Advertisement
ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಇನ್ನೂರಷ್ಟು ರನ್ ಪೇರಿಸಿಯೂ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಬಲ ತುಂಬಲಿದ್ದಾರೆ ಎಂಬ ಆಶಾವಾದವೊಂದು ಮೂಡಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಐಪಿಎಲ್ ಮುಖಾಮುಖೀ ಶನಿವಾರ ಮಧ್ಯಾಹ್ನ “ಎಂ.ಚಿನ್ನಸ್ವಾಮಿ ಮೈದಾನ’ದಲ್ಲಿ ಕಾವೇರಿಸಿಕೊಳ್ಳಲಿದೆ.
Related Articles
Advertisement
ಮುಂಬೈ ಹಾಗೂ ಲಕ್ನೋ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ಉತ್ತಮಮಟ್ಟದಲ್ಲೇ ಇತ್ತು. ಕ್ರಮವಾಗಿ 172 ಹಾಗೂ 212 ರನ್ ರಾಶಿ ಹಾಕಿತ್ತು. ಈ ಪಂದ್ಯಗಳಲ್ಲಿ ಉರುಳಿದ್ದು 2 ವಿಕೆಟ್ ಮಾತ್ರ. ಒಂದು ಚೇಸಿಂಗ್ ವೇಳೆ ದಾಖಲಾಯಿತು, ಇನ್ನೊಂದು ಮೊದಲು ಬ್ಯಾಟಿಂಗ್ ನಡೆಸಿದ ವೇಳೆ ಒಟ್ಟುಗೂಡಿತು. ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್ ಅರ್ಧ ಶತಕ ಬಾರಿಸಿದರು. ಲಕ್ನೋ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ಸಾಲಿಗೆ ಸೇರ್ಪಡೆಗೊಂಡರು.ಆದರೆ ಓಪನಿಂಗ್ ವೈಫಲ್ಯಕ್ಕೆ ಸಿಲುಕಿದಾಗ ಆರ್‌ಸಿಬಿಯ ಬ್ಯಾಟಿಂಗ್ ಅವಸ್ಥೆ ಗಂಭೀರವಾಗಿರಲಿದೆ ಎಂಬುದಕ್ಕೆ ಕೋಲ್ಕತ ಎದುರಿನ ಪಂದ್ಯ ಉತ್ತಮ ನಿದರ್ಶನ ಒದಗಿಸಿತು. 205 ರನ್ ಗಳಿಸಬೇಕಿದ್ದ ಆರ್‌ಸಿಬಿ 123ಕ್ಕೆ ಢಮಾರ್. ಒನ್‌ಡೌನ್‌ನಲ್ಲಿ ಕಾಣಿಸಿಕೊಂಡ ಮೈಕಲ್ ಬ್ರೇಸ್‌ವೆಲ್, ಸೂಕ್ತ ಬ್ಯಾಟರ್‌ಗಳಿಲ್ಲದ ಕಾರಣ ಬಡ್ತಿ ಪಡೆದು ಬಂದ ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ಅನುಜ್ ರಾವತ್… ಎಲ್ಲರೂ ಬಂದಷ್ಟೇ ಬೇಗ ವಾಪಸಾದಾಗ ಆರ್‌ಸಿಬಿಯ ಬ್ಯಾಟಿಂಗ್ ಬಂಡವಾಳವನ್ನು ಬಿಚ್ಚಿಟ್ಟರು. ಈ ಪಂದ್ಯದಲ್ಲಿ ಕೊಹ್ಲಿ 21 ಹಾಗೂ ಡು ಪ್ಲೆಸಿಸ್ 23 ರನ್ ಮಾಡಿದ್ದರು. ಲಕ್ನೋ ವಿರುದ್ಧ ಓಪನಿಂಗ್ ಕ್ಲಿಕ್ ಆದ್ದರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಇಲ್ಲಿ ದಿನೇಶ್ ಕಾರ್ತಿಕ್‌ಗೆ ಲಭಿಸಿದ್ದು ಒಂದೇ ಎಸೆತ, ಮಹಿಪಾಲ್ ಲೊನ್ರೋರ್‌ಗೆ ಕ್ರೀಸ್ ಇಳಿಯುವ ಅವಕಾಶ ಸಿಗಲಿಲ್ಲ. ಬ್ರೇಸ್‌ವೆಲ್ ಅವರನ್ನು ಕೈಬಿಡಲಾಗಿತ್ತು. ಡೆಲ್ಲಿ ವಿರುದ್ಧ ವನಿಂದು ಹಸರಂಗ ಅವರಿಗೆ ಡೇವಿಡ್ ವಿಲ್ಲಿ ಜಾಗ ಬಿಡಬಹುದು. ಹರ್ಷಲ್ ಪಟೇಲ್ ಬದಲು ಅವಿನಾಶ್ ಸಿಂಗ್ ಬೌಲಿಂಗ್ ದಾಳಿಗಿಳಿಯುವ ಸಾಧ್ಯತೆ ಇದೆ. ಒಂದು ಕಾಲದ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಈಗ ಬಹಳ ದುಬಾರಿ ಆಗುತ್ತಿದ್ದಾರೆ. * ಡೆಲ್ಲಿ ಬ್ಯಾಟಿಂಗ್ ಬರಗಾಲ: ಡೆಲ್ಲಿಯ ಸತತ ಸೋಲಿಗೆ ಬ್ಯಾಟಿಂಗ್ ಬರಗಾಲವೇ ಮುಖ್ಯ ಕಾರಣ. ಇಲ್ಲಿ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ರನ್ ಗಳಿಸುವುದು ಅಕ್ಷರ್ ಪಟೇಲ್ ಮಾತ್ರ. ಪೃಥ್ವಿ ಶಾ, ಮನೀಷ್ ಪಾಂಡೆ, ಯಶ್ ಧುಲ್, ಪೊವೆಲ್, ಲಲಿತ್ ಯಾದವ್ ಅವರ ಸತತ ವೈಫಲ್ಯ ತಂಡಕ್ಕೆ ಮುಳುವಾಗಿದೆ. 4 ಪಂದ್ಯಗಳಲ್ಲಿ ಡೆಲ್ಲಿ ದಾಖಲಿಸಿದ ಮೊತ್ತವನ್ನೇ ಗಮನಿಸಿ: 9ಕ್ಕೆ 143, 8ಕ್ಕೆ 162, 9ಕ್ಕೆ 142 ಮತ್ತು 172. ಮುಂಬೈ ಎದುರಿನ ಕಳೆದ ಪಂದ್ಯದಲ್ಲಿ ಮೊದಲ ಸಲ 170ರ ಗಡಿ ದಾಟಿತ್ತು. ಬ್ಯಾಟಿಂಗ್ ಹೋಲಿಸಿದರೆ ಡೆಲ್ಲಿ ಬೌಲಿಂಗ್ ಪರವಾಗಿಲ್ಲ ಎಂಬ ಮಟ್ಟದಲ್ಲಿದೆ. ನೋರ್ಜೆ, ಮುಸ್ತಫಿಜುರ್, ಮುಕೇಶ್ ಕುಮಾರ್, ಕುಲದೀಪ್, ಅಕ್ಷರ್ ಪಟೇಲ್ ಅವರನ್ನೊಳಗೊಂಡಿರುವ ಬೌಲಿಂಗ್ ಪಡೆ ಆರ್‌ಸಿಬಿಗಿಂತ ಬಲಿಷ್ಠ. ಆದರೆ ಚಿನ್ನಸ್ವಾಮಿ ಟ್ರ್ಯಾಕ್ ಬ್ಯಾಟಿಂಗ್ ಸ್ವರ್ಗವಾಗಿರುವ ಕಾರಣ ಬೌಲರ್‌ಗಳ ಆಟ ನಡೆಯುವುದು ಅನುಮಾನ. ದುರಂತವೆಂದರೆ, ತವರಿನ ಕೋಟ್ಲಾ ಅಂಗಳದಲ್ಲೂ ಡೆಲ್ಲಿಗೆ ಗೆಲುವು ದಕ್ಕದೇ ಹೋದದ್ದು. 5ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯದೆ ಹೋದರೆ ಡೆಲ್ಲಿಗೆ ಉಳಿಗಾಲವಿಲ್ಲ ಎಂಬುದು ಸದ್ಯದ ಸ್ಥಿತಿ.