Advertisement

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

11:24 PM May 17, 2022 | Team Udayavani |

ನವೀ ಮುಂಬಯಿ: ಬುಧವಾರ ಕೋಲ್ಕತಾ ನೈಟ್‌ರೈಡರ್ ತಂಡದ ಐಪಿಎಲ್‌ ಭವಿಷ್ಯ ನಿರ್ಧಾರವಾಗಲಿದೆ.

Advertisement

14ನೇ ಹಾಗೂ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಬಳಗ ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ಸೆಣಸಲಿದೆ. ಇದನ್ನು ದೊಡ್ಡ ಅಂತರದಿಂದ ಗೆದ್ದರೆ ಕೆಕೆಆರ್‌ ಮುಂದೆ ಪ್ಲೇ ಆಫ್ನ ಕ್ಷೀಣ ಅವಕಾಶವೊಂದು ತೆರೆಯಲ್ಪಡಲಿದೆ.

ಕೆಕೆಆರ್‌ 13 ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿದೆ. ಗೆದ್ದರೆ ಅಂಕ 14ಕ್ಕೆ ಏರಲಿದೆ. ಆದರೆ ಪ್ಲೇ ಆಫ್ಗೆ ಈ ಅಂಕ ಸಾಲದು. ಅಕಸ್ಮಾತ್‌ 4ನೇ ಸ್ಥಾನಕ್ಕಾಗಿ ನಡೆಯುವ ಪೈಪೋಟಿಯಲ್ಲಿ ಕೆಲವು ತಂಡಗಳ ಅಂಕ ಸಮನಾದರಷ್ಟೇ ಕೆಕೆಆರ್‌ಗೆ ಅದೃಷ್ಟ ಒಲಿದು ಬರಲಿದೆ. ರನ್‌ರೇಟ್‌ ಪ್ಲಸ್‌ ಆಗಿರುವುದು ಕೋಲ್ಕತಾಕ್ಕೊಂದು ಲಾಭ. ಆದರೆ ಉಳಿದ ಕೆಲವು ತಂಡಗಳ ಫ‌ಲಿತಾಂಶ ಕೂಡ ಅಯ್ಯರ್‌ ಪಡೆಯ ಹಣೆಬರಹ ನಿರ್ಧರಿಸಲಿಕ್ಕಿದೆ.

ಲಕ್ನೋಗೆ ಈ ಫ‌ಲಿತಾಂಶದಿಂದ ಪ್ಲೇ ಆಫ್ ಸ್ಥಾನವನ್ನು ನಿರ್ಧರಿಸಬೇಕಾದ ಜರೂ ರತೇನೂ ಇಲ್ಲ. 13 ಪಂದ್ಯಗಳಿಂದ 16 ಅಂಕ ಗಳಿಸಿರುವ ಕೆ.ಎಲ್‌. ರಾಹುಲ್‌ ಪಡೆ ಈಗಾಗಲೇ ಒಂದು ಕಾಲನ್ನು ಮುಂದಿನ ಸುತ್ತಿನಲ್ಲಿರಿಸಿದೆ. ಅಂತಿಮ ಲೀಗ್‌ ಪಂದ್ಯದ ಫ‌ಲಿತಾಂಶದಿಂದ ಲಕ್ನೋದ ಟಾಪ್‌-4 ಸ್ಥಾನದಲ್ಲಿ ಒಂದಿಷ್ಟು ಪಲ್ಲಟವಾದೀತು, ಅಷ್ಟೇ.

ಸತತ ಎರಡು ಗೆಲುವು
ಎರಡು ಬಾರಿಯ ಚಾಂಪಿಯನ್‌, ಕಳೆದ ವರ್ಷದ ರನ್ನರ್ಅಪ್‌ ಆಗಿರುವ ಕೋಲ್ಕತಾ ನೈಟ್‌ರೈಡರ್ ಹಿಂದಿನೆರಡು ಪಂದ್ಯಗಳಲ್ಲಿ ಮುಂಬೈ ಹಾಗೂ ಹೈದರಾಬಾದ್‌ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿದೆ. ಮುಂಬೈಯನ್ನು 52 ರನ್ನುಗಳಿಂದ, ಹೈದರಾಬಾದನ್ನು 54 ರನ್ನುಗಳಿಂದ ಕೆಡವಿ ಲಯ ಕಂಡುಕೊಂಡಿದೆ. ಆದರೆ ಲಕ್ನೋ ವಿರುದ್ಧ ಇದಕ್ಕೂ ಮಿಗಿಲಾದ ಪ್ರದರ್ಶನ ನೀಡಿ ಗೆದ್ದು ಬರಬೇಕಿದೆ.

