Advertisement
ತನ್ನ ಆರಂಭಿಕ ಪಂದ್ಯದಲ್ಲೇ ಕೋವಿಡ್ ವಾರಿಯರ್ಸ್ ಗೆ ಗೌರವ ಸಲ್ಲಿಸಲಿರುವ ಆರ್‌ಸಿಬಿ, ನೀಲಿ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿರುವುದು ವಿಶೇಷ. ಈ ಉಡುಗೆ ತಂಡಕ್ಕೆ ಎಷ್ಟರ ಮಟ್ಟಿಗೆ ಅದೃಷ್ಟ ತಂದೀತು ಎಂಬುದು ಅಭಿಮಾನಿಗಳ ಕುತೂಹಲ.
Related Articles
Advertisement
ಮ್ಯಾಕ್ಸ್‌ವೆಲ್ (223 ರನ್), ಎಬಿಡಿ (207 ರನ್), ಕೊಹ್ಲಿ (198 ರನ್) ಮೊದಲಾರ್ಧದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಡಿಕ್ಕಲ್ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ತುಸು ರನ್ ಬರಗಾಲಕ್ಕೆ ಸಿಲುಕಿದಂತಿದೆ (195). ಆದರೆ ಈ ನಾಲ್ವರಲ್ಲಿ ಇಬ್ಬರು ಸಿಡಿದು ನಿಂತರೂ ತಂಡದ ಮೊತ್ತ ಇನ್ನೂರ ಗಡಿಯತ್ತ ದೌಡಾಯಿಸುವುದರಲ್ಲಿ ಅನುಮಾನವಿಲ್ಲ. ಆದರೆ ಅಬುಧಾಬಿ ಪಿಚ್ ಹೇಗೆ ವರ್ತಿಸೀತು ಎಂಬುದನ್ನು ಕಾದು ನೋಡಬೇಕಿದೆ.
ಇವರಲ್ಲದೆ ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಕೆ.ಎಸ್. ಭರತ್ ಕೂಡ ಬಿರುಸಿನಿಂದ ಬ್ಯಾಟ್ ಬೀಸಬಲ್ಲ ಯುವ ಪ್ರತಿಭೆಗಳು.
ಶ್ರೀಲಂಕಾದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಸೇರ್ಪಡೆಯಿಂದ ಆರ್‌ಸಿಬಿ ಇನ್ನಷ್ಟು ಬಲಿಷ್ಠಗೊಂಡಿದೆ. ಲಂಕೆಯ ಪೇಸ್ ಬೌಲರ್ ದುಷ್ಮಂತ ಚಮೀರ ಕೂಡ ತಂಡದ ಪಾಲಿಗೆ ಹೊಸಬರಾಗಿದ್ದಾರೆ. ಆ್ಯಡಂ ಝಂಪ ಮತ್ತು ಕೇನ್ ರಿಚರ್ಡ್‌ಸನ್ ಸ್ಥಾನವನ್ನು ಇವರು ತುಂಬಿದ್ದಾರೆ.
ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ ಅವರ ಅನಿರೀಕ್ಷಿತ ಯಶಸ್ಸು ಆರ್‌ಸಿಬಿಯ ಓಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜಾಮೀಸನ್, ಸಿರಾಜ್, ಚಹಲ್, ನವದೀಪ್‌ಸೆçನಿ… ಹೀಗೆ ತಂಡದ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ವೆರೈಟಿ ಇದೆ.
ಹಿನ್ನಡೆಯಲ್ಲಿ ಕೆಕೆಆರ್ :
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಕೂಡ ಬಲಾಡ್ಯ ತಂಡ. ಆದರೆ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮ ದಿರುವುದು ತಂಡಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಗಿಲ್-ರಾಣ, ತ್ರಿಪಾಠಿ, ಮಾರ್ಗನ್, ಕಾರ್ತಿಕ್, ರಸೆಲ್, ಶಕಿಬ್ ಅವರೆಲ್ಲರೂ ಭಾರತ ಆವೃತ್ತಿಯಲ್ಲಿ ಮಂಕಾಗಿದ್ದರು. ಕೆಕೆಆರ್ ಗೆಲುವಿನ ಹಳಿ ಏರಬೇಕಾದರೆ ಇವರೆಲ್ಲರ ಫಾರ್ಮ್ ನಿರ್ಣಾಯಕ.
ಮೌಲ್ಯಕ್ಕೆ ತಕ್ಕ ಬೌಲಿಂಗ್ ತೋರ್ಪಡಿಸದೆ ಹೋದರೂ ವೇಗಿ ಪ್ಯಾಟ್ ಕಮಿನ್ಸ್ ಹಿಂದೆ ಸರಿದಿರುವುದು ತಂಡಕ್ಕೆ ಎದುರಾಗಿರುವ ಹೊಡೆತವೇ ಆಗಿದೆ. ಇವರ ಸ್ಥಾನ ಟಿಮ್ ಸೌಥಿ ಪಾಲಾಗಿದೆ. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್ ಜಾದೂ ಮಾಡಬೇಕಿದೆ.
ಮ್ಯಾಕ್ಸ್‌ವೆಲ್, ಎಬಿಡಿ ಹೊಡಿಬಡಿ ಆಟ :
ಕೆಕೆಆರ್ ಎದುರಿನ ಪ್ರಸಕ್ತ ಸಾಲಿನ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ 38 ರನ್ನುಗಳ ಜಯ ಗಳಿಸಿತ್ತು. ಇದರೊಂದಿಗೆ ಮೊದಲ ಮೂರೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿತ್ತು.
ಚೆನ್ನೈಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೊಹ್ಲಿ ಪಡೆ 4 ವಿಕೆಟಿಗೆ 204 ರನ್ ಪೇರಿಸಿ ಸವಾಲೊಡ್ಡಿದರೆ, ಕೋಲ್ಕತಾ 8 ವಿಕೆಟಿಗೆ 166 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರ್‌ಸಿಬಿ 2 ರನ್ ಆಗುವಷ್ಟರಲ್ಲಿ ಕೊಹ್ಲಿ (5) ಮತ್ತು ಪಾಟೀದಾರ್ (1) ವಿಕೆಟ್ ಕಳೆದುಕೊಂಡಿತ್ತು. ಪಡಿಕ್ಕಲ್ 25 ರನ್ ಮಾಡಿ ನಿರ್ಗಮಿಸಿದ್ದರು. ಅನಂತರ ಜತೆಗೂಡಿದ ಮ್ಯಾಕ್ಸ್ ವೆಲ್ (49 ಎಸೆತಗಳಿಂದ 78) ಮತ್ತು ಎಬಿಡಿ (34 ಎಸೆತಗಳಿಂದ ಅಜೇಯ 76) ಸ್ಫೋಟಕ ಆಟಕ್ಕೆ ಮುಂದಾಗುವುದರೊಂದಿಗೆ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.
ಆರ್‌ಸಿಬಿ ಬೌಲಿಂಗ್‌ನಲ್ಲೂ ಮಿಂಚಿತು. ಜಾಮೀಸನ್ (41ಕ್ಕೆ 3), ಹರ್ಷಲ್ ಪಟೇಲ್ (17ಕ್ಕೆ 2), ಚಹಲ್ (34ಕ್ಕೆ 2) ಘಾತಕ ದಾಳಿ ಸಂಘಟಿಸಿದರು. ರಸೆಲ್ ಹೊರತುಪಡಿಸಿ ಬೇರೆ ಯಾರಿಗೂ 30 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಎಬಿಡಿ ಪಂದ್ಯಶ್ರೇಷ್ಠರಾಗಿ ಮೂಡಿಬಂದರು.