Advertisement

IPL ಅಲ್ಲಿ ಕಾಣುತ್ತೀರಿ ಫೋರ್‌,ಸಿಕ್ಸ್‌:ಅದರಾಚೆಗೆ ಇದೆ ಮೋಜು ಮಸ್ತಿ!

03:55 AM Apr 15, 2017 | |

ಪ್ರತಿ ವರ್ಷ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟಿ20 ಟೂರ್ನಿ ಕಳೆದ ವರ್ಷದಷ್ಟು ಕಳೆಗಟ್ಟಲಿಕ್ಕಿಲ್ಲ ಎಂತಲೇ ಪ್ರತಿಪಾದಿಸಲಾಗುತ್ತದೆ. ಭಾರತದಲ್ಲಿ ಆಡಿದಾಗಲೂ ಅಷ್ಟೇ, ಅನಿವಾರ್ಯವಾಗಿ ದಕ್ಷಿಣ ಆಫ್ರಿಕಾದಲ್ಲಿ ಆಡಿದಾಗಲೂ ಹಾಗೆಯೇ. ಪಂದ್ಯಗಳ ನೇರಪ್ರಸಾರ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಕೊರತೆಯ ಹೊರತಾಗಿಯೂ ಗಮನ ಸೆಳೆಯುತ್ತದೆ. ಐಪಿಎಲ್‌ ಜ್ವರ ದೇಶದೊಳಗಿನ ಬೇಸಿಗೆ ಹೆಚ್ಚಿದಂತೆಯೇ ಹೆಚ್ಚಾಗುತ್ತಿದೆ. ಸೆಮಿಫೈನಲ್‌, ಫೈನಲ್‌ಗೆ ನಾವು ತುದಿಗಾಲಲ್ಲಿ ಕೂತಿದ್ದೇವೆ. ಭರ್ಜರಿ ಸಿಕ್ಸ್‌ಗಳು, ಬೌಂಡರಿ ಲೈನ್‌ನಲ್ಲಿ ಅಕ್ಷರಶಃ ಮಾನವ ಸದೃಶವಲ್ಲದ ರೀತಿಯ ಕ್ಯಾಚ್‌ಗಳನ್ನು ಕಂಡು ಬೆರಗಾಗುತ್ತೇವೆ. ಇದರ ಜತೆಗೆ ಅದರಾಚೆಗೂ ಆಟಗಾರರು ಮೋಜು ಮಸ್ತಿಯಲ್ಲಿರುವುದು ಸೌಂಡ್‌ ಆಗುತ್ತದೆ. ಈ ನಿಟ್ಟಿನಲ್ಲಿ ಒಂದು ಹಿನ್ನೋಟ.

Advertisement

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ರಾತ್ರಿ ಪಾರ್ಟಿಗಳ ಕುರಿತಾಗಿ ಆಟಗಾರನೊಬ್ಬ 2010ರಲ್ಲಿಯೇ ವಿವರಿಸಿದ ರೀತಿ ಭಿನ್ನ ಅನುಭವವನ್ನು ಕೊಡುವಂತದು. ಆತ ತನ್ನ ಹೆಸರು ಪ್ರಕಟಿಸಲಿಚ್ಛಿಸದೆ ಅನುಭವವನ್ನು ಹೀಗೆ ವಿವರಿಸುತ್ತಾನೆ, ಪಂದ್ಯದ ನಂತರ ನಡೆಯುವ ಪಾರ್ಟಿಗಳ ಮೊದಲ 30 ರಿಂದ 35 ನಿಮಿಷ ರ್‍ಯಾಂಪ್‌ ಶೋಗಳು ನಡೆಯುತ್ತವೆ. ಪಾರ್ಟಿಯಲ್ಲಿ ಚಿಯರ್‌ ಲೀಡರ್‌, ಯುವತಿಯರು ನಿಮ್ಮನ್ನು ಸುತ್ತಿಕೊಂಡರೂ ಐದಕ್ಕಿಂತ ಹೆಚ್ಚು ನಿಮಿಷ ನೀವು ಮಾತುಕತೆಯಲ್ಲಿ ತೊಡಗದಂತೆ ಮ್ಯಾನೇಜರ್‌ಗಳು ನೋಡಿಕೊಳ್ಳುತ್ತಾರೆ. ಪಾರ್ಟಿಗಳಲ್ಲಿ ಸುಂದರವಾದ ಹೆಂಗಸರು ದೊಡ್ಡ ಸಂಖ್ಯೆಯಲ್ಲಿ ಇರುತ್ತಾರೆ. ಅವರು ಮುಕ್ತವಾಗಿ ಬೆರೆಯುತ್ತಾರೆ. ಹಿರಿಯ ಆಟಗಾರರಿಗೆ ಮದ್ಯ, ಮಾನಿನಿ ಮತ್ತು ಗುಂಡು ಅರಗಿಸಿಕೊಳ್ಳಲು ಅನುಭವ ಸಾಥ್‌ ನೀಡುತ್ತದೆ. ಒಬ್ಬರು ಓರ್ವ ಯುವತಿಯ ಜೊತೆ ಡ್ಯಾನ್ಸ್‌ ಮಾಡಿದರೆ ಪರಾಕ್ರಮಿ ಇಬ್ಬರ ಕೈ ಹಿಡಿದು “ಹೆಜ್ಜೆ ಹಾಕಬಹುದು.

