ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ ಅತ್ಯಗತ್ಯ ಜಯದೊಂದಿಗೆ ಐಪಿಎಲ್ ಹೋರಾಟ ವನ್ನು ಜಾರಿಯಲ್ಲಿರಿಸಿದೆ. ಗುರುವಾರದ ಮುಖಾ ಮುಖೀಯಲ್ಲಿ ಸನ್‌ರೈಸರ್ ಹೈದರಾಬಾದ್ ತಂಡ ವನ್ನು 21 ರನ್ನುಗಳಿಂದ ಮಣಿಸಿ 5ನೇ ಗೆಲುವಿ ನೊಂದಿಗೆ 5ನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್ ಆರಕ್ಕೆ ಇಳಿದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ವಾರ್ನರ್-ಪೊವೆಲ್ ಜೋಡಿಯ ಸಿಡಿಲಬ್ಬರದ ಆಟದ ನೆರವಿನಿಂದ ಮೂರೇ ವಿಕೆಟಿಗೆ 207 ರನ್ ಪೇರಿಸಿತು. ಹೈದರಾಬಾದ್ 8 ವಿಕೆಟಿಗೆ 186 ರನ್ ಗಳಿಸಿ 5ನೇ ಸೋಲನುಭವಿಸಿತು.
ತನ್ನನ್ನು ಕಡೆಗಣಿಸಿದ ಹಳೆ ತಂಡವಾದ ಹೈದರಾಬಾದ್ ವಿರುದ್ಧ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ ವಾರ್ನರ್ ಡೆಲ್ಲಿಯ ಸ್ಟಾರ್ ಬ್ಯಾಟರ್ ಆಗಿ ಮೂಡಿಬಂದರು. ಇವರೊಂದಿಗೆ ವೆಸ್ಟ್ ಇಂಡೀಸ್‌ನ ಬಿಗ್ ಹಿಟ್ಟರ್ ರೋವ್ಮನ್ ಪೊವೆಲ್ ಕೂಡ ಸಿಡಿದು ನಿಂತರು. ವಾರ್ನರ್ ಅಜೇಯ 92 ರನ್ (68 ಎಸೆತ, 12 ಬೌಂಡರಿ, 3 ಸಿಕ್ಸರ್), ರೋವ್ಮನ್ ಪೊವೆಲ್ ಅಜೇಯ 67 ರನ್ (35 ಎಸೆತ, 3 ಬೌಂಡಿ, 6 ಸಿಕ್ಸರ್) ಹೊಡೆದರು. ಈ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 122 ರನ್ ಒಟ್ಟುಗೂಡಿತು.
ಭುವಿ ಅಮೋಘ ನಿಯಂತ್ರಣ :
Related Articles
ಪೃಥ್ವಿ ಶಾ ಬದಲು ಬಂದ ಆರಂಭಕಾರ ಮನ್‌ದೀಪ್ ಸಿಂಗ್ ಖಾತೆ ತೆರೆಯದೆ ಭುವನೇಶ್ವರ್ ಅವರ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡರು. ಭುವಿ ವಿಕೆಟ್ ಮೇಡನ್ ಮೂಲಕ ಭರ್ಜರಿ ಆರಂಭ ಒದಗಿಸಿದರು. ಅವರ ಮುಂದಿನ ಓವರ್‌ನಲ್ಲಿ ಬಂದದ್ದು ಒಂದೇ ರನ್. ಸತತ 11 ಡಾಟ್ ಬಾಲ್ ಎಸೆಯುವ ಮೂಲಕ ಅವರು ಅಮೋಘ ನಿಯಂತ್ರಣ ಸಾಧಿಸಿದರು.
ಆದರೆ ವೇಗಿ ಉಮ್ರಾನ್ ಮಲಿಕ್ ಅವರ ಮೊದಲ ಓವರ್‌ನಲ್ಲೇ ಡೆಲ್ಲಿ “ರನ್ ಕವರ್’ ಮಾಡಿತು. 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 21 ರನ್ ಸೋರಿ ಹೋಯಿತು. ಪಂದ್ಯದ 5ನೇ ಓವರ್‌ನಲ್ಲಿ ಸೀನ್ ಅಬೋಟ್ ಮತ್ತೂಂದು ಯಶಸ್ಸು ತಂದಿತ್ತರು. ಅಪಾಯಕಾರಿ ಮಿಚೆಲ್ ಮಾರ್ಷ್ 10 ರನ್ ಮಾಡಿ ರಿಟರ್ನ್ ಕ್ಯಾಚ್ ನೀಡಿದರು. ಆದರೆ ಪವರ್ ಪ್ಲೇಯಲ್ಲಿ 50 ರನ್ ಪೇರಿಸುವಲ್ಲಿ ಡೆಲ್ಲಿ ಯಶಸ್ವಿಯಾಯಿತು. ಡೇವಿಡ್ ವಾರ್ನರ್-ರಿಷಭ್ ಪಂತ್ ಸಿಡಿದು ನಿಂತಿದ್ದರು.
