Advertisement

2020ರ ಐಪಿಎಲ್‌ ಗೆ ದಿನಾಂಕ ನಿಗದಿ : ಮಾ. 29ಕ್ಕೆ ಆರಂಭ ; ಮೇ 24ಕ್ಕೆ ಮುಕ್ತಾಯ

10:59 AM Jan 09, 2020 | sudhir |

ಮುಂಬಯಿ: ಮುಂದಿನ ವರ್ಷದ ಐಪಿಎಲ್‌ ಆರಂಭ ಮತ್ತು ಅಂತ್ಯದ ದಿನಾಂಕ ಅಂತಿಮಗೊಂಡಿದೆ ಎನ್ನಲಾಗಿದೆ. ಪತ್ರಿಕೆಯೊಂದರ ಪ್ರಕಾರ ಪಂದ್ಯ ಮಾ. 29ಕ್ಕೆ ಆರಂಭವಾಗಿ, ಮೇ 24ಕ್ಕೆ ಮುಗಿಯಲಿದೆ. ಮುಂದಿನ ಬಾರಿ ಪಂದ್ಯಗಳು 8 ಗಂಟೆ ಬದಲು 7.30ಕ್ಕೆ ಆರಂಭವಾಗಲಿವೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಯಾವ ದಿನವೂ ಎರಡು ಪಂದ್ಯಗಳಿರುವುದಿಲ್ಲ. ಆದ್ದರಿಂದ ದಿನಗಳ ಸಂಖ್ಯೆ 45ರಿಂದ 57ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಹಿಂದಿನ 12 ಆವೃತ್ತಿಗಳಲ್ಲಿ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭ ವಾಗಿದ್ದವು. ಇದನ್ನು 7 ಗಂಟೆಗೆ ಬದಲಾಯಿಸಬೇಕೆಂದು ನೇರ ಪ್ರಸಾರ ವಾಹಿನಿ ಸ್ಟಾರ್‌ನ್ಪೋರ್ಟ್ಸ್ ಒತ್ತಾಯಿಸಿತ್ತು. ಪಂದ್ಯಗಳು ಬಹಳ ತಡವಾಗಿ ಮುಗಿಯುತ್ತಿವೆ. ಆದ್ದರಿಂದ ಅಭಿಮಾನಿಗಳಿಗೆ ಮನೆಗೆ ಹಿಂದಿರು ಗಲು ಸಮಸ್ಯೆಯಾಗುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ. ಆದರೆ ಇದರ ಹಿಂದೆ ಟಿಆರ್‌ಪಿ ಉದ್ದೇಶವಿದೆ ಎನ್ನುವುದು ಫ್ರಾಂಚೈಸಿಗಳ ಆಕ್ಷೇಪ. ಈಗ ಪರಸ್ಪರ ಸಂಧಾನಕ್ಕೆ ಬಂದಂತಿದ್ದು, 7.30ಕ್ಕೆ ಪಂದ್ಯಾರಂಭ ಮಾಡಲು ಒಪ್ಪಿಕೊಂಡಂತಿದೆ.

