ಮುಂಬಯಿ : ಐಪಿಎಲ್‌ನ ನೂತನ ನಾಯಕರಾದ ರಿಷಭ್ ಪಂತ್-ಸಂಜು ಸ್ಯಾಮ್ಸನ್ ತಂಡಗಳ ನಡುವಿನ ಗುರುವಾರದ ಹೋರಾಟಕ್ಕೆ ವಾಂಖೇಡೆ ಸ್ಟೇಡಿಯಂ ಅಣಿಯಾಗಿದೆ. ಆದರೆ ಎರಡೂ ತಂಡಗಳು ಗಂಭೀರ ಸಮಸ್ಯೆಯಿಂದ ಬಳಲುತ್ತಿರುವುದು ಚಿಂತೆಯ ಸಂಗತಿಯಾಗಿದೆ.
ಬಿಗ್ ಹಿಟ್ಟಿಂಗ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೈ ಬೆರಳು ಮುರಿದುಕೊಂಡು ಐಪಿಎಲ್‌ನಿಂದ ಬೇರ್ಪಟ್ಟಿರುವುದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿದ್ದ ದೊಡ್ಡ ಹೊಡೆತ. ಸ್ಯಾಮ್ಸನ್ ಅವರ ಅಬ್ಬರದ ಶತಕದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯವನ್ನು 4 ರನ್ನಿನಿಂದ ಕಳೆದುಕೊಂಡ ರಾಜಸ್ಥಾನ್ ತಂಡಕ್ಕೆ ಇದು ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಧಾನ ವೇಗಿ ಅನ್ರಿಚ್ ನೋರ್ಜೆ ಅವರಿಗೆ ಕೊರೊನಾ ಸೋಂಕು ಆವರಿಸಿದೆ. ಹೀಗಾಗಿ ಅವರು ಇನ್ನೂ ಕೆಲವು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ. ಇದು ಡೆಲ್ಲಿ ತಂಡಕ್ಕೆ ಹೊಡೆತವೆಂಬುದರಲ್ಲಿ ಅನುಮಾನವಿಲ್ಲ. ಆದರೆ ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ತನ್ನ ಮೊದಲ ಪಂದ್ಯದಲ್ಲಿ ನೋರ್ಜೆ ಗೈರಲ್ಲೇ ಚೆನ್ನೈಗೆ ಸೋಲುಣಿಸಿದ ಉತ್ಸಾಹದಲ್ಲಿದೆ.
ಚೆನ್ನೈ ವಿರುದ್ಧ ಡೆಲ್ಲಿ ಬ್ಯಾಟಿಂಗ್ ಬಲದಿಂದ ಗೆದ್ದು ಬಂದಿತ್ತು. 189 ರನ್ ಚೇಸ್ ಮಾಡುವ ವೇಳೆ ಶಿಖರ್ ಧವನ್-ಪೃಥ್ವಿ ಶಾ ಸಿಡಿದು ನಿಂತು 138 ರನ್ ಜತೆಯಾಟ ನಿಭಾಯಿಸಿದ್ದರು. ಹೀಗಾಗಿ ಇಲ್ಲಿ ಉಳಿದವರಿಗೆ ಹೆಚ್ಚಿನ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಪಂತ್ ಜತೆಗೆ ರಹಾನೆ, ಸ್ಟೋಯಿನಿಸ್ ಅವರ ಬ್ಯಾಟಿಂಗ್ ಫಾರ್ಮ್ ಹೇಗಿದೆ ಎಂಬುದು ಅರಿಯಬೇಕಿದೆ.
ನೋರ್ಜೆ-ರಬಾಡ ಗೈರಲ್ಲಿ ಕ್ರಿಸ್ ವೋಕ್ಸ್, ಆವೇಶ್ ಖಾನ್ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಡು ಪ್ಲೆಸಿಸ್ ಮತ್ತು ಧೋನಿ ಅವರನ್ನು ಶೂನ್ಯಕ್ಕೆ ವಾಪಸ್ ಕಳುಹಿಸಿದ್ದು ಆವೇಶ್ ಖಾನ್ ಸಾಹಸವಾಗಿತ್ತು. ಆದರೆ ಅಶ್ವಿನ್, ಟಾಮ್ ಕರನ್ ದುಬಾರಿಯಾಗಿದ್ದರು. ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ರಾಜಸ್ಥಾನ್‌ಗೆ ಕಡಿವಾಣ ಹಾಕಬೇಕಾದರೆ ಡೆಲ್ಲಿಯ ಬೌಲರ್ ಮಿಂಚಬೇಕಾದುದು ಅನಿವಾರ್ಯ.
ಬೌಲಿಂಗ್ ದುರ್ಬಲ
ರಾಜಸ್ಥಾನ್ ಕೂಡ ಬ್ಯಾಟಿಂಗ್ ಬಲವನ್ನೇ ನೆಚ್ಚಿಕೊಂಡಿದೆ. ಐಪಿಎಲ್ ನಾಯಕತ್ವದ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆ ಸ್ಥಾಪಿಸಿರುವ ಸಂಜು ಸ್ಯಾಮ್ಸನ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ. ಬಟ್ಲರ್, ದುಬೆ, ವೋಹ್ರಾ, ಪರಾಗ್, ತೇವಟಿಯಾ ಮಾರಿಸ್ ಕೂಡ ದೊಡ್ಡ ಮೊತ್ತಕ್ಕೆ ನೆರವು ನೀಡಬೇಕಿದೆ.
ಬೌಲಿಂಗ್‌ನಲ್ಲಿ ಚೇತನ್ ಸಕಾರಿಯಾ ಹೊರತುಪಡಿಸಿ ಉಳಿದವರೆಲ್ಲ ದುಬಾರಿ ಯಾಗಿದ್ದರು. ಒಟ್ಟು 8 ಮಂದಿಯನ್ನು ದಾಳಿಗಿಳಿ ಸಿದರೂ ಪಂಜಾಬ್‌ಗ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆಯನ್ನು ರಾಜಸ್ಥಾನ್ ಹೋಗಲಾಡಿಸಿಕೊಳ್ಳಬೇಕಿದೆ.