ಈ ಜೋಡಿಯಿಂದ 3ನೇ ವಿಕೆಟಿಗೆ 29 ಎಸೆತಗಳಿಂದ 48 ರನ್ ಒಟ್ಟುಗೂಡಿತು. ಇದರಲ್ಲಿ ಪಂತ್ ಗಳಿಕೆ 16 ಎಸೆತಗಳಿಂದ 26 ರನ್. ಶ್ರೇಯಸ್ ಗೋಪಾಲ್ ಅವರನ್ನು ಟಾರ್ಗೆಟ್ ಮಾಡಿದ ಪಂತ್ ಹ್ಯಾಟ್ರಿಕ್ ಸಿಕ್ಸರ್ ಹಾಗೂ ಒಂದು ಫೋರ್ ಸಿಡಿಸಿ ಅಪಾಯಕಾರಿಯಾಗಿ ಗೋಚರಿಸಿದರು. ಮುಂದಿನ ಎಸೆತದಲ್ಲೇ ಬೌಲ್ಡ್ ಆದರು. 10 ಓವರ್ ಮುಕ್ತಾಯಕ್ಕೆ ಡೆಲ್ಲಿ 3 ವಿಕೆಟಿಗೆ 91 ರನ್ ಪೇರಿಸಿತು.
ಈ ನಡುವೆ ಮಾರ್ಕ್‌ರಮ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ವಾರ್ನರ್ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಸಾಧನೆಗೈದರು. ಉಮ್ರಾನ್ ಮಲಿಕ್ ಎಸೆತವನ್ನು ಬೌಂಡರಿಗೆ ಕಳುಹಿಸಿ ಈ ಐಪಿಎಲ್‌ನಲ್ಲಿ 4ನೇ ಅರ್ಧ ಶತಕ ಪೂರ್ತಿಗೊಳಿಸಿದರು. ಇದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಈ ವರ್ಷ ವಾರ್ನರ್ ದಾಖಲಿಸಿದ 3ನೇ ಫಿಫ್ಟಿ. ಮಲಿಕ್ ಅವರ ಮುಂದಿನ ಎಸೆತ 154.8 ಕಿ.ಮೀ. ವೇಗದಲ್ಲಿತ್ತು. ಇದು ಈ ಕೂಟದ ಅತೀ ವೇಗದ ಎಸೆತವಾಗಿ ದಾಖಲಾಯಿತು.
ವಾರ್ನರ್-ರೋವ್ಮನ್ ಪೊವೆಲ್ ಒಟ್ಟುಗೂಡಿದ ಬಳಿಕ ಡೆಲ್ಲಿ ರನ್ ಗತಿ ಏರುತ್ತ ಹೋಯಿತು. ಇಬ್ಬರೂ ಸಿಡಿದು ನಿಂತರು. 15 ಓವರ್ ಮುಕ್ತಾಯಕ್ಕೆ 3ಕ್ಕೆ 137 ರನ್ ಒಟ್ಟುಗೂಡಿತು. ಕೊನೆಯ 5 ಓವರ್‌ಗಳಲ್ಲಿ 70 ರನ್ ಹರಿದು ಬಂತು.
ಇಬ್ಬರೂ ಸೇರಿಕೊಂಡು ಹೈದರಾಬಾದ್ ದಾಳಿಯನ್ನು ಪುಡಿಗಟ್ಟತೊಡಗಿದರು. ಅಂತಿಮ ಓವರ್‌ನಲ್ಲಿ ವಾರ್ನರ್‌ಗೆ ಸೆಂಚುರಿ ಪೂರ್ತಿಗೊಳಿಸುವ ಅವಕಾಶವಿತ್ತು. ಆದರೆ ಉಮ್ರಾನ್ ಮಲಿಕ್ ಅವರ ಆ ಓವರನ್ನು ಪೊವೆಲ್ ಒಬ್ಬರೇ ನಿಭಾಯಿಸಿ 19 ರನ್ ಸಿಡಿಸಿದರು (1 ಸಿಕ್ಸರ್, 3 ಫೋರ್).
ಎರಡೂ ತಂಡಗಳು ಭರ್ಜರಿ ಬದಲಾವಣೆಯೊಂದಿಗೆ ಆಡಲಿಳಿದವು. ಡೆಲ್ಲಿ ಪೃಥ್ವಿ ಶಾ, ಅಕ್ಷರ್ ಪಟೇಲ್, ಮುಸ್ತಫಿಜುರ್ ರೆಹಮಾನ್ ಮತ್ತು ಚೇತನ್ ಸಕಾರಿಯ ಅವರನ್ನು ಹೊರಗಿರಿಸಿತು. ಹೈದರಾಬಾದ್ 3 ಪರಿವರ್ತನೆ ಮಾಡಿಕೊಂಡಿತು. ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್ ತಂಡದಿಂದ ಬೇರ್ಪಟ್ಟರು.