ಮುಂಬೈ: 2024ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಸವಾಲು ಅಂತ್ಯವಾಗಿದೆ. ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಆರ್ ಸಿಬಿ, ಕೂಟದಲ್ಲಿ ನಾಲ್ಕನೇ ಸ್ಥಾನಿಯಾಗಿ ಅಭಿಯಾನ ಅಂತ್ಯಗೊಳಿಸಿದೆ.
ಮಾಜಿ ಟೀಂ ಇಂಡಿಯಾ ಮತ್ತು ಸಿಎಸ್ ಕೆ ಆಟಗಾರ ಅಂಬಾಟಿ ರಾಯುಡು ಅವರು ಕಳೆದ ಕೆಲ ದಿನಗಳಿಂದ ಆರ್ ಸಿಬಿ ತಂಡವನ್ನು ಟೀಕೆ ಮಾಡುತ್ತಿದ್ದಾರೆ. ನೇರಪ್ರಸಾರ ಕಾರ್ಯಕ್ರಮದಲ್ಲಿ ಆರ್ ಸಿಬಿ ತಂಡವು ಇದುವರೆಗೆ ಕಪ್ ಗೆಲ್ಲದೆ ಇರುವುದನ್ನು ಆಡಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಆರ್ ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ.
ಆರ್ ಸಿಬಿ ಸೋಲಿನ ಬಳಿಕ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಾಯುಡು ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದ್ದಾರೆ. ಹಲವಾರು ಸಿಎಸ್‌ಕೆ ಆಟಗಾರರು 5 ಎಂದು ಸನ್ನೆ ಮಾಡುವ ವಿಡಿಯೋ ಪೋಸ್ಟ್ ಮಾಡಿ “5 ಬಾರಿಯ ಚಾಂಪಿಯನ್ ಗಳಿಂದ ಕೇವಲ ಒಂದು ರೀತಿಯ ಜ್ಞಾಪನೆ”, “ಕೆಲವೊಮ್ಮೆ ಸೌಮ್ಯವಾದ ಜ್ಞಾಪನೆಯ ಅಗತ್ಯವಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಚೆನ್ನೈ ತಂಡವು ಐದು ಟ್ರೋಫಿ ಗೆದ್ದಿದ್ದು, ಆರ್ ಸಿಬಿ ಒಂದೂ ಗೆದ್ದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
“ಆರ್‌ಸಿಬಿ ಬಗ್ಗೆ ಮಾತನಾಡುವುದಾದರೆ, ಉತ್ಸಾಹ ಮತ್ತು ಸಂಭ್ರಮ ಮಾತ್ರ ನಿಮಗೆ ಟ್ರೋಫಿಗಳನ್ನು ಗೆಲ್ಲುವುದಿಲ್ಲ ಎಂದು ತೋರಿಸುತ್ತದೆ. ಪ್ಲೇಆಫ್ ತಲುಪಿದ ಮಾತ್ರಕ್ಕೆ ನೀವು ಐಪಿಎಲ್ ಟ್ರೋಫಿಯನ್ನು ಪಡೆಯುವುದಿಲ್ಲ. ಸಿಎಸ್‌ಕೆಯನ್ನು ಸೋಲಿಸುವ ಮೂಲಕ ನೀವು ಟ್ರೋಫಿಯನ್ನು ಗೆಲ್ಲುತ್ತೀರಿ ಎಂದು ಭಾವಿಸಬೇಡಿ” ಎಂದು ಹೇಳಿದ್ದರು.