Advertisement
ಬೀಸತೊಡಗಿದೆ ಬ್ಯಾಂಟನ್ ಹವಾಇಂಗ್ಲೆಂಡ್ ದೇಶೀ ಕ್ರಿಕೆಟ್‌ನಲ್ಲಿ ಆಡಿಕೊಂಡಿದ್ದ ಥಾಮಸ್ ಬ್ಯಾಂಟನ್ ದೊಡ್ಡ ಸದ್ದು ಮಾಡಿದ್ದಾರೆ. ಕೇವಲ 20 ವರ್ಷದ ಈ ಕ್ರಿಕೆಟಿಗ ಸಾಮರ್ಸೆಟ್ ಪರ ಟಿ20ಯಲ್ಲಿ ಬಿರುಗಾಳಿಯೆಬ್ಬಿಸಿದ್ದಾರೆ. 17 ಪಂದ್ಯಗಳಲ್ಲಿ 591 ರನ್ ಪೇರಿಸಿದ್ದು, ಸಿಕ್ಸರ್, ಬೌಂಡರಿಗಳ ರಾಶಿ ಹಾಕಿದ್ದಾರೆ. ರಾಯಲ್ ಲಂಡನ್ ಕಪ್, ಕೌಂಟಿಯಲ್ಲೂ ಮೆರೆದಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಈತನ ಬಿರುಗಾಳಿ ಬ್ಯಾಟಿಂಗಿಗೆ ಕ್ರಿಕೆಟ್ ವಿಶ್ವ ಮೆಚ್ಚುಗೆ ಸೂಚಿಸಿದೆ. ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳು ಇವರ ಖರೀದಿಗೆ ಮುಗಿಬೀಳುವ ಎಲ್ಲ ಸಾಧ್ಯತೆಗಳೂ ಇವೆ.
ಮಿಚೆಲ್ ಸ್ಟಾರ್ಕ್ ವಿಶ್ವ ಕ್ರಿಕೆಟಿನ ಭಯಾನಕ ವೇಗಿ. ಆದರೆ ಯಾವಾಗಲೂ ಗಾಯದ್ದೇ ಸಮಸ್ಯೆ. ಹೀಗಾಗಿ ಐಪಿಎಲ್‌ಗೂ ಇವರಿಗೂ ಆಗಿಬರುತ್ತಿಲ್ಲ. 2015ರ ಒಂದೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿ ಮಿಂಚಿನ ಬೌಲಿಂಗ್ ಮಾಡಿದ್ದರು. 2016ರಲ್ಲಿ ಗಾಯದಿಂದ ಆಡಲಿಲ್ಲ, 2017ರಲ್ಲಿ ಆಡಲು ಅವರೇ ಬಯಸಲಿಲ್ಲ. 2018ರ ಆವೃತ್ತಿಯಲ್ಲಿ ಕೆಕೆಆರ್‌ಗೆ 9.4 ಕೋಟಿ ರೂ. ಮೊತ್ತಕ್ಕೆ ಆಯ್ಕೆಯಾಗಿದ್ದರು. ಆದರೆ ಅವರನ್ನು ದಿಢೀರನೆ ತಂಡ ಕೈಬಿಟ್ಟಿತು. ಈಗ 2020ರ ಐಪಿಎಲ್‌ನಲ್ಲಿ ಆಡುವ ಉದ್ದೇಶ ಹೊಂದಿದ್ದಾರೆ. ಅವರ ಬಗ್ಗೆ ಎಲ್ಲ ಫ್ರಾಂಚೈಸಿಗಳು ಭಾರೀ ನಿರೀಕ್ಷೆ ಹೊಂದಿವೆ. ಹೊಸ ಅವತಾರದ ನೀಶಮ್
ನ್ಯೂಜಿಲ್ಯಾಂಡ್‌ನ 29 ವರ್ಷದ ಆಲ್‌ರೌಂಡರ್ ಜಿಮ್ಮಿ ನೀಶಮ್ ಏಕದಿನ ವಿಶ್ವಕಪ್‌ನಲ್ಲಿ ಬಹಳ ಸುದ್ದಿ ಮಾಡಿದ್ದರು. ಕಿವೀಸ್ ಫೈನಲ್ ತಲುಪುವಲ್ಲಿ ಇವರ ಕೊಡುಗೆ ದೊಡ್ಡದು. ಎಡಗೈ ಬ್ಯಾಟಿಂಗ್, ಬಲಗೈ ವೇಗದ ಬೌಲಿಂಗ್ ಇವರ ಸ್ಪೆಷಾಲಿಟಿ. 