ಆಫ್
2021ರ ಬಳಿಕ ಪ್ಲೇ ಆಫ್ಗೆ ಬಂದಿರುವ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಕೆಕೆಆರ್‌ ಆತ್ಮವಿಶ್ವಾಸದ ತುತ್ತತುದಿಯಲ್ಲಿದೆ. ಮೇ 11ರಂದು ಮುಂಬೈಯನ್ನು ಮಣಿಸಿದ ಬಳಿಕ ಯಾವುದೇ ಪಂದ್ಯವಾಡಿಲ್ಲ. ಅಹ್ಮದಾಬಾದ್‌ಗೆ ಹೋಗಿ ಮಳೆಯನ್ನು ನೋಡಿ ವಾಪಸಾಯಿತು. ಇದೀಗ ಗುವಾಹಟಿಗೆ ಬಂದಿದೆ.

ಇಂಗ್ಲೆಂಡ್‌ನ‌ ಇನ್‌ಫಾರ್ಮ್ ಓಪನರ್‌ ಫಿಲ್‌ ಸಾಲ್ಟ್ ಗೈರು ಕೆಕೆಆರ್‌ಗೆ ತುಸು ಹಿನ್ನಡೆಯಾಗಿ ಪರಿಣಮಿಸಬಹುದು. ಸಾಲ್ಟ್ ಮತ್ತು ಸುನೀಲ್‌ ನಾರಾಯಣ್‌ ಈ ಐಪಿಎಲ್‌ನ ಯಶಸ್ವಿ ಆರಂಭಿಕ ಜೋಡಿಯಾಗಿದ್ದು, 7 ಅರ್ಧ ಶತಕ ಹಾಗೂ ಒಂದು ಶತಕವನ್ನೊಳಗೊಂಡಂತೆ 897 ರನ್‌ ಒಟ್ಟುಗೂಡಿಸಿದ್ದಾರೆ. ಸಾಲ್ಟ್ ಬದಲು ಅಫ್ಘಾನಿಸ್ಥಾನದ ರೆಹಮಾನುಲ್ಲ ಗುರ್ಬಜ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಕಳೆದ ವರ್ಷ 11 ಪಂದ್ಯಗಳನ್ನಾಡಿದ್ದ ಗುರ್ಬಜ್‌, ಈ ಬಾರಿ ಯಾವುದೇ ಪಂದ್ಯವಾಡಿಲ್ಲ. ಶ್ರೇಯಸ್‌ ಅಯ್ಯರ್‌, ರಿಂಕು ಸಿಂಗ್‌ ಬ್ಯಾಟಿಂಗ್‌ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ.

Advertisement

ಗುವಾಹಟಿ ಟ್ರ್ಯಾಕ್‌ ನಿಧಾನ ಗತಿಯಿಂದ ಕೂಡಿದೆ. ದೊಡ್ಡ ಮೊತ್ತ ಕಷ್ಟ. ಅಲ್ಲದೇ ಮಳೆ ಭೀತಿ ಕೂಡ ಇದೆ.

ಇಂದು ಲೀಗ್‌ ಪಂದ್ಯಗಳಿಗೆ ತೆರೆ
ರವಿವಾರ 2024ನೇ ಐಪಿಎಲ್‌ ಲೀಗ್‌ ಪಂದ್ಯಗಳಿಗೆ ತೆರೆ ಬೀಳಲಿದೆ. ಅಲ್ಲಿಗೆ 70 ಪಂದ್ಯ ಮುಗಿದಂತಾಗುತ್ತದೆ. ಹೈದರಾಬಾದ್‌ನಲ್ಲಿ ನಡೆಯುವ ದಿನದ ಮೊದಲ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌-ಪಂಜಾಬ್‌ ಕಿಂಗ್ಸ್‌ ಎದುರಾಗಲಿವೆ. ರಾತ್ರಿ ಗುವಾಹಟಿಯಲ್ಲಿ ಟೇಬಲ್‌ ಟಾಪರ್‌ಗಳಾದ ಕೋಲ್ಕತಾ ನೈಟ್‌ರೈಡರ್ ಮತ್ತು ರಾಜಸ್ಥಾನ್‌ ಮುಖಾಮುಖೀ ಆಗಲಿವೆ.

ಇದರಲ್ಲಿ 3 ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿವೆ. ಆದರೂ ಇವನ್ನು ಲೆಕ್ಕದ ಭರ್ತಿಯ ಪಂದ್ಯಗಳೆಂದು ಭಾವಿಸಬೇಕಿಲ್ಲ. ರಾಜಸ್ಥಾನ್‌ ಸೋಲಿನ ಸರಪಳಿ ಕಡಿದು ದ್ವಿತೀಯ ಸ್ಥಾನವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದರೆ, ಹೈದರಾಬಾದ್‌ ಮೂರರಿಂದ ಎರಡನೇ ಸ್ಥಾನಕ್ಕೇರುವ ಯೋಜನೆ ಹಾಕಿಕೊಂಡಿದೆ. ಆದರೆ ಸೋತರೂ ಕೋಲ್ಕತಾದ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು!

ಸೋಮವಾರ ಪಂದ್ಯಾವಳಿಗೆ ವಿರಾಮ. ಮಂಗಳವಾರ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ.

ಹೈದರಾಬಾದ್‌ಗೆ ದ್ವಿತೀಯ ಸ್ಥಾನದ ಹಂಬಲ
ಮೂರು ವರ್ಷಗಳಲ್ಲಿ ಮೊದಲ ಪ್ಲೇ ಆಫ್ ಕಂಡ ಆತ್ಮವಿಶ್ವಾಸದಲ್ಲಿರುವ ಸನ್‌ರೈಸರ್ ಹೈದರಾಬಾದ್‌ ರವಿವಾರದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ತವ ರಿನ ಅಂಗಳದಲ್ಲಿ ಎದುರಿಸಲಿದೆ. ಪಂಜಾಬ್‌ ಈಗಾಗಲೇ ಕೂಟದಿಂದ ಹೊರಬಿದ್ದಿರುವ ತಂಡ. ಆದರೆ ಗೆದ್ದರೆ ಹೈದರಾಬಾದ್‌ಗೆ ದ್ವಿತೀಯ ಸ್ಥಾನಕ್ಕೇರುವ ಅವಕಾಶವಿದೆ.

ಗುರುವಾರ ಇಲ್ಲಿಯೇ ನಡೆಯ ಬೇಕಿದ್ದ ಗುಜರಾತ್‌ ಟೈಟಾನ್ಸ್‌ ಎದುರಿನ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. ರವಿವಾರವೂ ಮಳೆಯ ಭೀತಿ ಇದೆ. ಆದರೆ ಇದು ಹಗಲು ಪಂದ್ಯವಾದ್ದರಿಂದ ತೀವ್ರ ಅಡಚಣೆ ಆಗಲಿಕ್ಕಿಲ್ಲ.
ಕಳೆದ ಮೂರೂ ಐಪಿಎಲ್‌ಗ‌ಳಲ್ಲಿ ಪಾತಾಳಕ್ಕೆ ಕುಸಿದಿದ್ದ ಎಸ್‌ಆರ್‌ಎಚ್‌ ಈ ಬಾರಿ ಪ್ಯಾಟ್‌ ಕಮಿನ್ಸ್‌ ಸಾರಥ್ಯದಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದೆ. 13 ಪಂದ್ಯಗಳಿಂದ 15 ಅಂಕ ಗಳಿಸಿದೆ. ಗರಿಷ್ಠ 17 ಅಂಕ ಗಳಿಸುವ ಅವಕಾಶ ಎದುರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next