ಶಾರ್ಜಾ: ಟೇಬಲ್ ಟಾಪರ್ ಚೆನ್ನೈ 9ನೇ ಜಯದೊಂದಿಗೆ 2021ನೇ ಸಾಲಿನ ಪ್ಲೇ ಆಫ್ ಸುತ್ತು ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಗುರುವಾರದ ಮುಖಾಮುಖಿಯಲ್ಲಿ ಧೋನಿ ಪಡೆಯೆದುರು 6 ವಿಕೆಟ್ ಸೋಲನುಭವಿಸಿದ ಹೈದರಾಬಾದ್ ಕೂಟದಿಂದ ಹೊರಬಿತ್ತು.
ಇದು ಅಗ್ರಸ್ಥಾನಿ ಮತ್ತು ಅಂತಿಮ ಸ್ಥಾನದಲ್ಲಿರುವ ತಂಡದ ನಡುವಿನ ಸ್ಪರ್ಧೆ ಆಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 7 ವಿಕೆಟಿಗೆ ಕೇವಲ 134 ರನ್ ಗಳಿಸಿದರೆ, ಚೆನ್ನೈ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಬಾರಿಸಿ ವಿಜಯಿಯಾಯಿತು.
ಚೇಸಿಂಗ್ ವೇಳೆ ಗಾಯಕ್ವಾಡ್ (45) ಮತ್ತು ಡು ಪ್ಲೆಸಿಸ್ (41) ಉತ್ತಮ ಆರಂಭವಿತ್ತರು. 10.1 ಓವರ್‌ಗಳಿಂದ 75 ರನ್ ಪೇರಿಸಿದರು. ಆದರೆ ಅನಂತರ ಸತತ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿದ ಚೆನ್ನೈ ತುಸು ಒತ್ತಡಕ್ಕೆ ಸಿಲುಕಿತಾದರೂ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಯಿತು. ನಾಯಕ ಧೋನಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಆರಂಭಕಾರ ವೃದ್ಧಿಮಾನ್ ಸಾಹಾ ಕ್ರೀಸ್ ಆಕ್ರಮಿಸಿಕೊಂಡು ಹೈದರಾಬಾದ್ ಇನ್ನಿಂಗ್ಸ್ ಬೆಳೆಸುವ ಪ್ರಯತ್ನವನ್ನು ಜಾರಿಯಲ್ಲಿರಿಸಿದರು. 13ನೇ ಓವರ್ ತನಕ ಇವರ ಬ್ಯಾಟಿಂಗ್ ಮುಂದುವರಿಯಿತು. ಆದರೆ ಶಾರ್ಜಾದ ನಿಧಾನ ಗತಿಯ ಟ್ರಾÂಕ್ ಮೇಲೆ ಬಿರುಸಿನ ಆಟವಾಡಲು ಅವರಿಂದ ಸಾಧ್ಯವಾಗಲಿಲ್ಲ. 46 ಎಸೆತಗಳಿಂದ 44 ರನ್ ಬಾರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಕೇವಲ ಒಂದು ಫೋರ್ ಹಾಗೂ ದೀಪಕ್ ಚಹರ್ ಅವರ ಒಂದೇ ಓವರ್‌ನಲ್ಲಿ ಸಿಡಿಸಿದ 2 ಸಿಕ್ಸರ್ ಇದರಲ್ಲಿ ಸೇರಿತ್ತು.
ಕಳೆದ ಪಂದ್ಯದಲ್ಲಿ ಸಿಡಿದು ನಿಂತಿದ್ದ ಇಂಗ್ಲೆಂಡ್ ಆರಂಭಕಾರ ಜಾಸನ್ ರಾಯ್ 7 ಎಸೆತಗಳಿಂದ ಕೇವಲ 2 ರನ್ ಮಾಡಿ ಹ್ಯಾಝಲ್‌ವುಡ್ ಎಸೆತವನ್ನು ಧೋನಿ ಕೈಗಿತ್ತು ವಾಪಸಾದರು. ಎಸೆತಕ್ಕೊಂದರಂತೆ 11 ರನ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಡ್ವೇನ್ ಬ್ರಾವೊ ತಮ್ಮ ಮೊದಲ ಓವರ್‌ನಲ್ಲೇ ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ರಾಯ್ ಮತ್ತು ವಿಲಿಯಮ್ಸನ್ ವೈಫಲ್ಯ ಎನ್ನುವುದು ಹೈದರಾಬಾದ್‌ಗೆ ದುಬಾರಿಯಾಗಿ ಪರಿಣಮಿಸಿತು.
ಪ್ರಿಯಂ ಗರ್ಗ್ ವಿಕೆಟ್ ಕೂಡ ಬ್ರಾವೊ ಪಾಲಾಯಿತು. ಗರ್ಗ್ ಗಳಿಕೆ ಕೇವಲ 7 ರನ್. ಸ್ಯಾಮ್ ಕರನ್ ಸ್ಥಾನವನ್ನು ಮರಳಿ ಬ್ರಾವೊ ಭರ್ತಿಗೊಳಿಸಿದ್ದರು.
ಅಭಿಷೇಕ್ ಶರ್ಮ-ಅಬ್ದುಲ್ ಸಮದ್ ಜತೆಗೂಡಿದ ಬಳಿಕ ರನ್‌ಗತಿಯಲ್ಲಿ ತುಸು ಪ್ರಗತಿ ಕಂಡುಬಂತಾದರೂ ಇಬ್ಬರೂ 18 ರನ್ ಮಾಡಿ ಹ್ಯಾಝಲ್‌ವುಡ್ ಅವರ ಒಂದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ವಾಪಸಾದರು. 110ಕ್ಕೆ 6 ವಿಕೆಟ್ ಬಿತ್ತು. ಬಿಗ್ ಹಿಟ್ಟರ್ ಜಾಸನ್ ಹೋಲ್ಡರ್ (5) ಕೂಡ ವಿಫಲರಾದರು.
ಡೆತ್ ಓವರ್‌ಗಳಲ್ಲಿ ಚೆನ್ನೈ ಬೌಲರ್ ಅಮೋಘ ಹಿಡಿತ ಸಾಧಿಸಿದರು. ಈ ಅವಧಿಯಲ್ಲಿ ಸನ್‌ರೈಸರ್ಗೆ ಗಳಿಸಲು ಸಾಧ್ಯವಾದದ್ದು 37 ರನ್ ಮಾತ್ರ.
24 ರನ್ನಿಗೆ 3 ವಿಕೆಟ್ ಕಿತ್ತ ಹ್ಯಾಝಲ್‌ವುಡ್ ಚೆನ್ನೈನ ಯಶಸ್ವಿ ಬೌಲರ್ ಎನಿಸಿದರು. ಬ್ರಾವೊ 17 ರನ್ನಿತ್ತು 2 ವಿಕೆಟ್ ಹಾರಿಸಿದರು.