ಮುಂಬೈ: ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಗಾಯಗೊಂಡಿರುವ ತಂಡದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮೆಯಲ್ಲಿ ವಿಶ್ರಾಂತಿಯಲ್ಲಿದ್ದ 33 ವರ್ಷದ ಸೂರ್ಯಕುಮಾರ್ ಯಾದವ್ ಅವರು ಶುಕ್ರವಾರ (ಎ.5) ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ನಂ.1 ಶ್ರೇಯಾಂಕದ ಟಿ20 ಬ್ಯಾಟರ್ ಕೊನೆಯದಾಗಿ 2023ರ ಡಿಸೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದರು. ಆ ಸರಣಿಯಲ್ಲಿ ಅವರು ತಮ್ಮ ಪಾದದ ಗ್ರೇಡ್ 2 ಗಾಯ ಅನುಭವಿಸಿದರು, ಇದಕ್ಕಾಗಿ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.
ಇದಾದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಅವರ ಪುನರಾಗಮನ ಮತ್ತಷ್ಟು ತಡವಾಗಿತ್ತು. ಅವರು ಬೆಂಗಳೂರಿನ ಎನ್ ಸಿಎ ದಲ್ಲಿದ್ದರು.
ಸೂರ್ಯಕುಮಾರ್ ಯಾದವ್ ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ಮುಂಬೈ ತಂಡವು ಎ.7ರಂದು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.
ಹೊಸ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್‌ಗೆ ಈ ಋತುವಿನಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ. ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿದ ಮುಂಬೈ ಈ ವಾರದ ಆರಂಭದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಮೊದಲ ತವರು ಪಂದ್ಯವನ್ನು ಕಳೆದುಕೊಂಡಿತು.