ದುಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮಿನಿ ಹರಾಜು ದುಬೈನ ಕೊಕಾ ಕೋಲಾ ಅರೆನಾದಲ್ಲಿ ಆರಂಭವಾಗಿದೆ. 333 ಆಟಗಾರರು ಹರಾಜಿಗೆ ಒಳಗಾಗಿದ್ದಾರೆ. ಹತ್ತು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಖರೀದಿಗೆ ಮುಂದಾಗಿವೆ.
ಹರಾಜಿಗೆ ಬಂದ ಮೊದಲ ಹೆಸರು ವೆಸ್ಟ್ ಇಂಡೀಸ್ ನ ರೊಮನ್ ಪೊವೆಲ್ ಅವರದ್ದು. ರಾಜಸ್ಥಾನ ರಾಯಲ್ಸ್ ತಂಡವು ಅವರನ್ನು 7.4 ಕೋಟಿ ರೂಗೆ ಖರೀದಿ ಮಾಡಿತು. ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಕೋಟಿ ರೂ ನೀಡಿ ಖರೀದಿ ಮಾಡಿತು.
ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ ಖರೀದಿಗೆ ಚೆನ್ನೈ ಮತ್ತು ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತು. ಕೊನೆಗೆ ಹೈದರಾಬಾದ್ ತಂಡವು 6.8 ಕೋಟಿ ರೂ ಗೆ ಟ್ರಾವಿಸ್ ರನ್ನು ಖರೀದಿಸಿತು. ಲಂಕಾ ಆಲ್ ರೌಂಡರ್ ವಾನಿಂದು ಹಸರಂಗ ಅವರನ್ನು ಹೈದರಾಬಾದ್ ಮೂಲ ಬೆಲೆ 1.5 ಕೋಟಿ ರೂ ಖರೀದಿಸಿತು.
ಕಿವೀಸ್ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಭಾರಿ ಹಣ ಪಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಸಿಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಚಿನ್ ಅವರನ್ನು 1.8 ಕೋಟಿ ರೂ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಶಾರ್ದೂಲ್ ಠಾಕೂರ್ ಅವರನ್ನು ನಾಲ್ಕು ಕೋಟಿ ಗೆ ಚೆನ್ನೈ ಖರೀದಿಸಿತು.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರು ಉತ್ತಮ ಬೇಡಿಕೆ ಪಡೆದರು. ಚೆನ್ನೈ, ಆರ್ ಸಿಬಿ, ಹೈದರಾಬಾದ್ ನಡುವೆ ಪೈಪೋಟಿ ನಡೆಯಿತು. ಕೊನೆಗೆ ಕಮಿನ್ಸ್ ಅವರು ದಾಖಲೆಯ 20.5 ಕೋಟಿ ರೂ ಗೆ ಹೈದರಾಬಾದ್ ತಂಡದ ಪಾಲಾದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರ ಪಡೆದ ಅತಿ ಹೆಚ್ಚು ಹಣ.
ಕನ್ನಡಿಗರಾದ ಮನೀಷ್ ಪಾಂಡೆ, ಕರುಣ್ ನಾಯರ್, ಆಸೀಸ್ ನ ಸ್ಟೀವ್ ಸ್ಮಿತ್ ಅನ್ ಸೋಲ್ಡ್ ಆದರು.