ಮೊಹಮ್ಮದ್ ಅಜರುದ್ದೀನ್!
ಭಾರತದ ಮಾಜಿ ಕ್ರಿಕೆಟಿಗನನ್ನು ನೆನಪಿಸುವ ಹೆಸರನ್ನು ಕಾಸರಗೋಡಿನ ಈ ಓಪನರ್‌ಗೆ ಇರಿಸಿದ್ದು ಅಣ್ಣ. ಬದುಕಿನ ವಿವಿಧ ಘಟ್ಟಗಳಲ್ಲಿ ಹೆತ್ತವರನ್ನು ಕಳೆದುಕೊಂಡ ಈ ಹೊಡಿಬಡಿ ಆಟಗಾರನಿಗೆ ಸೋದರರ ಸಂಪೂರ್ಣ ಪ್ರೋತ್ಸಾಹ ಲಭಿಸಿತು. ಜತೆಗೆ ಸಂಜು ಸ್ಯಾಮ್ಸನ್ ಕೂಡ ಬೆಂಗಾವಲಾಗಿ ನಿಂತರು. ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೊತ್ತಕ್ಕೆ ಆರ್‌ಸಿಬಿ ಸೆಳೆದುಕೊಂಡಾಗ ಅಜರ್ ಅವರ ಒಂದು ಕನಸು ಸಾಕಾರಗೊಂಡಿತ್ತು.
ಅಂದಹಾಗೆ ಇವರ ಉಳಿದ ಕನಸುಗಳೆಂದರೆ ಸ್ವಂತ ಮನೆ, ರಣಜಿಯಲ್ಲಿ 4 ಶತಕ ಬಾರಿಸುವುದು, ಮರ್ಸಿಡೆಸ್ ಕಾರೊಂದರ ಖರೀದಿ ಹಾಗೂ 2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವುದು. ಈ ಅಭಿಲಾಷೆಯನ್ನೆಲ್ಲ ಅಜರುದ್ದೀನ್ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.
ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮುಂಬಯಿ ವಿರುದ್ಧ 2ನೇ ಅತೀ ವೇಗದ ಶತಕ ಬಾರಿಸಿದಾಗ (137 ರನ್) ಅಜರ್ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದವು. ಇವರೀಗ ಆರ್‌ಸಿಬಿ ತಂಡದ ಸದಸ್ಯ. ಕೊಹ್ಲಿ, ಎಬಿಡಿ, ಮ್ಯಾಕ್ಸ್‌ವೆಲ್ ಅವರಂಥ ಘಟಾನುಘಟಿ ಕ್ರಿಕೆಟಿಗರಿರುವ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಸರಗೋಡಿನ ಕನಸುಗಾರ ಕ್ರಿಕೆಟಿಗನೂ ಇರುವುದೊಂದು ವಿಶೇಷ.
“ನಾನು ಆರ್‌ಸಿಬಿಯ ಫಾಲೋವರ್. ಇದಕ್ಕೆ ಕಾರಣ ವಿರಾಟ್ ಭಾಯ್. ಇನ್ನು ಇವರ ಜತೆ ಆಡುವುದನ್ನು ಯೋಚಿಸಿಯೇ ರೋಮಾಂಚನವಾಗುತ್ತದೆ…’ ಎನ್ನುತ್ತಾರೆ ಅಜರುದ್ದೀನ್.
ನನಗೆ ಗೊತ್ತು. ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠವಾಗಿದೆ. ಆದರೆ ನಾನು ಅವಕಾಶಕ್ಕಾಗಿ ಕಾಯುತ್ತೇನೆ. ರಾಜ್ಯದ ಸಹ ಆಟಗಾರ ಸಚಿನ್ ಬೇಬಿ ಉಪಸ್ಥಿತಿಯಿಂದ ಖಂಡಿತ ನೆರವಾಗಲಿದೆ. ಇದು ನನ್ನ ಬದುಕಿನ ನೂತನ ಅಧ್ಯಾಯ.
– ಮೊಹಮ್ಮದ್ ಅಜರುದ್ದೀನ್