Advertisement

ಐಪಿಎಲ್‌ ಫಸ್ಟ್‌ ಮ್ಯಾಚ್‌-2010: ಚಾಂಪಿಯನ್‌ ಡೆಕ್ಕನ್‌ಗೆ ಆಘಾತವಿಕ್ಕಿದ ಕೆಕೆಆರ್‌

11:03 PM Apr 27, 2022 | Team Udayavani |

2010ರ ಐಪಿಎಲ್‌ ಋತುವಿನ ಆರಂಭಿಕ ಪಂದ್ಯದಲ್ಲಿ ಎದುರಾದ ತಂಡಗಳೆಂದರೆ ಹಾಲಿ ಚಾಂಪಿಯನ್‌ ಡೆಕ್ಕನ್‌ ಚಾರ್ಜ್‌ರ್ ಮತ್ತು ಕೋಲ್ಕತಾ ನೈಟ್‌ರೈಡರ್. ಇದು ಆ್ಯಡಂ ಗಿಲ್‌ಕ್ರಿಸ್ಟ್‌ ಮತ್ತು ಸೌರವ್‌ ಗಂಗೂಲಿ ತಂಡಗಳ ಮೇಲಾಟವಾಗಿತ್ತು.

Advertisement

ಐಪಿಎಲ್‌ ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳಲ್ಪಟ್ಟ ಸಡಗರ ಎಲ್ಲೆಡೆ ಮನೆಮಾಡಿತ್ತು. ಇದೇ ಖುಷಿಯಲ್ಲಿ ಮುಂಬಯಿಯ “ಡಿ.ವೈ. ಪಾಟೀಲ್‌ ಸ್ಟೇಡಿಯಂ’ನಲ್ಲಿ ಡೆಕ್ಕನ್‌ ಮತ್ತು ಕೆಕೆಆರ್‌ ಕಣಕ್ಕಿಳಿದವು. ಚಾಂಪಿಯನ್‌ ಡೆಕ್ಕನ್‌ ತಂಡವನ್ನು 11 ರನ್ನುಗಳಿಂದ ರೋಚಕವಾಗಿ ಮಣಿಸಿದ ಗಂಗೂಲಿ ಪಡೆ ಶುಭಾರಂಭ ಮಾಡಿತು.
ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 4 ವಿಕೆಟಿಗೆ 161 ರನ್‌ ಗಳಿಸಿದರೆ, ಡೆಕ್ಕನ್‌ 7 ವಿಕೆಟಿಗೆ 150 ರನ್‌ ಬಾರಿಸಿ ಶರಣಾಯಿತು. ಕೋಲ್ಕತಾದ ಆರಂಭಿಕ ಸ್ಥಿತಿ ಗಮನಿಸಿದರೆ ಅದು 160ರ ಗಡಿ ದಾಟಿದ್ದೇ ಒಂದು ಪವಾಡ. ಚಾಮಿಂಡ ವಾಸ್‌ ಎಸೆದ ಮೊದಲ ಓವರ್‌ನಲ್ಲೇ ಮನೋಜ್‌ ತಿವಾರಿ ಮತ್ತು ನಾಯಕ ಸೌರವ್‌ ಗಂಗೂಲಿ ಔಟ್‌.
ಇಬ್ಬರದೂ ಶೂನ್ಯ ಸಂಪಾದನೆ. ಕೆಕೆಆರ್‌ ಕೂಡ ಖಾತೆ ತೆರೆದಿರಲಿಲ್ಲ. ಸ್ಕೋರ್‌ 31ಕ್ಕೆ ಏರಿದೊಡನೆ ಮತ್ತೆರಡು ವಿಕೆಟ್‌ ಬಿತ್ತು. ಚೇತೇಶ್ವರ್‌ ಪೂಜಾರ ಮತ್ತು ಬ್ರಾಡ್‌ ಹಾಜ್‌ ಒಟ್ಟೊಟ್ಟಿಗೆ ಪೆವಿಲಿಯನ್‌ ಸೇರಿಕೊಂಡರು. ಡೆಕ್ಕನ್‌ ಅಮೋಘ ಹಿಡಿತ ಸಾಧಿಸಿತ್ತು.

