ಹೈದರಾಬಾದ್: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ತಯಾರಿ ನಡೆಸುತ್ತಿರುವ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ ಎಚ್) ತಂಡವು ಈ ಸೀಸನ್ ಗೆ ನೂತನ ನಾಯಕನನ್ನು ನೇಮಿಸಿದೆ. ಆಸ್ಟ್ರೇಲಿಯಾದ ವಿಶ್ವಕಪ್ ಗೆದ್ದ ನಾಯಕ ಪ್ಯಾಟ್ ಕಮಿನ್ಸ್ ಅವರು ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ.
ಪ್ಯಾಟ್ ಕಮಿನ್ಸ್ ಅವರು ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದನ್ನು ಮುನ್ನಡೆಸಲಿದ್ದಾರೆ. ಪ್ಯಾಟ್ ಕಮಿನ್ಸ್ ಅವರೊಂದಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸಹಾಯಕ ಕೋಚ್ ಆಗಿರುವ ಡೇನಿಯಲ್ ವೆಟೋರಿ ಅವರು ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ಈ ಬಾರಿ ದುಬೈನಲ್ಲಿ ನಡೆದಿದ್ದ ಹರಾಜಿನಲ್ಲಿ ಕಮಿನ್ಸ್ ಅವರನ್ನು ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 20.5 ಕೋಟಿ ರೂ ನೀಡಿ ಖರೀದಿಸಿತ್ತು. 2015 ರಿಂದ 2021 ರವರೆಗೆ 67 ಪಂದ್ಯಗಳಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಿದ ಡೇವಿಡ್ ವಾರ್ನರ್ ನಂತರ ಹೈದರಾಬಾದ್ ನಾಯಕರಾದ ಎರಡನೇ ಆಸ್ಟ್ರೇಲಿಯನ್ ಆಗಿದ್ದಾರೆ. ಕಮಿನ್ಸ್ ಈ ಹಿಂದೆ ಐಪಿಎಲ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದರು.
ಕಳೆದ ಸೀಸನ್ ನಲ್ಲಿ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ ಅವರು ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದಾರೆ. ಸನ್ ರೈಸರ್ಸ್ ಫ್ರಾಂಚೈಸಿಯ ದಕ್ಷಿಣ ಆಫ್ರಿಕಾದ ಈಸ್ಟರ್ನ್ ಕೇಪ್ ತಂಡವನ್ನು ಮುನ್ನಡೆಸಿದ ಮಾರ್ಕ್ರಮ್ ಎರಡು ಬಾರಿ ಕಪ್ ಗೆದ್ದರೂ, ಐಪಿಎಲ್ ನಲ್ಲಿ ನಿರೀಕ್ಷಿತ ಯಶಸ್ಸು ಪಡೆದಿಲ್ಲ.