ದುಬೈ: ಜಾರ್ಖಂಡ್ ವಿಕೆಟ್-ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರಾ ಐಪಿಎಲ್ 2024 ರ ಹರಾಜಿನಲ್ಲಿ ಬಹು ತಂಡಗಳ ಆಸಕ್ತಿಯನ್ನು ಕೆರಳಿಸಿದರು. ಅಂತಿಮವಾಗಿ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕುಶಾಗ್ರಾ ಅವರನ್ನು 7.2 ಕೋಟಿ ರೂ ಗೆ ಖರೀದಿ ಮಾಡಿತು.
ಚೆನ್ನೈ ಸೂಪರ್ ಕಿಂಗ್ಸ್ , ಗುಜರಾತ್ ಟೈಟಾನ್ಸ್ ಕೂಡಾ ಕುಮಾರ್ ಕುಶಾಗ್ರಾ ಖರೀದಿ ಮನಸ್ಸು ಮಾಡಿತ್ತು. ಹಾಗಾದರೆ ಯಾರು ಈ ಕುಮಾರ್ ಕುಶಾಗ್ರಾ? ಯಾಕೆ ಈ ಬೇಡಿಕೆ? ಇಲ್ಲಿದೆ ಮಾಹಿತಿ.
19 ವರ್ಷ ವಯಸ್ಸಿನ ಕುಶಾಗ್ರಾ ಈ ವರ್ಷದ ಆರಂಭದಲ್ಲಿ ದೇವಧರ್ ಟ್ರೋಫಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 109.13 ಸ್ಟ್ರೈಕ್ ರೇಟ್‌ನಲ್ಲಿ 227 ರನ್ ಗಳೊಂದಿಗೆ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಪೂರ್ವ ವಲಯ ಪರ ಆಡುತ್ತಿದ್ದ ಕುಶಾಗ್ರಾ ದಕ್ಷಿಣ ವಲಯದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು.
ಕುಶಾಗ್ರಾ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಿದವರು. ಮಹಾರಾಷ್ಟ್ರ ವಿರುದ್ಧ 355 ರನ್ ಗಳ ಚೇಸ್ ಮಾಡುವ ವೇಳೆ 37 ಎಸೆತಗಳಲ್ಲಿ 67 ರನ್ ಗಳಿಸಿದರು.
ಬಲಗೈ ಬ್ಯಾಟರ್ 2020 ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು.
2022 ರಲ್ಲಿ ಕುಶಾಗ್ರಾ ಅವರು ಕೇವಲ 17 ವರ್ಷದವರಾಗಿದ್ದಾಗ ರಣಜಿ ಟ್ರೋಫಿಯ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ನಾಗಾಲ್ಯಾಂಡ್ ವಿರುದ್ಧ ದ್ವಿಶತಕ ಗಳಿಸಿದರು.