Advertisement

ಪಂಜಾಬ್‌ ಬಲ ಹೆಚ್ಚಿಸಿದ ಗೇಲ್‌ ಆಗಮನ

11:50 PM Oct 14, 2020 | mahesh |

ಶಾರ್ಜಾ: ತಂಡಕ್ಕೆ ಮರಳುತ್ತಿರುವ ಸ್ಫೋಟಕ ಖ್ಯಾತಿಯ ಕ್ರಿಸ್‌ ಗೇಲ್‌ ಅವರಿಂದ ಭರ್ಜರಿ ಆಟವನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಿರೀಕ್ಷಿಸುತ್ತಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಪಂಜಾಬ್‌ ತಂಡವು ಗುರುವಾರದ ಮಹತ್ವದ ಪಂದ್ಯದಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ.

Advertisement

ಸರ್ವಾಂಗೀಣ ಆಟವನ್ನು ಪ್ರದರ್ಶಿಸಲು ವಿಫ‌ಲವಾಗುತ್ತಿರುವ ಪಂಜಾಬ್‌ ತಂಡವು ಕೆಲವೊಂದು ನಿಕಟ ಪಂದ್ಯಗಳಲ್ಲಿಯೂ ಎಡವಿ ಸೋಲುತ್ತಿದೆ. ಇಷ್ಟರವರೆಗೆ ಆಡಿದ ಏಳು ಪಂದ್ಯಗಳಲ್ಲಿ ಕೇವಲ ಒಮ್ಮೆ ಗೆಲುವಿನ ರುಚಿ ಕಂಡಿರುವ ಪಂಜಾಬ್‌ಗ ಮುಂದಿನ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ. ಸದ್ಯ ಪಂಜಾಬ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆರ್‌ಸಿಬಿ ವಿರುದ್ಧವೇ ತಂಡ ಗೆದ್ದಿರುವುದು ಪಂಜಾಬ್‌ಗ ಸಮಾಧಾನಪಡುವ ವಿಷಯವಾಗಿದೆ. ಆದರೆ ಪಂಜಾಬ್‌ ವಿರುದ್ಧ ಸೋತ ಬಳಿಕ ಆರ್‌ಸಿಬಿ ಅಮೋಘ ನಿರ್ವಹಣೆ ನೀಡುತ್ತ ಬಂದಿದ್ದು ಪ್ರಚಂಡ ಫಾರ್ಮ್ನಲ್ಲಿದೆ. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿಯೂ ಆರ್‌ಸಿಬಿ ಬಲಿಷ್ಠವಾಗಿದೆ.

ಸಿಕ್ಸರ್‌ ಬಾರಿಸಲು ಸುಲಭ
ಪಂದ್ಯ ಸಾಗುತ್ತಿದ್ದಂತೆ ಶಾರ್ಜಾದ ಪಿಚ್‌ ನಿಧಾನವಾಗುತ್ತ ಹೋಗುತ್ತಿದೆ. ಇದರಿಂದ ಗುರಿ ಬೆನ್ನಟ್ಟುವ ತಂಡ ರನ್‌ ಗಳಿಸಲು ಒದ್ದಾಡಿ ಒತ್ತಡಕ್ಕೆ ಬೀಳುವ ಸಾಧ್ಯತೆಯಿದೆ. ಆದರೆ ಇಲ್ಲಿನ ಮೈದಾನ ಚಿಕ್ಕದಾಗಿರುವ ಕಾರಣ ಹೊಡೆಬಡಿಯ ಆಟಗಾರರಿಗೆ ಸಿಕ್ಸರ್‌ ಬಾರಿಸಲು ಸುಲಭ ಸಾಧ್ಯ. ಗೇಲ್‌ ಇಲ್ಲಿ ಏನಾದರೂ ಮಿಂಚು ಹರಿಸಿದರೆ ಸಿಕ್ಸರ್‌ಗಳ ಸುರಿಮಳೆಯನ್ನೇ ಕಾಣಬಹುದು. ಆದರೆ 41ರ ಹರೆಯದ ಗೇಲ್‌ ಈ ಕೂಟದಲ್ಲಿ ಮೊದಲ ಬಾರಿ ಆಡುತ್ತಿರುವ ಕಾರಣ ಎಚ್ಚರಿಕೆಯಿಂದ ಆಡಬೇಕಾದ ಅನಿವಾರ್ಯತೆಯಿದೆ.

