Advertisement
ಯಾರಿವರು ರೀನಾ?ಮೂಲತಃ ರೀನಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯವರು. ಅಲ್ಲಿನ ರೋಟರಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಳಿಕ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಬಳಿಕ ಕರಾವಳಿಯ ಎಂಐಟಿಇ ಮಿಜಾರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರ್ತಿಗೊಳಿಸಿದರು. ನಿರೂಪಕಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ನೂರು ಕನಸಿನೊಂದಿಗೆ ಬೆಂಗಳೂರಿಗೆ ಆಗಮಿಸಿದರು. ಆರಂಭದಲ್ಲಿ ಮಲ್ಟಿ ನ್ಯಾಷನಲ್ ಕಂಪೆನಿ (ಎಂಎನ್‌ಸಿ)ಯಲ್ಲಿ ಉದ್ಯೋಗ ಮಾಡಿದರು. ದಿನ ಹೋದಂತೆ ಈ ಕೆಲಸ ಅವರಿಗೆ ಬೇಸರ ತರಿಸಿತು. ಅದೇ ವೇಳೆಗೆ, ನಿರೂಪಕಿಯಾಗಿ ಬೆಳೆಯಬೇಕು ಎನ್ನುವ ಕನಸು ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಒಂದು ದಿನ ಗುರುವೊಬ್ಬರು ಅವರಿಗೆ ನೀನು ನಿನ್ನ ಗುರಿಯತ್ತ ನೋಡು, ಕೈ ತುಂಬ ಬರುವ ಸಂಬಳದ ಕಡೆಗಲ್ಲ ಎಂದು ಸಲಹೆ ನೀಡಿದರು. ಇದರಿಂದ ಉತ್ತೇಜಿತರಾದ ರೀನಾ ತಮ್ಮ ಎಂಎನ್‌ಸಿ ಕೆಲಸಕ್ಕೆ ಗುಡ್ ಬೈ ಹೇಳಿದರು. ನಿರೂಪಕಿಯಾಗಿ ಕೆಲಸಕ್ಕೆ ಇಳಿದರು.
ರೀನಾ ಡಿಸೋಜಾ, 8 ವರ್ಷಗಳಿಂದ ಟೀವಿ, ಸ್ಟೇಜ್ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷ್, ಕನ್ನಡ, ಹಿಂದಿ, ತುಳು, ಮಂಗಳೂರು-ಗೋವಾ ಕೊಂಕಣಿ, ಮರಾಠಿ, ತಮಿಳು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ರೀನಾ 6 ವರ್ಷದಲ್ಲಿ 900ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ. ಕ್ರೀಡಾಲೋಕಕ್ಕೆ ಬಂದು 1 ವರ್ಷ
ಕಾರ್ಪೋರೇಟ್ ಸಂಸ್ಥೆಯಲ್ಲಿ ಯಶಸ್ವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ರೀನಾ, ಕಳೆದ 1 ವರ್ಷದಿಂದ ಕ್ರೀಡಾ ನಿರೂಪಕಿಯಾಗಿ ಯಶಸ್ವಿಯಾಗಿದ್ದಾರೆ. ಇಂದು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಕನ್ನಡದಲ್ಲಿ ಮಾತನಾಡುವುದನ್ನು ಕಾಣುವುದೇ ಅಪರೂಪ. ಅಂತಹುದರಲ್ಲಿ ರೀನಾ ಮುತ್ತಿನಂತೆ ಪಕ್ಕಾ ಕನ್ನಡದಲ್ಲಿ ಪಟ್…ಪಟ್ ಮಾತನಾಡುತ್ತಾರೆ. ಕ್ರೀಡಾ ಲೋಕದ ಕಲಿಗಳ ಸಂದರ್ಶನ ನಡೆಸುತ್ತಾರೆ. ಕಳೆದ ವರ್ಷದ ಪೊ›ಕಬಡ್ಡಿ, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಹಾಗೂ ಇದೀಗ ಮೊದಲ ಸಲ ಐಪಿಎಲ್ ನೇರ ಪ್ರಸಾರದಲ್ಲಿ ರೀನಾ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ.
Related Articles
ಇನ್ನೆರಡು ವರ್ಷದಲ್ಲಿ ನಂ.1 ನಿರೂಪಕಿಯಾಗುವ ಕನಸು ಕಾಣುತ್ತಿದ್ದೇನೆ. ದಿನಂಪ್ರತಿ ಅದಕ್ಕಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದೇನೆ. ಜನರನ್ನು ನಗಿಸುವುದು, ಅವರಿಗೆ ಮಾತಿನಿಂದ ಮನೋರಂಜನೆ ನೀಡುವುದು ನನ್ನ ಕೆಲಸ. ಗ್ರಾಮೀಣ ಭಾಗದಿಂದ ಬಂದು ಇಂದು ದೇಶ-ವಿದೇಶದಲ್ಲಿ 900ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಕುರಿತು ನನಗೆ ಹೆಮ್ಮೆ ಇದೆ. ಕುಟುಂಬದ ಸದಸ್ಯರ, ಗುರುಗಳ ಆಶೀರ್ವಾದದಿಂದಲೇ ಇದೆಲ್ಲ ಸಾಧ್ಯವಾಗಿದೆ.
-ರೀನಾ ಡಿಸೋಜಾ, ಕ್ರೀಡಾ ನಿರೂಪಕಿ
Advertisement
ಹೇಮಂತ್ ಸಂಪಾಜೆ