ಸಮಸ್ಯೆ ಅದಲ್ಲ, 19 ರಿಂದ 21ರೊಳಗಿನ ವಯಸ್ಸಿನ ಆಟಗಾರರು ಮೊದಮೊದಲ ಬಾರಿಗೆ ಪಾರ್ಟಿಗಳಲ್ಲಿ ಭಾಗವಹಿಸಿದಾಗ ತೀರಾ ಗೊಂದಲಕ್ಕೊಳಗಾಗುತ್ತಾರೆ. ಬಾಲಿವುಡ್‌ ಹೀರೋಯಿನ್‌ಗಳು, ಪೇಜ್‌ 3 ಪರ್ಸನಾಲಿಟಿಗಳು… ಇವೆಲ್ಲ ಉಚಿತ ಎಂಬ ಆಮಿಷ ಬೇರೆ. ಭಾಗವಹಿಸಲೇಬೇಕು ಎಂಬ ಕಡ್ಡಾಯವಿಲ್ಲದಿದ್ದರೂ ಒಂದು ಘಂಟೆಯ ಮಟ್ಟಿಗೆ ಎಂದು ಹೋಗುವ ಆಟಗಾರ ಬೆಳಗಿನ ಜಾವ ನಾಲ್ಕಕ್ಕೆ ದಿಂಬಿಗೆ ತಲೆ ಕೊಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಬೆಳ್ಳಂಬೆಳಗ್ಗೆ ಬೇರೆಯ ನಗರಕ್ಕೆ ಹಾರಬೇಕು, ಅದು ನಾಲ್ಕರಿಂದ 12 ಘಂಟೆಗಳ ಪಯಣವೂ ಆಗಿರಬಹುದು. ಅಲ್ಲಿ ಕೊನೆಯೇ ಇಲ್ಲದ ಪ್ರಾಯೋಜಕರ ಕಾರ್ಯಕ್ರಮ, ಶೂಟಿಂಗ್‌ನಲ್ಲಿ ಕಡ್ಡಾಯ ಹಾಜರಾತಿ. ಬೇಕಿದ್ದರೆ ಮತ್ತೆ ಪಾರ್ಟಿಗೆ ಆಹ್ವಾನ!

ಈಗಂತೂ ಪಂದ್ಯಗಳ ಸಂಖ್ಯೆ ಹೆಚ್ಚಿದೆ. ಅಂದರೆ ಮೇಲಿನ ವೇಳಾಪಟ್ಟಿ, ಸರ್ಕಸ್‌, ಖುಷಿ ಮುಂದುವರಿದಂತೆ ಆಟಗಾರ ಮಾನಸಿಕವಾಗಿ ಸುಸ್ತಾಗುತ್ತಾನೆ. ಇದನ್ನೆಲ್ಲ ನಿರ್ವಹಿಸುವವ ಮಾತ್ರ ಯಶಸ್ವಿ ಎನ್ನಿಸಿಕೊಳ್ಳುತ್ತಾನೆ. ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಮಿಂಚುವ ಯುವ ಆಟಗಾರರು ಟೂರ್ನಿಯ ದ್ವಿತಿಯಾರ್ಧದಲ್ಲಿ ಬೌಲರ್‌ಗಳಿಗೆ ಸುಲಭವಾಗಿ ಅರ್ಥವಾಗುತ್ತಾರೆ ಎಂದು ವಾದಿಸುವವರು ಈ ಬೆಳವಣಿಗೆಗಳನ್ನು ಗಮನಿಸಬೇಕು. ಈ ಮಾತು ಚೆಸ್‌, ಟೆನಿಸ್‌ನಂತಲ್ಲೂ ಅನ್ವಯಿಸುವಂತದು.

