ಲಕ್ನೋ: ಮುಂಬೈಯನ್ನು ಬಿಗಿಯಾದ ಬೌಲಿಂಗ್ ದಾಳಿ ಮೂಲಕ ಹಿಡಿದು ನಿಲ್ಲಿಸಿದ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ 4 ವಿಕೆಟ್‌ಗಳ ಜಯ ಸಾಧಿಸಿ 3ನೇ ಸ್ಥಾನಕ್ಕೆ ಏರಿದೆ.
ಮುಂಬೈ ಇಂಡಿಯನ್ಸ್ 7 ವಿಕೆಟಿಗೆ ಕೇವಲ 144 ರನ್ ಗಳಿಸಿದರೆ, ಲಕ್ನೋ 19.2 ಓವರ್‌ಗಳಲ್ಲಿ 6 ವಿಕೆಟಿಗೆ 145 ರನ್ ಮಾಡಿತು. ಇದು 10 ಪಂದ್ಯಗಳಲ್ಲಿ ರಾಹುಲ್ ಪಡೆ ಸಾಧಿಸಿದ 6ನೇ ಗೆಲುವು. ಚೇಸಿಂಗ್ ವೇಳೆ ಸ್ಟೋಯಿನಿಸ್ 62, ರಾಹುಲ್ 28 ರನ್ ಹೊಡೆದರು.
ಬರ್ತ್‌ಡೇ ಸಡಗರದಲ್ಲಿದ್ದ ರೋಹಿತ್ ಶರ್ಮ ನಾಲ್ಕೇ ರನ್ನಿಗೆ ಆಟ ಮುಗಿಸುವುದರೊಂದಿಗೆ ಮುಂಬೈ ಕುಸಿತ ಮೊದಲ್ಗೊಂಡಿತು. ಇದರೊಂದಿಗೆ ಬರ್ತ್‌ಡೇಯಂದು ಆಡಿದ ಐದೂ ಐಪಿಎಲ್ ಪಂದ್ಯಗಳಲ್ಲಿ ರೋಹಿತ್ ವೈಫಲ್ಯ ಮುಂದುವರಿಯಿತು (17, 1, 2, 3, 4 ರನ್). ಸೂರ್ಯಕುಮಾರ್ ಹತ್ತರ ಗಡಿ ದಾಟಲಿಲ್ಲ; ಹಾರ್ದಿಕ್ ಪಾಂಡ್ಯ ಖಾತೆ ತೆರೆಯಲಿಲ್ಲ. ಈ ಮೂವರೂ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಆಟಗಾರರೆಂಬುದು ಉಲ್ಲೇಖನೀಯ.
ಮುಂಬೈ ಸರದಿಯಲ್ಲಿ ನಂ.6 ಬ್ಯಾಟರ್ ನೇಹಲ್ ವಧೇರ ಸರ್ವಾಧಿಕ 46 ರನ್ ಮಾಡಿದರು (41 ಎಸೆತ, 4 ಬೌಂಡರಿ, 2 ಸಿಕ್ಸರ್). ಇಶಾನ್ ಕಿಶನ್ ಗಳಿಕೆ 32 ರನ್. ಇದಕ್ಕಾಗಿ ಅವರು 36 ಎಸೆತ ಎದುರಿಸಿದರು (3 ಬೌಂಡರಿ). ಡೆತ್ ಓವರ್ ವೇಳೆ ಕ್ರೀಸ್‌ನಲ್ಲಿದ್ದ ಟಿಮ್ ಡೇವಿಡ್ 35 ರನ್ ಬಾರಿಸಿ ಅಜೇಯರಾಗಿ ಉಳಿದರು (18 ಎಸೆತ, 3 ಬೌಂಡರಿ, 1 ಸಿಕ್ಸರ್).
ಲಕ್ನೋ ಸಾಂ ಕ ಬೌಲಿಂಗ್ ಮೂಲಕ ಯಶಸ್ಸು ಸಾಧಿಸಿತು. ಮರಳಿ ಆಡಲಿಳಿದ ವೇಗಿ ಮಾಯಾಂಕ್ ಯಾದವ್ 31 ರನ್ ನೀಡಿ ಒಂದು ವಿಕೆಟ್ ಉರುಳಿಸಿದರು. 36ಕ್ಕೆ 2 ವಿಕೆಟ್ ಕಿತ್ತ ಮೊಹ್ಸಿನ್ ಖಾನ್ ಲಕ್ನೋದ ಯಶಸ್ವಿ ಬೌಲರ್.