Advertisement
ಮೊದಲಿನ ಯೋಜನೆಯಂತೆ, 2021ರ ಐಪಿಎಲ್‌ನಲ್ಲಿ 10 ತಂಡಗಳನ್ನು ಆಡಿಸಲು ಬಿಸಿಸಿಐ ಯೋಜಿಸಿತ್ತು. ಆದರೆ ಇದನ್ನೀಗ 9ಕ್ಕೆ ಸೀಮಿತಗೊಳಿಸಲಾಗಿದೆ. 2022ರಲ್ಲಿ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸುವ ಬಗ್ಗೆ ಯೋಚಿಸಲಾಗುವುದು. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ದೀಪಾವಳಿ ಬಳಿಕ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ 9ನೇ ತಂಡಕ್ಕಾಗಿ ಬಿಡ್ ಕರೆಯುವ ಸಾಧ್ಯತೆ ಇದೆ.
9ನೇ ಐಪಿಎಲ್ ತಂಡಕ್ಕಾಗಿ ದೇಶದ ಅನೇಕ ಉದ್ದಿಮೆದಾರರು, ಬೃಹತ್ ಕಂಪೆನಿ ಗಳು ಆಸಕ್ತಿ ವಹಿಸಿವೆ. ಸಂಜೀವ್ ಗೋಯೆಂಕಾ ಗ್ರೂಪ್, ಟಾಟಾಸ್ ಮತ್ತು ಅದಾನಿ ಗ್ರೂಪ್ ಹೊಸ ಫ್ರಾಂಚೈಸಿಯ ಮಾಲಕತ್ವ ವಹಿಸಲು ಮುಂದೆ ಬಂದಿರುವ ಸುದ್ದಿ ಇದೆ. ಮಾಧ್ಯಮ ದೈತ್ಯ ರೋನಿ ಸೂðವಾಲಾ, ಬ್ಯಾಂಕರ್ ಉದಯ್ ಕೋಟಕ್ ಕೂಡ ಈ ಸಾಲಿನಲ್ಲಿವೆ ಎನ್ನಲಾಗಿದೆ. ಎಲ್ಲವೂ ಯೋಜನೆಯಂತೆ ಸಾಗಿದರೆ 2021ರ ಐಪಿಎಲ್ ಭಾರತದಲ್ಲಿ, ಮಾರ್ಚ್ ಕೊನೆಯ ವಾರ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿಕ್ಕಿದೆ. 9ನೇ ತಂಡ ಆಡಲಿಳಿದರೆ ಆಗ ಪಂದ್ಯಗಳ ಸಂಖ್ಯೆ 60ರಿಂದ 76ಕ್ಕೆ ಏರುತ್ತದೆ. ಹೆಚ್ಚುವರಿ ಎರಡು ತಂಡಗಳ ಪ್ರವೇಶವಾದರೆ ಈ ಸಂಖ್ಯೆ 90ಕ್ಕೆ ನೆಗೆಯಲಿದೆ. “ಐಪಿಎಲ್ ವಿಂಡೋ’ ತೀರಾ ಚಿಕ್ಕದಾಗಿರುವುದರಿಂದ ಈ ಅವಧಿಯಲ್ಲಿ 90 ಪಂದ್ಯಗಳನ್ನು ಆಡಿಸಲು ಸಾಧ್ಯವಾಗದು. ಇದಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು, 2022ರಲ್ಲಿ ಅಥವಾ ಅನಂತರದ ವರ್ಷಗಳಲ್ಲಿ 10 ತಂಡಗಳಿಗೆ ಅವಕಾಶ ನೀಡುವುದು ಬಿಸಿಸಿಐ ಯೋಜನೆ.