ಪಾರ್ಟಿಗಳು ಎಂದಾಗ ನೆನಪಾಗುತ್ತದೆ, ಪುಣೆ ವಾರಿಯರ್ನ ರೋಹಿತ್‌ ಶರ್ಮ ಹಾಗೂ ವೇನ್‌ ಪಾರ್ನಲ್‌ ಉಳಿದ 42 ಸ್ನೇಹಿತರ ಜೊತೆ ಮುಂಬೈನ ಜುಹುವಿನ ಹೋಟೆಲ್‌ ಒಂದರಲ್ಲಿ ರೇವ್‌ ಪಾರ್ಟಿ ನಡೆಸುವಾಗ 2012ರಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದು. ಆಟಗಾರರ ನಿರಾಕರಣೆಯ ಹೊರತಾಗಿಯೂ ಅವರ ರಕ್ತದಲ್ಲಿ ಮಾದಕ ದ್ರವ್ಯದ ಅಂಶ ಪತ್ತೆಯಾಗಿದ್ದು ಬೇರೆಯದೇ ಕಥೆ. ಇತ್ತ ಅವತ್ತಿನ ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್‌, ಆಟಗಾರರು ಸೇವಿಸಿದ ಮಾದಕ ದ್ರವ್ಯ ಅವರ ಆಟದ ಗುಣಮಟ್ಟವನ್ನೇನೂ ಹೆಚ್ಚಿಸುವಂತದಲ್ಲ. ಹಾಗಾಗಿ ಅವರನ್ನು ಶಿಕ್ಷಿ$ಸುವ ಪ್ರಶ್ನೆ ಇಲ್ಲ ಎಂದು ತಿಪ್ಪೆ ಸಾರಿಸಿದರು. ಒಂದರ್ಥದಲ್ಲಿ ಐಪಿಎಲ್‌ನಲ್ಲಿ ಆಡುವ ಆಟಗಾರರೆಂದರೆ ನಮ್ಮ ವಿಧಾನಮಂಡಲ ಅಥವಾ ಲೋಕಸಭೆಗಳಲ್ಲಿ ಜನಪ್ರತಿನಿಧಿಗಳಿಗಿರುವ ರಕ್ಷಣೆಯಂತೆ. ಅಲ್ಲಿ ಕಾನೂನುಗಳ ಕೆಲಸ ಮಾಡುವುದಿಲ್ಲ!

Advertisement

ಇದು 2012ರ ಇನ್ನೊಂದು ಘಟನೆಯಿಂದ ಇನ್ನಷ್ಟು ಸ್ಪಷ್ಟ. ಆಸ್ಟ್ರೇಲಿಯಾದ ಆಟಗಾರ ಲ್ಯೂಕ್‌ ಪೋಮರ್‌ಬಶ್‌ ಹೋಟೆಲ್‌ನಲ್ಲಿ ಅನುಮತಿಯಿಲ್ಲದೆ ಮಹಿಳೆಯೋರ್ವರ ಕೊಠಡಿಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ತೋರಿದರು ಎಂದು ಆರೋಪಿಸಲಾಗಿತ್ತು. ಆ ವೇಳೆ ತಡೆಯಲು ಬಂದ ಮಹಿಳೆಯ 27ರ ಗೆಳೆಯನ ಮೇಲೂ ಲ್ಯೂಕ್‌ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಆದರೆ ದೊಡ್ಡ ಶಕ್ತಿಗಳು ಈ ಘಟನೆಯನ್ನು ತಣ್ಣಗಾಗಿಸಿದವು. ನ್ಯಾಯಾಲಯದ ಹೊರಗೇ ರಾಜಿ ನಡೆಯಿತು. ಲ್ಯೂಕ್‌ ಎದುರಿನ ಆರೋಪ ಬಿದ್ದುಹೋಯಿತು. ಈ ಸಂದರ್ಭದಲ್ಲಿ ಮತ್ತೂಮ್ಮೆ ಅನಾಮಿಕ ಆಟಗಾರ ರಾತ್ರಿ ಲೇಟ್‌ ಪಾರ್ಟಿಗಳ ಬಗ್ಗೆ ವಿವರಿಸಿದ ಅನುಭವಗಳನ್ನು ನಾವು ಮೆಲುಕು ಹಾಕಿಕೊಳ್ಳಬೇಕಷ್ಟೇ!

ಸಾರಾಸಗಟಾಗಿ ಆಟಗಾರರನ್ನು ಇದೇ ಮಾದರಿಯಲ್ಲಿ ವಿವರಿಸಬೇಕಿಲ್ಲ. ಭಾರತದ ಮಾಜಿ ನಾಯಕ ಮಹೇಂದ್ರಸಿಂಗ್‌ ಧೋನಿ ಅದಕ್ಕಾಗಿಯೇ ಹೇಳಿದ್ದು, ಪ್ರತಿಯೊಬ್ಬ ಆಟಗಾರ ಜವಾಬ್ದಾರಿಯುತನಾಗಿದ್ದು ಅವನಿಗೆ ತನ್ನ ದೇಹ ಭರಿಸಬಹುದಾದ ಒತ್ತಡಗಳ ಅರಿವಿರಬೇಕು! ಇದು ಪಂದ್ಯಕ್ಕಿಂತ ಹೊರತಾದ ಹೊರ ಜಗತ್ತಿಗೆ ಹೆಚ್ಚು ಅನ್ವಯವಾಗುವಂತದು. ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌ ಅಥವಾ ಖುದ್ದು ಧೋನಿ ತಮ್ಮೆಲ್ಲ ಒತ್ತಡ, ಸೆಲಬ್ರಿಟಿ ದರ್ಜೆ ಮತ್ತು ಆಮಿಷಗಳ ಆಕರ್ಷಣೆಗಳ ನಡುವೆ ಮಾದರಿಯಾಗಿ ಬದುಕಿರುವುದು ಬೇರೆಯದೇ ಕಥೆ ಹೇಳುತ್ತದೆ. ಕೇಳಿಸಿಕೊಳ್ಳುವ ಕಿವಿ ಬೇಕಷ್ಟೇ!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next