Advertisement

ಓವರ್‌ ಟು ಯುಎಇ IPL‌ ಶೋ ಆರಂಭ

10:03 PM Sep 18, 2020 | mahesh |

 ಕೋವಿಡ್‌ ಕಾಲದಲ್ಲೊಂದು ಭರಪೂರ ಕ್ರಿಕೆಟ್‌ ರಂಜನೆ ಅರಬ್‌ ನಾಡಿನಲ್ಲಿ ಇಂದಿನಿಂದ ಐಪಿಎಲ್‌ ಶೋ
 ಕ್ರಿಕೆಟ್‌ ಅಭಿಮಾನಿಗಳ ಕಾತರಕ್ಕೆ ತೆರೆ
 ವೀಕ್ಷಕರ ನಿರ್ಬಂಧದ ನಡುವೆ ಖಾಲಿ ಸ್ಟೇಡಿಯಂಗಳಲ್ಲಿ ಸಮರ

Advertisement

ಅಬುಧಾಬಿ: ಐಪಿಎಲ್‌ ಇಲ್ಲದೆ 2020ನೇ ವರ್ಷ ಉರುಳದು ಎಂಬ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾತು ಶನಿವಾರದಿಂದ ಸಾಕಾರಗೊಳ್ಳಲಿದೆ. ವಿಶ್ವಕಪ್‌ ಪಂದ್ಯಾವಳಿಯನ್ನಾದರೂ ಬಿಟ್ಟಿರಬಲ್ಲೆವು, ಆದರೆ ಐಪಿಎಲ್‌ ಇಲ್ಲದೇ ಇರಲಾಗದು ಎಂಬ ಮನಸ್ಥಿತಿಯಲ್ಲಿದ್ದ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಮುಂದಿನ 53 ದಿನಗಳ ಕಾಲ ಚುಟುಕು ಕ್ರಿಕೆಟಿನ ರೋಮಾಂಚನ, ರಸದೌತಣ. ಕೋವಿಡ್‌ ಕಾಲದಲ್ಲೊಂದು ಭರಪೂರ ಕ್ರಿಕೆಟ್‌ ರಂಜನೆ!

ಐಪಿಎಲ್‌ ಆಲರ್ಷಣೆಯೇ ಅಂಥದ್ದು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಬೆನ್ನಲ್ಲೇ ಕ್ರಿಕೆಟ್‌ ಜಗತ್ತಿನಲ್ಲಿ ಅದೆಷ್ಟೇ ಕ್ರಿಕೆಟ್‌ ಲೀಗ್‌ಗಳು ಹುಟ್ಟಿಕೊಂಡರೂ ಯಾವುದೂ ಈ “ಕ್ಯಾಶ್‌ ರಿಚ್‌ ಟೂರ್ನಿ’ಗೆ ಈ ವರೆಗೆ ಸಾಟಿಯಾಗಿಲ್ಲ. ಇಲ್ಲಿ ಅದೆಷ್ಟೋ ವಿವಾದಗಳು, ಹಗರಣಗಳು ಹುಟ್ಟಿಕೊಂಡರೂ ಐಪಿಎಲ್‌ ಜನಪ್ರಿಯತೆ ಸ್ವಲ್ಪವೂ ಕುಗ್ಗಿಲ್ಲ. ಇದನ್ನು ವೀಕ್ಷಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಹಾಗೆಯೇ ಆದಾಯ ಕೂಡ.

ವಿಶ್ವದ ಈ ಶ್ರೀಮಂತ ಕ್ರಿಕೆಟ್‌ ಲೀಗ್‌ ಈ ಬಾರಿ ಕೋವಿಡ್‌ಗೆ ಸಡ್ಡು ಹೊಡೆದು ನಿಂತಿದೆ. ಕೋವಿಡ್ ಕಾರಣದಿಂದಾಗಿಯೇ ಭಾರತ ಬಿಟ್ಟು ದೂರದ ಅರಬ್‌ ನಾಡಿನತ್ತ ಮುಖ ಮಾಡಿದೆ. ಜಗತ್ತಿನ ಯಾವ ಮೂಲೆಯಾದರೂ ಆದೀತು, ಐಪಿಎಲ್‌ ನಡೆದರೆ ಸಾಕು ಎಂದು ಕಾದು ಕುಳಿತವರಿಗೆ ಇಲ್ಲಿನ ಯಾವ ನಿಬಂಧನೆಗಳೂ ಕಿರಿಕಿರಿ ಮಾಡುವುದಿಲ್ಲ!

