ಮುಂಬೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟವು ಇಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಸಿಎಸ್ ಕೆ ಮತ್ತು ಆರ್ ಸಿಬಿ ತಂಡಗಳು ಮುಖಾಮುಖಿಯಾಗಲಿದೆ.
ಕಡೆಕ್ಷಣದಲ್ಲಿ ಕೆಲ ಫ್ರಾಂಚೈಸಿಗಳಿಗೆ ಆಟಗಾರರ ಗಾಯದ ಸಮಸ್ಯೆ ಎದುರಾಗಿದೆ. ಗುಜರಾತ್ ಟೈಟಾನ್ಸ್ ತಂಡದ ರಾಬಿನ್ ಮಿಂಜ್ ಗಾಯಾಳಾಗಿದ್ದು, ಅವರ ಬದಲಿಗೆ ಕನ್ನಡಿಗೆ ಬಿ.ಆರ್. ಶರತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಬೇಕಿದ್ದ ಆಸ್ಟ್ರೇಲಿಯನ್ ಸ್ಪಿನ್ನರ್ ಆ್ಯಡಂ ಜಂಪಾ ಅವರು ಕಡೆ ಕ್ಷಣದಲ್ಲಿ ಕೂಟದಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಮುಂಬೈ ಮೂಲದ ಬೌಲರ್ ತನುಷ್ ಕೋಟ್ಯಾನ್ ಅವರನ್ನು ರಾಯಲ್ಸ್ ಸೇರಿಸಿಕೊಂಡಿದೆ.
ಕಳೆದ ಹರಾಜಿನಲ್ಲಿ ಗುಜರಾತ್ ತಂಡವು ರಾಬಿನ್ ಮಿಂಜ್ ಅವರನ್ನು 3.6 ಕೋಟಿ ರೂ ಗೆ ಖರೀದಿ ಮಾಡಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ಅವರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಈ ಬಾರಿಯ ಕೂಟವನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.
ಆಸೀಸ್ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ರಿಟೈನ್ ಮಾಡಿಕೊಂಡಿತ್ತು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಈ ಬಾರಿ ಕೂಟದಿಂದ ಹೊರಬಿದ್ದಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಬಿ.ಆರ್.ಶರತ್, ಇದುವರೆಗೆ 28 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ 20 ಪ್ರಥಮ ದರ್ಜೆ ಪಂದ್ಯಗಳು ಮತ್ತು 43 ಲಿಸ್ಟ್ ಎ ಪಂದ್ಯಗಳನ್ನು ಕರ್ನಾಟಕದ ಪರವಾಗಿ ಆಡಿದ್ದಾರೆ. ಅವರು 20 ಲಕ್ಷ ಮೂಲ ಬೆಲೆಗೆ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದಾರೆ.