Advertisement

ಐಪಿಎಲ್‌ 2022: ನಿರ್ಗಮನದ ಬಾಗಿಲಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌

12:50 AM Apr 26, 2022 | Team Udayavani |

ಮುಂಬಯಿ: ಪಂಜಾಬ್‌ ಕಿಂಗ್ಸ್‌ ಎದುರಿನ ನಿರ್ಣಾಯಕ ಲೀಗ್‌ ಪಂದ್ಯದಲ್ಲಿ 11 ರನ್ನುಗಳ ಸೋಲನುಭವಿಸಿದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ 2022ನೇ ಐಪಿಎಲ್‌ ಪಂದ್ಯಾವಳಿಯಿಂದ ತನ್ನ ನಿರ್ಗಮನವನ್ನು ಬಹುತೇಕ ಖಾತ್ರಿಪಡಿಸಿದೆ.

Advertisement

ಆರಂಭಕಾರ ಶಿಖರ್‌ ಧವನ್‌ ಹಾಗೂ ಲಂಕೆಯ ಬಿಗ್‌ ಹಿಟ್ಟರ್‌ ಭನುಕ ರಾಜಪಕ್ಸ ಅವರ ಶತಕದ ಜತೆಯಾಟದ ನೆರವು ಪಡೆದ ಪಂಜಾಬ್‌ 4 ವಿಕೆಟಿಗೆ 187 ರನ್‌ ಗಳಿಸಿದರೆ, ಚೆನ್ನೈ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿ ಶರಣಾಯಿತು. ಇದು 8 ಪಂದ್ಯಗಳಲ್ಲಿ ಚೆನ್ನೈ ಅನುಭವಿಸಿದ 6ನೇ ಸೋಲು.

ಚೇಸಿಂಗ್‌ ವೇಳೆ ಚೆನ್ನೈ ಆರಂಭಿಕ ಆಘಾತಕ್ಕೆ ಸಿಲುಕಿತು. ಉತ್ತಪ್ಪ, ಸ್ಯಾಂಟ್ನರ್‌, ದುಬೆ ಅವರ ವೈಫಲ್ಯ ತಂಡಕ್ಕೆ ಭಾರೀ ಹೊಡೆತವಿಕ್ಕಿತು. ಈ ನಡುವೆ ಅಂಬಾಟಿ ರಾಯುಡು ಏಕಾಂಗಿ ಹೋರಾಟವೊಂದನ್ನು ಜಾರಿಯಲ್ಲಿರಿಸಿ ಕೇವಲ 39 ಎಸೆತಗಳಿಂದ 78 ರನ್‌ ಬಾರಿಸಿದರು (7 ಬೌಂಡರಿ, 6 ಸಿಕ್ಸರ್‌). 18ನೇ ಓವರ್‌ನಲ್ಲಿ ರಾಯುಡು ಅವರನ್ನು ಬೌಲ್ಡ್‌ ಮಾಡಿದ ರಬಾಡ ಪಂದ್ಯಕ್ಕೆ ತಿರುವು ಕೊಟ್ಟರು. ನಾಯಕ ಜಡೇಜ ಮತ್ತು ಧೋನಿಗೆ ತಂಡವನ್ನು ದಡ ಸೇರಿಸಲಾಗಲಿಲ್ಲ. ಅಂತಿಮ 2 ಓವರ್‌ಗಳಿಂದ 35 ರನ್‌, ಕೊನೆಯ ಓವರ್‌ನಲ್ಲಿ 27 ರನ್‌ ಗಳಿಸಬೇಕಾದ ಒತ್ತಡ ಚೆನ್ನೈ ಮೇಲೆ ಬಿತ್ತು.

ಧವನ್‌ ದಾಖಲೆಗಳ ತೋರಣ
ಶಿಖರ್‌ ಧವನ್‌ ಕೊನೆಯ ವರೆಗೂ ಚೆನ್ನೈ ಬೌಲರ್‌ಗಳನ್ನು ದಂಡಿಸುತ್ತ ಸಾಗಿ ಅಜೇಯ 88 ರನ್‌ ಹೊಡೆದರು. 59 ಎಸೆತಗಳಿಗೆ ಜವಾಬಿತ್ತ ಧವನ್‌ 9 ಫೋರ್‌ ಮತ್ತು 2 ಸಿಕ್ಸರ್‌ ಸಿಡಿಸಿದರು. ಈ ಅವಧಿಯಲ್ಲಿ ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡರು.

ಇದು ಧವನ್‌ ಅವರ 200ನೇ ಐಪಿಎಲ್‌ ಪಂದ್ಯವಾಗಿತ್ತು. ದ್ವಿತೀಯ ಓವರ್‌ನಲ್ಲೇ ಅವರು ಐಪಿಎಲ್‌ನಲ್ಲಿ 6 ಸಾವಿರ ರನ್‌ ಪೂರ್ತಿಗೊಳಿಸಿದ ದ್ವಿತೀಯ ಕ್ರಿಕೆಟಿಗನಾಗಿ ಮೂಡಿಬಂದರು. 6,402 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಬಳಿಕ ಕಾಣಿಸಿಕೊಂಡರು. ಸ್ವಲ್ಪವೇ ಹೊತ್ತಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಸಾಧನೆಯನ್ನೂ ಗೈದರು. ಧವನ್‌ ಈ ಯಾದಿಯಲ್ಲಿ ಕಾಣಿಸಿಕೊಂಡ ಭಾರತದ 3ನೇ ಆಟಗಾರ. ವಿರಾಟ್‌ ಕೊಹ್ಲಿ (10,392) ಮತ್ತು ರೋಹಿತ್‌ ಶರ್ಮ (10,048) ಮೊದಲೆರಡು ಸ್ಥಾನದಲ್ಲಿದ್ದಾರೆ.

Advertisement

ಧವನ್‌ ಸಾಧನೆಯ ಓಟ ಇಲ್ಲಿಗೇ ನಿಲ್ಲಲಿಲ್ಲ. 200ನೇ ಐಪಿಎಲ್‌ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು. ರೋಹಿತ್‌ ಶರ್ಮ 68 ರನ್‌ ಹೊಡೆದ ದಾಖಲೆಯನ್ನು ಅಳಿಸಿದರು.

ಶಿಖರ್‌ ಧವನ್‌ ಅವರ ಇನ್ನೊಂದು ಮೈಲುಗಲ್ಲೆಂದರೆ ಚೆನ್ನೈ ವಿರುದ್ಧ ಸಾವಿರ ರನ್‌ ಗಳಿಸಿದ ಮೊದಲ ಕ್ರಿಕೆಟರ್‌ ಎನಿಸಿದ್ದು. ಈ ಮೊತ್ತವನ್ನು 1,029ಕ್ಕೆ ಏರಿಸಿದರು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತ್ಯಧಿಕ ರನ್‌ ಪೇರಿಸಿದ ದಾಖಲೆಗೆ ಭಾಜನರಾದರು. ರೋಹಿತ್‌ ಶರ್ಮ ಕೆಕೆಆರ್‌ ವಿರುದ್ಧ 1,018 ರನ್‌ ಹೊಡೆದ ದಾಖಲೆ ಮುರಿದು ಬಿತ್ತು.

ಶತಕದ ಜತೆಯಾಟ
ಪಂಜಾಬ್‌ ಆರಂಭಿಕರಿಗೆ ಪವರ್‌ ಪ್ಲೇ ಅವಧಿಯನ್ನು ಪೂರ್ತಿಗೊಳಿಸಲಾಗಲಿಲ್ಲ. ಸ್ಕೋರ್‌ 37 ರನ್‌ ಆದಾಗ ಮಾಯಾಂಕ್‌ ಅಗರ್ವಾಲ್‌ ವಿಕೆಟ್‌ ಬಿತ್ತು. ಪಂಜಾಬ್‌ ಕಪ್ತಾನನ ಗಳಿಕೆ ಕೇವಲ 18 ರನ್‌. ಮಹೀಶ್‌ ತೀಕ್ಷಣ ಈ ವಿಕೆಟ್‌ ಕೆಡವಿದರು.