2014ರಲ್ಲಿ ಒಮ್ಮೆ ಮಾತ್ರ ಐಪಿಎಲ್ ಆಡಿದ್ದಾರೆ. ಅಂದು ಡೆಲ್ಲಿ ಪರ ಬರೀ 42 ರನ್ ಗಳಿಸಿದ ಅವರು, ಒಂದೇ ವಿಕೆಟ್ ಕಿತ್ತಿದ್ದರು. ಬಳಿಕ ಐಪಿಎಲ್‌ನಿಂದ ಹೊರಬಿದ್ದರು. ಇದೀಗ ಕೆರಿಬಿಯನ್ ಲೀಗ್‌ನಲ್ಲಿ ಟ್ರಿನ್‌ಬ್ಯಾಗೊ ನೈಟ್‌ರೈಡರ್ಸ್ ತಂಡದ ಪರ ಅಮೋಘವಾಗಿ ಬೌಲಿಂಗ್ ಮಾಡಿ 11 ವಿಕೆಟ್ ಕಿತ್ತಿದ್ದಾರೆ. ನೀಶಮ್ ಹೊಸ ಅವತಾರವನ್ನು ನೋಡಿರುವ ಐಪಿಎಲ್ ಮಂದಿ ಇವರಿಗಾಗಿ ಸ್ಪರ್ಧೆ ಮಾಡುವ ಎಲ್ಲ ಸಾಧ್ಯತೆಯಿದೆ.
Related Articles
ಕೇವಲ 18 ವರ್ಷದ ಮುಂಬೈ ಹುಡುಗ ಯಶಸ್ವಿ ಜೈಸ್ವಾಲ್ ಇಷ್ಟು ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ. ಆದರೀಗ ಭಾರೀ ಸಂಚಲನ ಮೂಡಿಸಿದ್ದಾರೆ. ಅಂಡರ್-19 ಏಶ್ಯ ಕಪ್‌ನಲ್ಲಿ ಆಡಿ, ಮಿಂಚು ಹರಿಸಿದ್ದಾರೆ. 2017-18ರ ವಿಜಯ್ ಮರ್ಚೆಂಟ್ ಕೂಟದಲ್ಲಿ 81.80 ಸರಾಸರಿಯಲ್ಲಿ ರನ್ ಗಳಿಸಿದ್ದರು. ಈ ವರ್ಷ ದೇಶೀ ಏಕದಿನ ಹಾಗೂ ರಣಜಿಯಲ್ಲೂ ಕಣಕ್ಕಿಳಿದಿದ್ದಾರೆ. ಬಹಳ ದೂರ ಸಾಗಬೇಕಾಗಿದ್ದರೂ, ಟಿ20 ಮಟ್ಟಿಗೆ ಜೈಸ್ವಾಲ್ ಐಪಿಎಲ್ ಫ್ರಾಂಚೈಸಿಗಳ ಡಾರ್ಲಿಂಗ್ ಆಗುವುದರಲ್ಲಿ ಅನುಮಾನವೇ ಇಲ್ಲ.
Advertisement
ಬಾದ್ ಶಾ ಶಾರೂಖ್ ಖಾನ್ಶಾರೂಖ್ ಖಾನ್ ಎಂದು ಹೇಳಿದೊಡನೆ ಎಲ್ಲರ ಕಣ್ಮುಂದೆ ಸುಳಿಯುವುದು ಬಾಲಿವುಡ್ ಬಾದ್‌ಶಾ. ಈಗ ಅವರ ಹೆಸರನ್ನು ಮರೆತುಬಿಡಿ. ತಮಿಳುನಾಡು ಕ್ರಿಕೆೆಟ್‌ನಲ್ಲೊಬ್ಬ ಶಾರೂಖ್ ಖಾನ್ ಇದ್ದಾರೆ. ಯಾರಿಗೆ ಗೊತ್ತು? ಮುಂದಿನ ದಿನಗಳಲ್ಲಿ ಶಾರೂಖ್ ಖಾನ್ ಎಂದರೆ ಈ ಹುಡುಗನ ನೆನಪಾಗುವ ಕಾಲವೂ ಬರಬಹುದು. ಹಾಗಿದೆ ಈತನ ಸ್ಫೋಟಕ ಬ್ಯಾಟಿಂಗ್! ತ.ನಾಡು ಟಿ20 ಲೀಗ್‌ನಲ್ಲಿ 2 ವರ್ಷಗಳಿಂದ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ದುಬಾರಿ ಯುವ ಆಟಗಾರರಲ್ಲೊಬ್ಬರಾಗುವುದು ಖಚಿತ.