ಹೊಳಲ್ಕೆರೆ: ಬೆಟ್ಟಿಂಗ್ ದಂಧೆ ಮೋಸಕ್ಕೆ ಸಿಲುಕಿದ್ದ ಗಂಡನಿಗೆ ಸಾಲಗಾರರು ನೀಡುತ್ತಿದ್ದ ಹಿಂಸೆಗೆ ಬೇಸತ್ತು ಪತ್ನಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಟ್ಟಣದಲ್ಲಿ ಶಿವಮೊಗ್ಗ ರಸ್ತೆಯ ಬಸವ ಲೇಔಟ್ ನಿವಾಸಿ ರಂಚಿತಾ (23) ಅತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬೆಟ್ಟಿಂಗ್ ದಂಧೆಗೆ ಪ್ರೇರಣೆ ನೀಡಿ ಸಾಲ ಕೊಟ್ಟವರ ಕಾಟ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನಲೆಯಲ್ಲಿ ತೀವ್ರ ಮನನೊಂದ ಮಗಳು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ರಂಚಿತಾ ತಂದೆ ವೆಂಕಟೇಶ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಚಿತಾ ಐದು ವರ್ಷಗಳ ಹಿಂದೆ ಪಟ್ಟಣದ ಮುಖಂಡ ಬಾಲು ಪ್ರಕಾಶ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಲಾ ದಂಪತಿಯ ಪುತ್ರನಾದ ಇಂಜಿನಿಯರ್ ವೃತ್ತಿ ಮಾಡಿಕೊಂಡಿದ್ದ ದರ್ಶನ್ ಬಾಲು ನನ್ನು ವಿವಾಹವಾಗಿದ್ದು, ನಾಲ್ಕು ವರ್ಷ ಗಂಡು ಮಗುವಿದೆ.
ಹೊಳಲ್ಕೆರೆ ಪಟ್ಟಣದ ನಿವಾಸಿಗಳಾದ ಗಿರೀಶ್, ರಾಘು, ಚಿತ್ರದುರ್ಗ ಸುದೀಪ್, ತಿಪ್ಪೇಸ್ವಾಮಿ, ವೆಂಕಟೇಶ್, ಗುರು, ವಾಗೀಶ್, ರಾಕೇಶ್, ಪಾವಗಡದ ಪೊತರೆಡ್ಡಿ, ಅಜ್ಜಂಪುರ ಕಂಟ್ರಾಕ್ಟರ್ ಹೊನ್ನಪ್ಪ, ಹಿರಿಯೂರು ಮಹಾಂತೇಶ್, ಕಂಟ್ರಾಕ್ಟರ್ ಜಗನ್ನಾಥಶಿರಾ ಮತ್ತಿತರರು ಆಳಿಯ ದರ್ಶನ್ ಇವರಿಗೆ ಐಪಿಎಲ್ ಬೆಟ್ಟಿಂಗ್ ನಿಂದ ಕೋಟಿ ಕೋಟಿ ಸಂಪಾದಿಸಬಹುದು ಎಂದು ಪುಸಲಾಯಿಸಿದ್ದು, ಹಣವಿಲ್ಲ ಎಂದು ಹೇಳಿದರೂ ಖಾಲಿ ಚೆಕ್ ಪಡೆದು ಬೆಟ್ಟಿಂಗ್ ಗೆ ಹಣ ಕಟ್ಟಿಸಿದ್ದಾರೆ. ದಂಧೆಯಲ್ಲಿ ಸೊಲಾದ ಬಳಿಕ ಹಣಕೊಡದಿದ್ದರೆ ಚೆಕ್
ಗಳನ್ನು ಕೋರ್ಟಿಗೆ ಹಾಕಿ ಜೈಲಿಗೆ ಕಳುಸಿವುದಾಗಿ ಬೇದರಿಸಿದ್ದಾರೆ. ಹಣವನ್ನು ದರ್ಶನ್ ತಂದೆ ಪ್ರಕಾಶ್ ಅವರು ತೀರಿಸುವ ಭರವಸೆ ನೀಡಿದ್ದರೂ, ಪದೆಪದೆ ಮನೆಗೆ ಪೋನ್ ಮಾಡಿ, ಬೆದರಿಕೆ ಹಾಕಿ, ಮಾನಸಿಕ ಕಿರಿಕುಳ, ಹಿಂಸೆ ನೀಡಿದ್ದು, ಇದನ್ನು ಸಹಿಸಿಕೊಳ್ಳದೆ ಮಗಳು ರಂಚಿತಾ ಸೋಮವಾರ ಸಂಜೆ ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ. ನಾವು ತತ್ ಕ್ಷಣವೇ ನೋಡಿ ಅಸ್ಪತ್ರೆಗೆ ಕರೆದುಕೊಂಡು ಹೋದರೂ ಫಲಕಾರಿಯಾಗಿಲ್ಲ. ನಮ್ಮ ಮಗಳ ಸಾವಿಗೆ ಬೆಟ್ಟಿಂಗ್ ದಂಧೆದಾರರೆ ಕಾರಣವಾಗಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಂಚಿತಾ ತಂದೆ ವೆಂಕಟೇಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಶಿವ ಮತ್ತು ಗಿರೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ಸುರೇಶ್ ತಿಳಿಸಿದ್ದಾರೆ.