ಗೇಲ್‌ ಈ ಹಿಂದಿನ ಎರಡು ಪಂದ್ಯಗಳಲ್ಲಿ ಆಡಬೇಕಿತ್ತು. ಆದರೆ ವಿಷಾಹಾರ ಸೇವಿಸಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವ ಅವರಿಂದ ಬ್ಯಾಟಿಂಗ್‌ ವೈಭವವನ್ನು ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅವರಿಗಾಗಿ ಯಾರನ್ನು ಕೈಬಿಡುತ್ತಾರೆ ಎನ್ನುವುದು ಕುತೂಹಲದ ವಿಷಯವಾಗಿದೆ. ಇನ್ನೂ ಸಿಡಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಕೈಬಿಡುವುದು ಒಂದು ಆಯ್ಕೆಯಾಗಿದೆ ಎನ್ನಲಾಗಿದೆ. ಅಥವಾ ವಿದೇಶಿ ಬೌಲರೊಬ್ಬರನ್ನು ಹೊರಗಿಟ್ಟು ಗೇಲ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಇನ್ನೊಂದು ಆಯ್ಕೆಯಾಗಿದೆ.

Advertisement

ತಂಡದಲ್ಲಿ ಇಬ್ಬರು ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌
ಮನ್‌ (ರಾಹುಲ್‌ 367 ಮತ್ತು ಮಯಾಂಕ್‌ ಅಗರ್ವಾಲ್‌ 337) ಗಳಿದ್ದರೂ ಪಂಜಾಬ್‌ ಗೆಲ್ಲುತ್ತಿಲ್ಲ. ಸತತ ಸೋಲುಗಳಿಂದ ತಂಡ ಕೊನೆಯ ಸ್ಥಾನಕ್ಕೆ ಜಾರಿದೆ. ಮೊಹಮ್ಮದ್‌ ಶಮಿ ಮತ್ತು ರವಿ ಬಿಷ್ಣೋಯಿ ಅವರನ್ನು ಹೊರತುಪಡಿಸಿ ಪಂಜಾಬ್‌ ತಂಡದ ಇನ್ನುಳಿದ ಯಾವುದೇ ಬೌಲರ್‌ಗಳು ಗಮನಾರ್ಹ ನಿರ್ವಹಣೆ ನೀಡಿಲ್ಲ.

ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಆರ್‌ಸಿಬಿ ಬಲಿಷ್ಠ
ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಆರ್‌ಸಿಬಿ ಬಲಿಷ್ಠವಾಗುತ್ತ ಹೋಗಿದೆ. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಿ ಗೆಲ್ಲುತ್ತಿದೆ. ಆರಂಭಿಕ ದೇವದತ್ತ ಪಡಿಕ್ಕಲ್‌, ನಾಯಕ ಕೊಹ್ಲಿ, ಎಬಿ ಡಿ’ವಿಲಿಯರ್, ಆರನ್‌ ಫಿಂಚ್‌ ಅಮೋಘ ಫಾರ್ಮ್ನಲ್ಲಿದ್ದರೆ ಬೌಲಿಂಗ್‌ನಲ್ಲಿ ವಾಷಿಂಗ್ಟನ್‌ ಸುಂದರ್‌, ಯುಜುವೇಂದ್ರ ಚಹಲ್‌ ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದಾರೆ. ಕ್ರಿಸ್‌ ಮಾರಿಸ್‌ ಗಾಯದಿಂದ ಮರಳಿದ್ದು ತಂಡದ ಬ್ಯಾಟಿಂಗ್‌ ಬಲವನ್ನು ಹೆಚ್ಚಿಸಿದೆ.

ಆರ್‌ಸಿಬಿ ಇದೇ ಮೈದಾನದಲ್ಲಿ ಕೆಕೆಆರ್‌ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಆಡಿತ್ತು. ಹೀಗಾಗಿ ಇಲ್ಲಿನ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ತಂಡದ ಆಟಗಾರರಿಗೆ ಅರಿತಿದ್ದಾರೆ. ಹೀಗಾಗಿ ಪಂಚಾಬ್‌ಗಿಂತ ಬಹಳಷ್ಟು ಎಚ್ಚರಿಕೆಯಿಂದ ಆರ್‌ಸಿಬಿ ಈ ಪಂದ್ಯವನ್ನು ನಿಭಾಯಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next