Advertisement

ಕೆಕೆಆರ್‌ನ ಮುಖ್ಯ ಸಮಸ್ಯೆಯೆಂದರೆ ಓಪನಿಂಗ್‌ನದ್ದು. ಲೀಗ್‌ ಹಂತ ಮುಗಿಯುತ್ತ ಬಂದರೂ ಇದಕ್ಕಿನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದುದು ನೈಟ್‌ರೈಡರ್ ಪಾಲಿನ ದುರಂತವೇ ಸರಿ. ವೆಂಕಟೇಶ್‌ ಅಯ್ಯರ್‌ ಸಂಪೂರ್ಣ ವಿಫ‌ಲರಾದರೆ, ಇವರ ಜತೆಗಾರ ಅಜಿಂಕ್ಯ ರಹಾನೆ ಗಾಯಾಳಾಗಿ ಹೊರಬಿದ್ದಿದ್ದಾರೆ. ಲಕ್ನೋ ವಿರುದ್ಧ ನೂತನ ಆರಂಭಿಕ ಜೋಡಿಯೊಂದು ಕೋಲ್ಕತಾ ನೆರವಿಗೆ ನಿಲ್ಲಬೇಕಿದೆ.

ನಿತೀಶ್‌ ರಾಣಾ, ಶ್ರೇಯಸ್‌ ಅಯ್ಯರ್‌ ಅವರ ಅನಿಶ್ಚಿತ ಆಟ ಕೂಡ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಬಿಲ್ಲಿಂಗ್ಸ್‌, ರಸೆಲ್‌ ಸಿಡಿದ ಪರಿಣಾಮ ಹೈದರಾಬಾದ್‌ ವಿರುದ್ಧ ಸವಾಲಿನ ಮೊತ್ತ ಸಾಧ್ಯವಾಗಿತ್ತು.

ಪ್ಯಾಟ್‌ ಕಮಿನ್ಸ್‌ ಗೈರಲ್ಲೂ ಕೋಲ್ಕತಾ ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ತೋರ್ಪಡಿಸಿದ್ದನ್ನು ಮರೆಯುವಂತಿಲ್ಲ. ಉಮೇಶ್‌ ಯಾದವ್‌, ಟಿಮ್‌ ಸೌಥಿ, ಸುನೀಲ್‌ ನಾರಾಯಣ್‌ ವಿಕೆಟ್‌ ಬೇಟೆಯಲ್ಲಿ ಯಶಸ್ವಿಯಾಗಿದ್ದರು. ಬೌಲಿಂಗ್‌ನಲ್ಲೂ ಸಿಡಿದು ನಿಂತ ರಸೆಲ್‌ 3 ವಿಕೆಟ್‌ ಉಡಾಯಿಸಿ ಕೆಕೆಆರ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎರಡು ಸೋಲಿನ ಆಘಾತ
ಲಕ್ನೋ ಸತತ ಎರಡು ಪಂದ್ಯಗಳನ್ನು ಸೋತು ತನ್ನ ಅಂತಿಮ ಲೀಗ್‌ ಪಂದ್ಯವನ್ನು ಆಡಲಿಳಿಯುತ್ತಿದೆ. ಪವರ್‌ ಪ್ಲೇಯಲ್ಲಿ ತಂಡದ ಬ್ಯಾಟಿಂಗ್‌ ಕೈಕೊಡುತ್ತಿದೆ. ಎರಡು ಶತಕ ಬಾರಿಸಿದರೂ ನಾಯಕ ರಾಹುಲ್‌ ಕಳೆದ 3 ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಈ ಸೋಲಿನ ಪಂದ್ಯಗಳಲ್ಲಿ ಮತ್ತೋರ್ವ ಓಪನರ್‌ ಡಿ ಕಾಕ್‌ ಗಳಿಸಿದ್ದು 11 ಹಾಗೂ 7 ರನ್‌ ಮಾತ್ರ. ಆಯುಷ್‌ ಬದೋನಿ “ವನ್‌ ಗೇಮ್‌ ವಂಡರ್‌’ ಎನಿಸಿಕೊಂಡಿದ್ದಾರೆ. ಆದರೆ ದೀಪಕ್‌ ಹೂಡಾ ಹೊಡಿಬಡಿ ಆಟದ ಮೂಲಕ ತಂಡಕ್ಕೆ ನೆರವು ಒದಗಿಸುತ್ತಿದ್ದಾರೆ.

ಆಲ್‌ರೌಂಡರ್‌ಗಳಾದ ಮಾರ್ಕಸ್‌ ಸ್ಟೋಯಿನಿಸ್‌, ಕೃಣಾಲ್‌ ಪಾಂಡ್ಯ; ಬೌಲರ್‌ಗಳಾದ ರವಿ ಬಿಷ್ಣೋಯಿ, ಮೊಹ್ಸಿನ್‌ ಖಾನ್‌, ಆವೇಶ್‌ ಖಾನ್‌ ಹೆಚ್ಚು ಆವೇಶ ತೋರಿದರೆ ಲಕ್ನೋ ಗೆಲುವಿನೊಂದಿಗೆ ಲೀಗ್‌ ವ್ಯವಹಾರ ಮುಗಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next