ಶಿಖರ್‌ ಧವನ್‌-ಭನುಕ ರಾಜಪಕ್ಸ ಜತೆಗೂಡಿದ ಬಳಿಕ ಪಂಜಾಬ್‌ ತನ್ನ ಬ್ಯಾಟಿಂಗ್‌ ಪರಾಕ್ರಮವನ್ನು ಮುಂದುವರಿಸುತ್ತ ಹೋಯಿತು. ಆದರೆ ಇದರಲ್ಲಿ ತೀರಾ ಅಬ್ಬರವೇನೂ ಇರಲಿಲ್ಲ. ಹಾಗೆಯೇ ಚೆನ್ನೈ ಫೀಲ್ಡಿಂಗ್‌ ಕೂಡ ಗಮನಾರ್ಹ ಮಟ್ಟದಲ್ಲಿರಲಿಲ್ಲ. ಕೆಲವು ರನೌಟ್‌ ಅವಕಾಶಗಳನ್ನು ಅದು ಮಿಸ್‌ ಮಾಡಿಕೊಂಡಿತು.

10 ಓವರ್‌ ಮುಕ್ತಾಯಕ್ಕೆ ಪಂಜಾಬ್‌ ಸ್ಕೋರ್‌ 72 ರನ್‌ ಆಗಿತ್ತು. ಇಲ್ಲಿಂದ ಮುಂದೆ ಬ್ಯಾಟಿಂಗ್‌ ತುಸು ಬಿರುಸುಗೊಂಡಿತು. ಧವನ್‌ ಮತ್ತು ರಾಜಪಕ್ಸ ಮುನ್ನುಗ್ಗಿ ಬೀಸಲಾರಂಭಿಸಿದರು. 15 ಓವರ್‌ ಅಂತ್ಯಕ್ಕೆ ಒಂದೇ ವಿಕೆಟಿಗೆ 123 ರನ್‌ ಮಾಡುವ ಮೂಲಕ ಪಂಜಾಬ್‌ ಸವಾಲಿನ ಮೊತ್ತದ ಸೂಚನೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವ ಚೆನ್ನೈ ತಂಡದ ಪ್ರಯತ್ನವೆಲ್ಲ ವಿಫ‌ಲಗೊಂಡಿತು.

ಪಂಜಾಬ್‌ ಪಾಲಿಗೆ ಕೊನೆಯ 5 ಓವರ್‌ ನಿರ್ಣಾಯಕವಾಗಿತ್ತು. ಈ ವೇಳೆ ಧವನ್‌-ರಾಜಪಕ್ಸ ಶತಕದ ಜತೆಯಾಟ ಪೂರ್ತಿಗೊಳಿಸಿದರು. ದ್ವಿತೀಯ ವಿಕೆಟಿಗೆ 71 ಎಸೆತಗಳಿಂದ 110 ರನ್‌ ಪೇರಿಸಿದರು. ಇದು ಈ ಐಪಿಎಲ್‌ನಲ್ಲಿ ಪಂಜಾಬ್‌ ಪರ ದಾಖಲಾದ ಮೊದಲ ಶತಕದ ಜತೆಯಾಟ.

