ಹೊಸದಿಲ್ಲಿ: ಮುಂದಿನ ಐಪಿಎಲ್ ಪಂದ್ಯಾ ವಳಿಯನ್ನು ಭಾರತದಲ್ಲೇ ನಡೆಸುವುದು ಬಿಸಿಸಿಐ ಯೋಜನೆ. ಕೊರೊನಾದಿಂದಾಗಿ ಇಡೀ ಕೂಟವನ್ನು ಗರಿಷ್ಠ ಸ್ಟೇಡಿಯಂಗಳಿರುವ ನಗರವೊಂದರಲ್ಲೇ ನಡೆಸುವ ಯೋಜನೆಯೂ ಇತ್ತು. ಇದಕ್ಕೆ ಮುಂಬಯಿಯನ್ನೂ ಆರಿಸ ಲಾಗಿತ್ತು. ಆದರೀಗ ಮುಂಬಯಿ ಮಹಾನಗರಿಯಲ್ಲಿ ಕೋವಿಡ್-19 ಮತ್ತೆ ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶದ ಇನ್ನಿತರ 4-5 ಕೇಂದ್ರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ.
“ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳಿದೆ. ಆದರೆ ಅಷ್ಟರೊಳಗೆ ಕೆಲವು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಅದರಂತೆ, ಮುಂಬಯಿಯೊಂದರಲ್ಲೇ ಎಲ್ಲ ಲೀಗ್ ಪಂದ್ಯ ಗಳನ್ನು ನಡೆಸುವುದು ಈಗಿನ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಇಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
“ಹೈದರಾಬಾದ್, ಬೆಂಗಳೂರು, ಕೋಲ್ಕತಾ ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಮುಂದೆ ಬಂದಿವೆ. ಅಹ್ಮದಾಬಾದ್‌ನಲ್ಲಿ ಪ್ಲೇ-ಆಫ್ ಮತ್ತು ಫೈನಲ್ ನಡೆಯುವುದು ಬಹುತೇಖ ಖಚಿತ’ ಎಂದು ಅವರು ಹೇಳಿದರು.
ಮುಂಬಯಿ ಪ್ರಶಸ್ತವಾಗಿತ್ತು… :
ಜೈವಿಕ ಸುರಕ್ಷಾ ವಲಯದಲ್ಲಿ ಐಪಿಎಲ್ ಪಂದ್ಯ ಗಳನ್ನು ನಡೆಸಬೇಕಾದುದು ಅನಿವಾರ್ಯ. ಹಾಗೆಯೇ ಆಟಗಾರರ ಪ್ರಯಾಣವನ್ನು ಕಡಿಮೆಗೊಳಿಸಬೇಕಾದ ಅಗತ್ಯವೂ ಇದೆ. ಹೀಗಾಗಿ ಮುಂಬಯಿಯಲ್ಲೇ ಎಲ್ಲ ಲೀಗ್ ಪಂದ್ಯಗಳನ್ನು ಆಡಿಸುವ ಯೋಜನೆ ಬಿಸಿಸಿಐ ಮುಂದಿತ್ತು. ಇಲ್ಲಿ ವಾಂಖೇಡೆ, ಬ್ರೆಬೋರ್ನ್, ಡಿ.ವೈ. ಪಾಟೀಲ್ ಮತ್ತು ರಿಲಯನ್ಸ್ ಸ್ಟೇಡಿಯಂಗಳಿವೆ. ಹೀಗಾಗಿ ಐಪಿಎಲ್ ಆಯೋಜನೆಗೆ ಮುಂಬಯಿ ಸೂಕ್ತ ಕೇಂದ್ರವಾಗುತ್ತಿತ್ತು. ಇದಕ್ಕೀಗ ಕೊರೊನಾ ಅಡ್ಡಿಯಾಗಿ ಪರಿಣಮಿಸಿದೆ. 14ನೇ ಐಪಿಎಲ್ ಪಂದ್ಯಾವಳಿ ಎಪ್ರಿಲ್ 2ನೇ ವಾರದಿಂದ ಆರಂಭವಾಗುವ ಸಾಧ್ಯತೆ ಇದೆ.