ಕೊಚ್ಚಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಇದೀಗ ಕೊಚ್ಚಿಯಲ್ಲಿ ಆರಂಭವಾಗಿದೆ. ಹತ್ತು ತಂಡಗಳು ಸೇರಿ ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಮುಂದಾಗಿದ್ದು, ಆರಂಭಿಕ ಸುತ್ತಿನಲ್ಲಿ ಇಂಗ್ಲೆಂಡ್ ಹ್ಯಾರಿ ಬ್ರೂಕ್ ಅಚ್ಚರಿ ಮೂಡಿಸಿದ್ದಾರೆ. 18.50 ಕೋಟಿ ರೂ ಗೆ ಸೇಲಾದ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದ ಅತೀ ದುಬಾರಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಹರಾಜಿನ ಮೊದಲ ಹೆಸರು ಬಂದಿದ್ದು ಮಾಜಿ ಹೈದರಾಬಾದ್ ಆಟಗಾರ ಕೇನ್ ವಿಲಿಯಮ್ಸನ್ ಅವರದ್ದು. ಮೂಲಬೆಲೆ 2 ಕೋಟಿ ರೂ ಗೆ ಗುಜರಾತ್ ಖರೀದಿ ಮಾಡಿತು.
ಇತ್ತೀಚೆಗೆ ಪಾಕ್ ವಿರುದ್ಧ ಸತತ ಮೂರು ಶತಕ ಬಾರಿಸಿದ ಹ್ಯಾರಿ ಬ್ರೂಕ್ ಈ ಹರಾಜಿನಲ್ಲಿ ಬೋನಸ್ ಪಡೆದರು. ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಬಿಡ್ ನಲ್ಲಿ ತೊಡಗಿದ್ದವು. ಕೊನೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಬ್ರೂಕ್ ಅವರನ್ನು 13.25 ಕೋಟಿ ರೂ ಗೆ ಖರೀದಿ ಮಾಡಿತು.
ಕಳೆದ ಬಾರಿಯ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು ಕೂಡಾ ಸನ್ ರೈಸರ್ಸ್ ಹೈದರಾಬಾದ್ ತಂಡವು 8.25 ಕೋಟಿಗೆ ಖರೀದಿ ಮಾಡಿತು. ಎಸ್ ಆರ್ ಎಚ್ ತಂಡವನ್ನು ಮಯಾಂಕ್ ಮುನ್ನಡೆಸುವ ಸಾಧ್ಯತೆಯಿದೆ.
ಅಜಿಂಕ್ಯ ರಹಾನೆ ಅವರು 50 ಲಕ್ಷಕ್ಕೆ ಚೆನ್ನೈ ತಂಡದ ಪಾಲಾದರು. ಜೋ ರೂಟ್, ಶಕೀಬ್ ಅಲ್ ಹಸನ್ ಅನ್ ಸೋಲ್ಡ್ ಆದರು.
ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಟಿ20 ವಿಶ್ವಕಪ್ ಹೀರೋ ಸ್ಯಾಮ್ ಕರ್ರನ್ ಅವರು ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಕರ್ರನ್ ಹೆಸರು ಬರುತ್ತಿದ್ದಂತೆ ರಾಜಸ್ಥಾನ, ಪಂಜಾಬ್, ಚೆನ್ನೈ ತಂಡಗಳು ಭರ್ಜರಿ ಬಿಡ್ ಮಾಡಿದವು. ಕೊನೆಗೆ ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ತಂಡದ ಪಾಲಾದರು.