ಕೆ.ಎಲ್‌. ರಾಹುಲ್‌-ಕ್ವಿಂಟನ್‌ ಡಿ ಕಾಕ್‌ 99 ರನ್‌ ಒಟ್ಟುಗೂಡಿಸಿದ್ದು ದೊಡ್ಡ ಜತೆಯಾಟವಾಗಿತ್ತು.
ರಾಜಪಕ್ಸ ಕೊಡುಗೆ 32 ಎಸೆತಗಳಿಂದ 42 ರನ್‌ (2 ಬೌಂಡರಿ, 2 ಸಿಕ್ಸರ್‌). ಧವನ್‌-ಲಿವಿಂಗ್‌ಸ್ಟೋನ್‌ ಜತೆಗೂಡಿದ ಬಳಿಕ ಪಂಜಾಬ್‌ ಬ್ಯಾಟಿಂಗ್‌ ಇನ್ನಷ್ಟು ಬಿರುಸು ಪಡೆಯಿತು. ಈ 5 ಓವರ್‌ಗಳಲ್ಲಿ 64 ರನ್‌ ಹರಿದು ಬಂತು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಮಾಯಾಂಕ್‌ ಅಗರ್ವಾಲ್‌ ಸಿ ದುಬೆ ಬಿ ತೀಕ್ಷಣ 18
ಶಿಖರ್‌ ಧವನ್‌ ಔಟಾಗದೆ 88
ಭನುಕ ರಾಜಪಕ್ಸ ಸಿ ದುಬೆ ಬಿ ಬ್ರಾವೊ 42
ಲಿವಿಂಗ್‌ಸ್ಟೋನ್‌ ಸಿ ಚೌಧರಿ ಬಿ ಬ್ರಾವೊ 19
ಜಾನಿ ಬೇರ್‌ಸ್ಟೊ ರನೌಟ್‌ 6
ಇತರ 14
ಒಟ್ಟು (4 ವಿಕೆಟಿಗೆ) 187
ವಿಕೆಟ್‌ ಪತನ: 1-37, 2-147, 3-174, 4-187.
ಬೌಲಿಂಗ್‌:
ಮುಕೇಶ್‌ ಚೌಧರಿ 4-0-36-0
ಮಹೀಶ್‌ ತೀಕ್ಷಣ 4-0-32-1
ಮಿಚೆಲ್‌ ಸ್ಯಾಂಟ್ನರ್‌ 2-0-8-0
ರವೀಂದ್ರ ಜಡೇಜ 2-0-18-0
ಡ್ವೇನ್‌ ಪ್ರಿಟೋರಿಯಸ್‌ 4-0-50-0
ಡ್ವೇನ್‌ ಬ್ರಾವೊ 4-0-42-2

ಚೆನ್ನೈ ಸೂಪರ್‌ ಕಿಂಗ್ಸ್‌

ಆರ್‌. ಗಾಯಕ್ವಾಡ್‌ ಸಿ ಅಗರ್ವಾಲ್‌ ಬಿ ರಬಾಡ 30
ರಾಬಿನ್‌ ಉತ್ತಪ್ಪ ಸಿ ರಿಷಿ ಧವನ್‌ ಬಿ ಸಂದೀಪ್‌ 1
ಮಿಚೆಲ್‌ ಸ್ಯಾಂಟ್ನರ್‌ ಬಿ ಆರ್ಷದೀಪ್‌ 9
ಶಿವಂ ದುಬೆ ಬಿ ರಿಷಿ ಧವನ್‌ 8
ಅಂಬಾಟಿ ರಾಯುಡು ಬಿ ರಬಾಡ 78
ರವೀಂದ್ರ ಜಡೇಜ ಔಟಾಗದೆ 21
ಎಂ.ಎಸ್‌. ಧೋನಿ ಸಿ ಬೇರ್‌ಸ್ಟೊ ಬಿ ರಿಷಿ 12
ಡ್ವೇನ್‌ ಪ್ರಿಟೋರಿಯಸ್‌ ಔಟಾಗದೆ 1
ಇತರ 16
ಒಟ್ಟು (6 ವಿಕೆಟಿಗೆ) 176
ವಿಕೆಟ್‌ ಪತನ: 1-10, 2-30, 3-40, 4-89, 5-153, 6-168
ಬೌಲಿಂಗ್‌:
ಕಾಗಿಸೊ ರಬಾಡ 4-0-23-2
ಸಂದೀಪ್‌ ಶರ್ಮ 4-0-40-1
ರಿಷಿ ಧವನ್‌ 4-0-39-2
ಆರ್ಷದೀಪ್‌ ಸಿಂಗ್‌ 4-0-23-1
ರಾಹುಲ್‌ ಚಹರ್‌ 3-0-30-0
ಲಿಯಂ ಲಿವಿಂಗ್‌ಸ್ಟೋನ್‌ 1-0-12-0

Advertisement

Udayavani is now on Telegram. Click here to join our channel and stay updated with the latest news.

Next