Advertisement

ಪ್ಲೇ ಆಫ್‌ ಸನಿಹ ಕೆಕೆಆರ್‌

11:16 PM Oct 07, 2021 | Team Udayavani |

ಶಾರ್ಜಾ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ 86 ರನ್ನುಗಳ ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್‌ ಐಪಿಎಲ್‌ ಪ್ಲೇ ಆಫ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಫಲಿತಾಂಶದೊಂದಿಗೆ ರಾಜಸ್ಥಾನ್‌ ಮತ್ತು ದಿನದ ಮೊದಲ ಪಂದ್ಯವನ್ನು ಜಯಿಸಿದ್ದ ಪಂಜಾಬ್‌ ತಂಡಗಳೆರಡೂ ಕೂಟದಿಂದ ಹೊರಬಿದ್ದವು. ಇನ್ನೊಂದು ತಂಡವಾದ ಮುಂಬೈ ಹಾದಿ ಇನ್ನಷ್ಟು ದುರ್ಗಮಗೊಂಡಿದೆ.

Advertisement

ಕೆಕೆಆರ್‌ 4 ವಿಕೆಟಿಗೆ 171 ರನ್‌ ಪೇರಿಸಿ ಸವಾಲೊಡ್ಡಿದರೆ, ರಾಜಸ್ಥಾನ್‌ 16.1 ಓವರ್‌ಗಳಲ್ಲಿ 85 ರನ್ನಿಗೆ ಆಲೌಟ್‌ ಆಯಿತು.

ಆರಂಭಕಾರ ಶುಭಮನ್‌ ಗಿಲ್‌ ಅವರ ಅರ್ಧ ಶತಕ ಕೆಕೆಆರ್‌ ಸರದಿಯ ಆಕರ್ಷಣೆ ಎನಿಸಿತು. ಬೌಲಿಂಗ್‌ನಲ್ಲಿ ಶಿವಂ ಮಾವಿ 21ಕ್ಕೆ 4, ಲಾಕಿ ಫರ್ಗ್ಯುಸನ್‌ 18ಕ್ಕೆ 3 ವಿಕೆಟ್‌ ಕಿತ್ತು ಸ್ಯಾಮ್ಸನ್‌ ಬಳಗಕ್ಕೆ ಬಲವಾದ ಪ್ರಹಾರವಿಕ್ಕಿದರು.

ಬಿಗ್‌ ಹಿಟ್ಟರ್‌ಗಳಾದ ಅಯ್ಯರ್‌-ಗಿಲ್‌ ಕ್ರೀಸಿನಲ್ಲಿದ್ದರೂ ಪವರ್‌ ಪ್ಲೇಯಲ್ಲಿ ಕೆಕೆಆರ್‌ಗೆ ಗಳಿಸಲು ಸಾಧ್ಯವಾದದ್ದು 34 ರನ್‌ ಮಾತ್ರ. 10 ಓವರ್‌ ತನಕವೂ ಇವರಿಬ್ಬರೇ ಜತೆಗೂಡಿ ಸಾಗಿದರು. ಅರ್ಧ ಹಾದಿ ಕ್ರಮಿಸುವಾಗ ಸ್ಕೋರ್‌ 69ಕ್ಕೆ ಏರಿತು. 11ನೇ ಓವರ್‌ನಲ್ಲಿ ದಾಳಿಗಿಳಿದ ತೇವಟಿಯಾ 5ನೇ ಎಸೆತದಲ್ಲೇ ಅಯ್ಯರ್‌ ಅವರನ್ನು ಬೌಲ್ಡ್‌ ಮಾಡಿ ರಾಜಸ್ಥಾನಕ್ಕೆ ಮೊದಲ ಯಶಸ್ಸು ತಂದಿತ್ತರು. ಅಯ್ಯರ್‌ ಗಳಿಕೆ 35 ಎಸೆತಗಳಿಂದ 38 ರನ್‌. ಇದರಲ್ಲಿ 3 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು.

ಅನಂತರದ ಕ್ರೀಸ್‌ ಇಳಿದ ರಾಣಾ ಆರಂಭದಿಂದಲೇ ಪ್ರತಾಪ ತೋರಿ ಫಿಲಿಪ್ಸ್‌ ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿದರು. ಆದರೆ ಫಿಲಿಪ್ಸ್‌ ಅದೇ ಓವರ್‌ನಲ್ಲಿ ಸೇಡು ತೀರಿಸಿಕೊಂಡರು. ಕೇವಲ 5 ಎಸೆತ ಎದುರಿಸಿದ ರಾಣಾ ಆಟ 12 ರನ್ನಿಗೆ ಮುಗಿಯಿತು.

Advertisement

ಇನ್ನೊಂದು ಬದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಗಿಲ್‌ ನಿಧಾನವಾಗಿ ಬ್ಯಾಟಿಂಗಿಗೆ ಕುದುರಿಕೊಳ್ಳುತ್ತ ಹೋದರು. 40 ಎಸೆತಗಳಲ್ಲಿ ಫಿಫ್ಟಿ ಪೂರ್ತಿಗೊಂಡಿತು. ಡೆತ್‌ ಓವರ್‌ ಆರಂಭದಲ್ಲೇ ಮಾರಿಸ್‌ ದೊಡ್ಡ ಬೇಟೆಯಾಡಿದರು. ಗಿಲ್‌ ಆಟ 56ಕ್ಕೆ ಕೊನೆಗೊಂಡಿತು (44 ಎಸೆತ, 4 ಫೋರ್‌, 2 ಸಿಕ್ಸರ್‌). ತ್ರಿಪಾಠಿ 21 ರನ್‌ ಮಾಡಿದರು. ಮಾರ್ಗನ್‌ ಕೊನೆಯ 3 ಎಸೆತಗಳಲ್ಲಿ 11 ರನ್‌ ಬಾರಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next