Advertisement
ಗುರುವಾರದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 9 ವಿಕೆಟಿಗೆ 146 ರನ್ ಗಳಿಸಿದರೆ, ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್ ಬಾರಿಸಿತು.
Related Articles
Advertisement
ಕೆಕೆಆರ್ ಪರ ನಿತೀಶ್ ರಾಣಾ ಬ್ಯಾಟಿಂಗ್ ಪ್ರತಾಪವೊಂದನ್ನು ತೋರಿ 57 ರನ್ ಬಾರಿಸಿದರು (34 ಎಸೆತ, 3 ಬೌಂಡರಿ, 4 ಸಿಕ್ಸರ್). ರಾಣಾ ಹೊರತುಪಡಿಸಿ ಬೇರೆ ಯಾರಿಂದಲೂ ಸಿಕ್ಸರ್ ಸಿಡಿಯಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ 42 ರನ್ ಮಾಡಿದರು.
ಸಕಾರಿಯಾ ಮೊದಲ ಬ್ರೇಕ್ :
ರಾಜಸ್ಥಾನ್ ರಾಯಲ್ಸ್‌ನಿಂದ ಬಂದ ಎಡಗೈ ವೇಗಿ ಚೇತನ್ ಸಕಾರಿಯಾ ಡೆಲ್ಲಿ ಪರ ಮೊದಲ ಪಂದ್ಯ ಆಡಿದರಷ್ಟೇ ಅಲ್ಲ, ಮೊದಲ ಓವರ್‌ನಲ್ಲೇ ದೊಡ್ಡ ಬೇಟೆಯನ್ನಾಡಿ ಶುಭಾರಂಭಗೈದರು. ಆರನ್ ಫಿಂಚ್ ಅವರನ್ನು ಮೂರನೇ ಎಸೆತದಲ್ಲೇ ಬೌಲ್ಡ್ ಮಾಡಿದರು. ಇದಕ್ಕೂ ಹಿಂದಿನ ಎಸೆತದಲ್ಲಿ ಫಿಂಚ್‌ಗೆ ಜೀವದಾನ ಲಭಿಸಿತ್ತು.
ಮತ್ತೋರ್ವ ಆರಂಭಕಾರ ವೆಂಕಟೇಶ್ ಅಯ್ಯರ್ ಇಲ್ಲಿಯೂ ಯಶಸ್ವಿಯಾಗಲಿಲ್ಲ. 5ನೇ ಓವರ್‌ನಲ್ಲೇ ಸ್ಪಿನ್ ದಾಳಿ ಆರಂಭಿಸಿದ ಅಕ್ಷರ್ ಪಟೇಲ್ 3ನೇ ಎಸೆತದಲ್ಲೇ ಅಯ್ಯರ್ ವಿಕೆಟ್ ಉಡಾಯಿಸಿದರು. 12 ಎಸೆತ ಎದುರಿಸಿದ ಅಯ್ಯರ್ ಕೇವಲ 6 ರನ್ ಮಾಡಿ ಸಕಾರಿಯಾಗೆ ಕ್ಯಾಚ್ ನೀಡಿ ವಾಪಸಾದರು. ಪವರ್ ಪ್ಲೇಯಲ್ಲಿ ಬ್ಯಾಟಿಂಗ್ ಪವರ್ ತೋರ್ಪಡಿಸುವಲ್ಲಿ ಸಂಪೂರ್ಣ ವಿಫಲವಾದ ಕೆಕೆಆರ್ 2 ವಿಕೆಟಿಗೆ 29 ರನ್ ಗಳಿಸಿ ಕುಂಟುತ್ತಿತ್ತು.
ಕುಲದೀಪ್ ಯಾದವ್ ತಮ್ಮ ಮೊದಲ ಓವರ್‌ನ ಸತತ 2 ಎಸೆತಗಳಲ್ಲಿ ವಿಕೆಟ್ ಉಡಾಯಿಸಿ ಕೋಲ್ಕತಾವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿದರು. ದ್ವಿತೀಯ ಎಸೆತದಲ್ಲಿ ಬಾಬಾ ಇಂದ್ರಜಿತ್ (6) ಅವರನ್ನು ಪೆವಿಲಿಯನ್ನಿಗೆ ತಳ್ಳಿದರೆ, ಮುಂದಿನ ಎಸೆತದಲ್ಲೇ ಸುನೀಲ್ ನಾರಾಯಣ್ ಅವರನ್ನು ಲೆಗ್ ಬಿಫೋರ್ ಬಲೆಗೆ ತಳ್ಳಿದರು. 35 ರನ್ನಿಗೆ ಕೋಲ್ಕತಾದ 4 ವಿಕೆಟ್ ಉರುಳಿತು. ಅರ್ಧ ಹಾದಿ ಮುಗಿಯುವಾಗ ಸ್ಕೋರ್ 56 ರನ್ ಆಗಿತ್ತು.
ನಾಯಕ ಶ್ರೇಯಸ್ ಅಯ್ಯರ್-ನಿತೀಶ್ ರಾಣಾ 48 ರನ್ ಒಟ್ಟುಗೂಡಿಸಿ ಪರಿಸ್ಥಿತಿಯನ್ನು ತುಸು ಸುಧಾರಿಸಿದರೆನ್ನುವಾಗಲೇ ಕುಲದೀಪ್ ಯಾದವ್ ಮತ್ತೆ ಅವಳಿ ಆಘಾತವಿಕ್ಕಿದರು. 3ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಆ್ಯಂಡ್ರೆ ರಸೆಲ್ ವಿಕೆಟ್ ಉಡಾಯಿಸಿದರು. ಅಯ್ಯರ್ 37 ಎಸೆತಗಳಿಂದ 42 ರನ್ ಹೊಡೆದರೆ, ರಸೆಲ್ ಖಾತೆ ತೆರೆಯುವ ಮೊದಲೇ ಸ್ಟಂಪ್ಡ್ ಆದರು. 83ಕ್ಕೆ 6 ವಿಕೆಟ್ ಉರುಳಿತು.
ಡೆತ್ ಓವರ್ ವೇಳೆ ನಿತೀಶ್ ರಾಣಾ-ರಿಂಕು ಸಿಂಗ್ ಜತೆಗೂಡಿದರು. 35 ಎಸೆತಗಳಿಂದ 62 ರನ್ ಪೇರಿಸಿ ಕೆಕೆಆರ್ ಮೊತ್ತಕ್ಕೆ ಒಂದಿಷ್ಟು ಗೌರವ ತಂದಿತ್ತರು.
ಕೆಕೆಆರ್ 3 ಬದಲಾವಣೆ :
ಈ ಪಂದ್ಯಕ್ಕಾಗಿ ಕೆಕೆಆರ್ 3 ಬದಲಾವಣೆ ಮಾಡಿಕೊಂಡಿತು. ಆರನ್ ಫಿಂಚ್, ಹರ್ಷಿತ್ ರಾಣಾ ಮತ್ತು ಬಾಬಾ ಇಂದ್ರಜಿತ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಡೆಲ್ಲಿ ತಂಡಕ್ಕೆ ಮಿಚೆಲ್ ಮಾರ್ಷ್ ಮರಳಿದರು. ಚೇತನ್ ಸಕಾರಿಯಾ ಡೆಲ್ಲಿ ಪರ ಮೊದಲ ಪಂದ್ಯ ಆಡಿದರು.