ಇಲ್ಲಿಂದ ಮುಂದೆ ನಡೆದದ್ದೆಲ್ಲ ಕೆಕೆಆರ್‌ ಆಟ. 5ನೇ ವಿಕೆಟಿಗೆ ಜತೆಗೂಡಿದ ಇಂಗ್ಲೆಂಡಿನ ಓವೇಸ್‌ ಶಾ ಮತ್ತು ಶ್ರೀಲಂಕಾದ ಸವ್ಯಸಾಚಿ ಏಂಜೆಲೊ ಮ್ಯಾಥ್ಯೂಸ್‌ ಸೇರಿಕೊಂಡು ಡೆಕ್ಕನ್‌ ಬೌಲರ್‌ಗಳ ಮೆರೆದಾಟಕ್ಕೆ ಸಂಪೂರ್ಣ ತಡೆಯಾದರು. ಎಷ್ಟರ ಮಟ್ಟಿಗೆಂದರೆ, ಈ ಜೋಡಿಯನ್ನು ಬೇರ್ಪಡಿಸಲು ಕೊನೆಗೂ ಗಿಲ್ಲಿ ಬಳಗದಿಂದ ಸಾಧ್ಯವಾಗಲಿಲ್ಲ. ಶಾ-ಮ್ಯಾಥ್ಯೂಸ್‌ ಮುರಿಯದ 5ನೇ ವಿಕೆಟಿಗೆ 130 ರನ್‌ ಪೇರಿಸುವ ಮೂಲಕ ಕೋಲ್ಕತಾವನ್ನು ಹೋರಾಟಕ್ಕೆ ಅಣಿಗೊಳಿಸಿದರು.

ಮ್ಯಾಥ್ಯೂಸ್‌ ಸರ್ವಾಧಿಕ 65 ರನ್‌ ಬಾರಿಸಿದರು. 46 ಎಸೆತಗಳ ಈ ಅಮೋಘ ಆಟದ ವೇಳೆ 5 ಫೋರ್‌ ಹಾಗೂ 4 ಸಿಕ್ಸರ್‌ ಸಿಡಿಯಲ್ಪಟ್ಟಿತು. ಶಾ ಕೂಡ ಎದುರಿಸಿದ್ದು 46 ಎಸೆತ. ಕೊಡುಗೆ ಅಜೇಯ 58 ರನ್‌. 3 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.

ದಿಟ್ಟ ಉತ್ತರ, ಬಳಿಕ ತತ್ತರ
ಡೆಕ್ಕನ್‌ ಜವಾಬು ದಿಟ್ಟ ರೀತಿಯಲ್ಲೇ ಇತ್ತು. ನಾಯಕ ಆ್ಯಡಂ ಗಿಲ್‌ಕ್ರಿಸ್ಟ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಸೇರಿಕೊಂಡು 5.5 ಓವರ್‌ಗಳಲ್ಲಿ 61 ರನ್‌ ಸೂರೆಗೈದರು. ಸ್ಕೋರ್‌ 99ಕ್ಕೆ ಏರುವ ತನಕ ಡೆಕ್ಕನ್‌ ಒಂದೇ ವಿಕೆಟ್‌ ಕಳೆದುಕೊಂಡು ಮುನ್ನುಗ್ಗಿ ಬಂದಿತ್ತು. 12ನೇ ಓವರ್‌ನಲ್ಲಿ ಗಿಲ್‌ಕ್ರಿಸ್ಟ್‌ ವಿಕೆಟ್‌ ಬಿತ್ತು. ಮತ್ತೆ ಬ್ಯಾಟಿಂಗ್‌ ಜೋಶ್‌ ತೋರಿಸಲು ಡೆಕ್ಕನ್‌ಗೆ ಸಾಧ್ಯವಾಗದೇ ಹೋಯಿತು.

Advertisement

ಹರ್ಷಲ್‌ ಗಿಬ್ಸ್, ಆಂಡ್ರ್ಯೂ ಸೈಮಂಡ್ಸ್‌, ರೋಹಿತ್‌ ಶರ್ಮ, ಅನಿರುದ್ಧ್ ಸಿಂಗ್‌, ಟಿ. ಸುಮನ್‌ ಎಲ್ಲರೂ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ ಸೇರಿಕೊಂಡರು. ತಂಡಕ್ಕೆ ನೂರೈವತ್ತರ ಗಡಿ ದಾಟಲು ಸಾಧ್ಯವಾಗದೇ ಹೋಯಿತು.

ಡೆಕ್ಕನ್‌ ಪರ ಆ್ಯಡಂ ಗಿಲ್‌ಕ್ರಿಸ್ಟ್‌ ಸರ್ವಾಧಿಕ 54 ರನ್‌ ಬಾರಿಸಿದರು. 35 ಎಸೆತಗಳ ಈ ಕಪ್ತಾನನ ಆಟದಲ್ಲಿ 3 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು.

