ದುಬಾೖ: ಐಪಿಎಲ್‌ನ ಎರಡು ಹೊಸ ತಂಡಗಳ ಖರೀದಿಗೆ ಸೋಮವಾರ ಘಟಾನುಘಟಿ ಕಂಪೆನಿಗಳ ನಡುವೆ ಹಣಾಹಣಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಬಿಸಿಸಿಐ 7,000ದಿಂದ 10,000 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಒಟ್ಟು 22 ಕಂಪೆನಿಗಳು ಟೆಂಡರ್ ಪಡೆದಿವೆ. ಈ ಪೈಕಿ 6 ಬಿಡ್ಡರ್‌ಗಳು ಗಂಭೀರವಾಗಿ ತಂಡ ಖರೀದಿಗೆ ಯತ್ನಿಸುವ ನಿರೀಕ್ಷೆಯಿದೆ. ಆದರೆ ನೂತನ ಮಾಲಕರ ಹೆಸರನ್ನು ಬಿಸಿಸಿಐ ಸೋಮವಾರವೇ ಪ್ರಕಟಿಸುತ್ತದೆಯೇ ಎನ್ನುವುದು ಖಚಿತವಾಗಿಲ್ಲ.
ಗೌತಮ್ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಸಂಜೀವ್ ಗೊಯೆಂಕಾ ಮಾಲಕತ್ವದ ಆರ್‌ಪಿಎಸ್‌ಜಿ ಸಮೂಹ ಸದ್ಯದ ಬಿಡ್ಡರ್‌ಗಳ ಪೈಕಿ ದೊಡ್ಡ ಹೆಸರುಗಳು. ಇಬ್ಬರಿಗೂ ಹಣಕ್ಕಂತೂ ಯಾವುದೇ ಕೊರತೆಯಿಲ್ಲ. ಈ ಪೈಕಿ ಸಂಜೀವ್ ಗೊಯೆಂಕಾಗೆ ಕ್ರಿಕೆಟ್ ಬಗ್ಗೆ ವಿಪರೀತ ಪ್ರೀತಿಯಿದೆ.
ಬಿಸಿಸಿಐ ನಿಯಮಗಳ ಪ್ರಕಾರ ಒಂದು ಕಂಪೆನಿಯಾಗಲೀ, ವ್ಯಕ್ತಿಯಾಗಲೀ ವೈಯಕ್ತಿಕವಾಗಿ ಅಥವಾ ಗರಿಷ್ಠ ಮೂವರು ಒಗ್ಗೂಡಿ ಯಾವುದೇ ತಂಡದ ಮೇಲೆ ಹಕ್ಕು ಚಲಾಯಿಸಬಹುದು. ಒಂದು ವೇಳೆ ಒಬ್ಬ ವ್ಯಕ್ತಿ ಅಥವಾ ಒಂದು ಕಂಪೆನಿ ತಂಡದ ಖರೀದಿಗೆ ಮುಂದಾಗುವುದಾದರೆ ಅದರ ವಾರ್ಷಿಕ ವಹಿವಾಟು ಕನಿಷ್ಠ 3,000 ಕೋಟಿ ರೂ. ಇರಬೇಕು. ಮೂವರು ಒಗ್ಗೂಡಿ ಖರೀದಿಸುವುದಾದರೆ ಪ್ರತಿಯೊಬ್ಬರ ತಲಾ ವಾರ್ಷಿಕ ಆದಾಯ ಕನಿಷ್ಠ 2,500 ಕೋಟಿ ರೂ. ಇರಬೇಕಾಗುತ್ತದೆ.
ಇದನ್ನೂ ಓದಿ:ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ
ಒಂದು ತಂಡದ ಮೊತ್ತ ಕನಿಷ್ಠ 2,000 ಕೋಟಿ ರೂ. ಎಂದು ಬಿಸಿಸಿಐ ನಿಗದಿ ಮಾಡಿದೆ. ಪೈಪೋಟಿ ಏರುತ್ತ¤ ಮೊತ್ತ ಕನಿಷ್ಠ 3,500 ಕೋಟಿ ರೂ., ಗರಿಷ್ಠ 5,000 ಕೋಟಿ ರೂ.ಗೆ ತಲುಪುವ ಲೆಕ್ಕಾಚಾರದಲ್ಲಿ ಬಿಸಿಸಿಐ ಇದೆ. ಈಗಾಗಲೇ 2023ರಿಂದ 27ರ ವರೆಗಿನ ಐಪಿಎಲ್ ನೇರ ಪ್ರಸಾರದಿಂದ 35,000 ಕೋಟಿ ರೂ. ಬರುವ ಅಂದಾಜು ಮಾಡಲಾಗಿದೆ. ಐಪಿಎಲ್ ತಂಡಗಳು 10ಕ್ಕೆ ಏರುವುದರಿಂದ ಈ ರೀತಿಯ ಲೆಕ್ಕಾಚಾರವಿದೆ. ಹೀಗಿರುವಾಗ ತಂಡ ಖರೀದಿಸುವ ಫ್ರಾಂಚೈಸಿಗಳಿಗೂ ಈ ಹಣದಲ್ಲಿ ಪಾಲು ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.