Advertisement

IPL 2023: ಲಕ್ನೋದಲ್ಲಿ ಪಂಜಾಬ್‌ ಪರಾಕ್ರಮ

12:04 AM Apr 16, 2023 | Team Udayavani |

ಲಕ್ನೋ: ಸಣ್ಣ ಮೊತ್ತದ ರೋಚಕ ಹೋರಾಟ ಕಂಡ ಶನಿವಾರದ ದ್ವಿತೀಯ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಆತಿಥೇಯ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 2 ವಿಕೆಟ್‌ಗಳಿಂದ ಮಣಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ 8 ವಿಕೆಟಿಗೆ 159 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಪಂಜಾಬ್‌ 19.3 ಓವರ್‌ಗಳಲ್ಲಿ 8 ವಿಕೆಟಿಗೆ 161 ರನ್‌ ಬಾರಿಸಿತು. ಗಾಯಾಳು ಶಿಖರ್‌ ಧವನ್‌ ಗೈರಲ್ಲಿ ಸ್ಯಾಮ್‌ ಕರನ್‌ ಪಂಜಾಬ್‌ ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದರು.

ಚೇಸಿಂಗ್‌ ವೇಳೆ ಜಿಂಬಾಬ್ವೆ ಬ್ಯಾಟರ್‌ ಸಿಕಂದರ್‌ ರಝ ಭಾರೀ ಹೋರಾಟ ಸಂಘಟಿಸಿದರು. 57 ರನ್‌ ಬಾರಿಸಿ ಪಂಜಾಬ್‌ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದರು (4 ಬೌಂಡರಿ, 3 ಸಿಕ್ಸರ್‌). ಇವರ ನಿರ್ಗಮನದ ಬಳಿಕ ಶಾರುಖ್‌ ಖಾನ್‌ ತಂಡವನ್ನು ದಡ ಸೇರಿಸಿದರು. 10 ಎಸೆತಗಳಿಂದ ಅಜೇಯ 23 ರನ್‌ ಬಾರಿಸಿದ್ದು ಶಾರುಖ್‌ ಸಾಧನೆ. ಮ್ಯಾಥ್ಯೂ ಶಾರ್ಟ್‌ 34 ರನ್‌ ಹೊಡೆದರು.

ಕೆ.ಎಲ್‌. ರಾಹುಲ್‌ ಅವರ ಕಪ್ತಾನನ ಆಟ ಲಕ್ನೋ ಸರದಿಯ ಆಕರ್ಷಣೆ ಆಗಿತ್ತು. 19ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡ ರಾಹುಲ್‌ 74 ರನ್‌ ಕೊಡುಗೆ ಸಲ್ಲಿಸಿದರು. ಮೊದಲ ವಿಕೆಟ್‌ ಪತನದ ಬಳಿಕ ತಂಡ ಕ್ಷಿಪ್ರ ಕುಸಿತವೊಂದನ್ನು ಕಾಣತೊಡಗಿದಾಗ ರಾಹುಲ್‌ ತಂಡವನ್ನು ಆಧರಿಸಿ ನಿಂತರು. ಎದುರಿಸಿದ್ದು 56 ಎಸೆತ, ಸಿಡಿಸಿದ್ದು 8 ಬೌಂಡರಿ, ಒಂದು ಸಿಕ್ಸರ್‌.

ರಾಹುಲ್‌ ಜತೆಗಾರ ಕೈಲ್‌ ಮೇಯರ್ ಎಂದಿನ ಅಬ್ಬರದಿಂದಲೇ ಬ್ಯಾಟ್‌ ಬೀಸತೊಡಗಿದರು. ಮೊದಲ ವಿಕೆಟಿಗೆ 7.4 ಓವರ್‌ಗಳಿಂದ 53 ರನ್‌ ಒಟ್ಟು
ಗೂಡಿತು. ಮೇಯರ್ 3 ಸಿಕ್ಸರ್‌, ಒಂದು ಬೌಂಡರಿ ನೆರವಿನಿಂದ 29 ರನ್‌ ಹೊಡೆದರು. ಇದು 23 ಎಸೆತಗಳ ಇನ್ನಿಂಗ್ಸ್‌ ಆಗಿತ್ತು.

Advertisement

ಆದರೆ ಆರಂಭಿಕರನ್ನು ಹೊರತುಪಡಿಸಿದರೆ ಉಳಿದವರ ಸಾಧನೆ ಗಮನಾರ್ಹ ಮಟ್ಟದಲ್ಲಿರಲಿಲ್ಲ. ದೀಪಕ್‌ ಹೂಡಾ (2) ಮತ್ತೂಮ್ಮೆ ರನ್‌ ಬರಗಾಲಕ್ಕೆ ಸಿಲುಕಿದರು. ಇದಕ್ಕೂ ಮಿಗಿಲಾದ ವೈಫ‌ಲ್ಯವೆಂದರೆ ಆರ್‌ಸಿಬಿ ವಿರುದ್ಧ ಸುಂಟರಗಾಳಿಯಾಗಿದ್ದ ನಿಕೋಲಸ್‌ ಪೂರಣ್‌ ಮೊದಲ ಎಸೆತಕ್ಕೇ ವಿಕೆಟ್‌ ಒಪ್ಪಿಸಿ ತೆರಳಿದ್ದು. ರಬಾಡ ಸತತ ಎಸೆತಗಳಲ್ಲಿ ಕೃಣಾಲ್‌ ಪಾಂಡ್ಯ (18) ಮತ್ತು ಪೂರಣ್‌ ಅವರನ್ನು ಪೆವಿಲಿಯನ್‌ಗೆ ಓಡಿಸಿದರು.

ಆರ್‌ಸಿಬಿ ವಿರುದ್ಧ ಸಿಡಿದ ಮತ್ತೋರ್ವ ಹೀರೋ ಮಾರ್ಕಸ್‌ ಸ್ಟೋಯಿನಿಸ್‌ ಆಟ 15 ರನ್ನಿಗೆ ಕೊನೆಗೊಂಡಿತು. ಇದರಲ್ಲಿ 2 ಸಿಕ್ಸರ್‌ ಸೇರಿತ್ತು. ಸ್ಯಾಮ್‌ ಕರನ್‌ 31ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಕಂಡರು.

Advertisement

Udayavani is now on Telegram. Click here to join our channel and stay updated with the latest news.

Next