ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸೇವೆಯನ್ನು ಪಡೆಯಬಹುದಾಗಿದೆ ಎಂದು ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ಬೆಂಗಳೂರು ಏ.9ರಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ತಿಗೊಂಡ ಬಳಿಕ ಶಿಬಿರಕ್ಕೆ ಸೇರ್ಪಡೆಗೊಂಡಿದ್ದರೂ ಮ್ಯಾಕ್ಸ್‌ವೆಲ್ ಅವರು ಕ್ರಿಕೆಟ್ ಆಸ್ಟ್ರೇಲಿಯ ತನ್ನ ಒಪ್ಪಂದಕ್ಕೆ ಸಹಿ ಹಾಕಿದ ಆಟಗಾರರಿಗೆ ವಿಧಿಸಿದ ನಿರ್ಬಂಧದ ಕಾರಣವಾಗಿ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ.
ಮ್ಯಾಕ್ಸ್‌ವೆಲ್ ಸದ್ಯ ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯ ತಂಡದಲ್ಲಿ ಇಲ್ಲದಿದ್ದರೂ ಅವರು ಐಪಿಎಲ್‌ನಲ್ಲಿ ಆಡಲು ಏ.6ರವರೆಗೆ ಕಾಯಬೇಕಾಗಿದೆ. ಏ.6ರ ಬಳಿಕವಷ್ಟೇ ಆಸ್ಟ್ರೇಲಿಯ ಆಟಗಾರರು ಐಪಿಎಲ್‌ನಲ್ಲಿ ಆಡಲು ಅವಕಾಶವಿದೆ.
ಇದನ್ನೂ ಓದಿ:ಕಿರಿಯರ ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಜಯ
ಕ್ರಿಕೆಟ್ ಆಸ್ಟ್ರೇಲಿಯದ ಸೂಚನೆಯಂತೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿದ ಆಟಗಾರರು ಏ.6ರ ಮೊದಲು ಐಪಿಎಲ್‌ನಲ್ಲಿ ಆಡಲು ಲಭ್ಯರಿಲ್ಲ. ಆಟಗಾರರು ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು.
ಆದರೆ ಏ.6ರ ಮೊದಲು ಆಡಲು ಸಾಧ್ಯವಿಲ್ಲ. ಹೀಗಾಗಿ ಮ್ಯಾಕ್ಸ್‌ವೆಲ್ ಆರ್‌ಸಿಬಿಯ ಏ.9ರ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ಹೆಸ್ಸನ್ ಸ್ಪಷ್ಟಪಡಿಸಿದ್ದಾರೆ.