ಕೆಕೆಆರ್‌ನ ಆರೂ ಬೌಲರ್ ವಿಕೆಟ್‌ ಬೇಟೆಯಾಡುವಲ್ಲಿ ಯಶಸ್ವಿಯಾದರು. ಅಜೇಯ 65 ರನ್‌ ಜತೆಗೆ ಒಂದು ವಿಕೆಟ್‌ ಕೂಡ ಉರುಳಿಸಿದ ಏಂಜೆಲೊ ಮ್ಯಾಥ್ಯೂಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಮನೋಜ್‌ ತಿವಾರಿ ಸಿ ರೋಹಿತ್‌ ಬಿ ವಾಸ್‌ 0
ಬ್ರಾಡ್‌ ಹಾಜ್‌ ಸಿ ಗಿಬ್ಸ್ ಬಿ ಜಸ್ಕರಣ್‌ 13
ಸೌರವ್‌ ಗಂಗೂಲಿ ಸಿ ಅನಿರುದ್ಧ್ ಬಿ ವಾಸ್‌ 0
ಚೇತೇಶ್ವರ್‌ ಪೂಜಾರ ಸಿ ಓಜಾ ಬಿ ಆರ್‌ಪಿ ಸಿಂಗ್‌ 10
ಓವೇಸ್‌ ಶಾ ಔಟಾಗದೆ 58
ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ 65
ಇತರ 15
ಒಟ್ಟು (4 ವಿಕೆಟಿಗೆ) 161
ವಿಕೆಟ್‌ ಪತನ: 1-0, 2-0, 3-31, 4-31.
ಬೌಲಿಂಗ್‌:
ಚಾಮಿಂಡ ವಾಸ್‌ 3-1-22-2
ಆರ್‌.ಪಿ. ಸಿಂಗ್‌ 4-0-35-1
ಜಸ್ಕರಣ್‌ ಸಿಂಗ್‌ 4-0-35-1
ಪ್ರಗ್ಯಾನ್‌ ಓಜಾ 4-0-19-0
ಆಂಡ್ರ್ಯೂ ಸೈಮಂಡ್ಸ್‌ 4-0-26-0
ಟಿ. ಸುಮನ್‌ 1-0-16-0

ಡೆಕ್ಕನ್‌ ಚಾರ್ಜರ್
ಆ್ಯಡಂ ಗಿಲ್‌ಕ್ರಿಸ್ಟ್‌ ಸಿ ತಿವಾರಿ ಬಿ ಹಾಜ್‌ 54
ವಿವಿಎಸ್‌ ಲಕ್ಷ್ಮಣ್‌ ಸಿ ಮತ್ತು ಬಿ ಕಾರ್ತಿಕ್‌ 22
ಗಿಬ್ಸ್ ಸಿ ಮ್ಯಾಥ್ಯೂಸ್‌ ಬಿ ಲಾಂಗ್‌ವೆಲ್ಟ್ 19
ಆಂಡ್ರ್ಯೂ ಸೈಮಂಡ್ಸ್‌ ಸಿ ಗಂಗೂಲಿ ಬಿ ಇಶಾಂತ್‌ 5
ರೋಹಿತ್‌ ಶರ್ಮ ಸಿ ಹಾಜ್‌ ಬಿ ಮ್ಯಾಥ್ಯೂಸ್‌ 13
ಅನಿರುದ್ಧ್ ಸಿಂಗ್‌ ಸಿ ಮತ್ತು ಬಿ ಶುಕ್ಲಾ 14
ಟಿ. ಸುಮನ್‌ ಔಟಾಗದೆ 7
ಚಾಮಿಂಡ ವಾಸ್‌ ಬಿ ಲಾಂಗ್‌ವೆಲ್ಟ್ 0
ಜಸ್ಕರಣ್‌ ಸಿಂಗ್‌ ಔಟಾಗದೆ 4
ಇತರ 12
ಒಟ್ಟು (7 ವಿಕೆಟಿಗೆ) 150
ವಿಕೆಟ್‌ ಪತನ: 1-61, 2-99, 3-102, 4-116, 5-128, 6-141, 7-142.
ಬೌಲಿಂಗ್‌:
ಚಾರ್ಲ್ ಲಾಂಗ್‌ವೆಲ್ಟ್ 4-0-26-2
ಇಶಾಂತ್‌ ಶರ್ಮ 4-0-31-1
ಲಕ್ಷ್ಮೀರತನ್‌ ಶುಕ್ಲಾ 3-0-30-1
ಮುರಳಿ ಕಾರ್ತಿಕ್‌ 3-0-17-1
ಏಂಜೆಲೊ ಮ್ಯಾಥ್ಯೂಸ್‌ 4-0-27-1
ಬ್ರಾಡ್‌ ಹಾಜ್‌ 2-0-14-1
ಪಂದ್ಯಶ್ರೇಷ್ಠ: ಏಂಜೆಲೊ ಮ್ಯಾಥೂಸ್‌

 

Advertisement

Udayavani is now on Telegram. Click here to join our channel and stay updated with the latest news.

Next