45ರಿಂದ 57 ದಿನಗಳಿಗೇರಿಕೆ
ವಾರಾಂತ್ಯದ ದಿನಗಳಲ್ಲಿ ಎರಡು ಪಂದ್ಯಗಳು ನಡೆಯುವ ಕಾರಣ ಐಪಿಎಲ್‌ 45 ದಿನಗಳಲ್ಲಿ ಮುಗಿಯುತ್ತಿತ್ತು. ಇದೀಗ ದಿನಕ್ಕೊಂದೇ ಪಂದ್ಯ ನಡೆಸಲು ನಿರ್ಧರಿಸಿದ ಕಾರಣ ದಿನಗಳನ್ನು 57ಕ್ಕೇರಿಸಲಾಗುತ್ತಿದೆ. ಮಧ್ಯಾಹ್ನ ಪಂದ್ಯ ನಡೆಸುವುದರಿಂದ ಅಭಿಮಾನಿಗಳು ಮೈದಾನಕ್ಕೆ ಬರುವುದಿಲ್ಲ ಎಂದು ಫ್ರಾಂಚೈಸಿಗಳು ಆಕ್ಷೇಪಿಸಿದ್ದವು. ಇದನ್ನು ಮನಗಂಡು ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಫ್ರಾಂಚೈಸಿಗಳ ಆಕ್ಷೇಪವೇನು?
7 ಗಂಟೆಗೆ ಪಂದ್ಯಾರಂಭಿಸಲು ಫ್ರಾಂಚೈಸಿಗಳ ಆಕ್ಷೇಪವಿದೆ. ಸಂಜೆ 6ರಷ್ಟೊತ್ತಿಗೆ ಕಚೇರಿ ಕೆಲಸ ಮುಗಿಸಿ, ಅಭಿಮಾನಿಗಳು ತಮ್ಮ ಕುಟುಂಬ ಸಹಿತ ಮೈದಾನಕ್ಕೆ ಆಗಮಿಸಲು ಸಾಧ್ಯವೇ? ದಿಲ್ಲಿ, ಮುಂಬಯಿ, ಬೆಂಗಳೂರಿ ನಂತಹ ಮೆಟ್ರೋ ನಗರಗಳ ಇಂದಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ? ಎನ್ನುವುದು ಫ್ರಾಂಚೈಸಿಗಳ ಪ್ರಶ್ನೆ.

ಬಿಸಿಸಿಐ ಮೂಲಗಳು ಬೇರೆಯ ಮಾತನ್ನೇ ಹೇಳುತ್ತವೆ. ಇದು ಕೇವಲ ನೇರಪ್ರಸಾರ ಮಾಡುವ ಟಿವಿಯ ಸಮಸ್ಯೆ ಮಾತ್ರವಲ್ಲ. ಜನರ ಸಮಸ್ಯೆ ಯೂ ಹೌದು. ರಾತ್ರಿ ತಡವಾಗಿ ಪಂದ್ಯ ಮುಗಿಯುತ್ತವೆ (ರಾತ್ರಿ 11.30, ಕೆಲವೊಮ್ಮೆ 12, 1 ಗಂಟೆ ಆಗುವುದೂ ಇದೆ). ಆ ಹೊತ್ತಿನಲ್ಲಿ ಅಭಿಮಾನಿಗಳು ಮನೆಗೆ ತಲುಪುವುದು ಹೇಗೆ ಎಂದು ಬಿಸಿಸಿಐ ಕೇಳುತ್ತಿದೆ. ಈಗ ಎರಡೂ ಬಣಗಳು ಮಾತುಕತೆ ಮೂಲಕ 7.30ಕ್ಕೆ ಪಂದ್ಯಾರಂಭಿಸುವ ಮಧ್ಯಮ ಮಾರ್ಗವನ್ನು ಹಿಡಿದಂತಿದೆ.

Advertisement

ಮೊಟೇರಾದಲ್ಲಿ ಫೈನಲ್‌?
ಮುಂದಿನ ವರ್ಷದ ಐಪಿಎಲ್‌ ಅಂತಿಮ ಪಂದ್ಯ ಸದ್ಯ ನವೀಕರಣದ ಅಂತಿಮ ಹಂತದಲ್ಲಿರುವ ಗುಜರಾತ್‌ನ ಮೊಟೇರಾದಲ್ಲಿ ನಡೆಯುವ ಸಾಧ್ಯತೆಯಿದೆ. 1.10 ಲಕ್ಷ ಅಭಿಮಾನಿಗಳು ಕುಳಿತುಕೊಳ್ಳಲು ನೆರವಾಗುವ ಜತೆಗೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೈದಾನ ನಿರ್ಮಿಸಲಾಗಿದೆ. ಕ್ರಿಕೆಟೇತರ ದಿನಗಳಲ್ಲಿ ಇದೇ ಮೈದಾನವನ್ನು ಒಳಾಂಗಣ ಮೈದಾನವನ್ನಾಗಿ ಬದಲಾಯಿಸುವ ಅವಕಾಶವೂ ಇದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next