ಪ್ರೇಕ್ಷಕರಿಲ್ಲದೆ ಜೋಶ್‌ ಬಂದೀತೇ?
ಹೊಡಿಬಡಿ ಕ್ರಿಕೆಟ್‌ ಕದನಕ್ಕೆ ಇಳಿದವರಿಗೆ ಜೋಶ್‌ ತುಂಬಿಸುವವರೇ ಪ್ರೇಕ್ಷಕರು. ಇವರ ಭೋರ್ಗರೆತದ ನಡುವೆ ಆಟಗಾರರ ಉತ್ಸಾಹ ಉಕ್ಕಿ ಹರಿಯುತ್ತದೆ. ಆದರೆ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯಗಳಿಗೆ ಖಾಲಿ ಸ್ಟೇಡಿಯಂಗಳು ಸಾಕ್ಷಿಯಾಗಬೇಕಿದೆ. ಕ್ರಿಕೆಟ್‌ ಅಭಿಮಾನಿಗಳೇನೋ ಟಿವಿ ಮುಂದೆ ಕುಳಿತು ಕಣ್ತುಂಬಿಸಿಕೊಳ್ಳುತ್ತಾರೆ. ಆದರೆ ಆಟಗಾರರಿಗೆ ಉತ್ಸಾಹ ಎಲ್ಲಿಯದು ಎಂಬುದೇ ದೊಡ್ಡ ಪ್ರಶ್ನೆ. ಕ್ರಿಕೆಟಿಗರು ಈ ಸವಾಲನ್ನು ಗೆದ್ದರೆಂದರೆ ಅಲ್ಲಿಗೆ ಐಪಿಎಲ್‌ ಯಶಸ್ವಿಯಾದಂತೆ. ಬೌಂಡರಿ, ಸಿಕ್ಸರ್‌, ವಿಕೆಟ್‌ ಬಿದ್ದಾಗ ಬಳುಕುತ್ತ, ಮೈಮಾಟ ಪ್ರದರ್ಶಿಸುತ್ತ ನರ್ತಿಸುವ ಚಿಯರ್‌ ಲೀಡರ್ ಕೂಡ ಈ ಐಪಿಎಲ್‌ನಿಂದ ದೂರ ಉಳಿಯಲಿದ್ದಾರೆ. ಆದರೆ ಇದರಿಂದ ಪಂದ್ಯಾವಳಿಯ ಮೇಲೆ ಯಾವುದೇ ರೀತಿಯ ಪರಿಣಾಮ ಆಗದು.

Advertisement

ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ…
ಸಾಮಾನ್ಯವಾಗಿ ಟಿ20 ಲೀಗ್‌ ಅಂದರೆ ಅದು ಮೋಜು, ಮಸ್ತಿ, ಗಮ್ಮತ್ತಿನ ಅಖಾಡ. ಆದರೆ ಈ ಬಾರಿಯ ಐಪಿಎಲ್‌ ಕೂಟವನ್ನು ಆಟಗಾರರು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಕಾರಣ, ಕೊರೊನಾ. ಒಂದು ಹೆಜ್ಜೆ ಜಾರಿದರೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.

ಜೈವಿಕ ಸುರಕ್ಷಾ ವಲಯದಲ್ಲಿದ್ದರೂ ಕೂಟದುದ್ದಕ್ಕೂ ಕ್ರಿಕೆಟಿಗರು, ಸಹಾಯಕ ಸಿಬಂದಿಯೆಲ್ಲ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳುತ್ತ ಇರಬೇಕು. ಅಕಸ್ಮಾತ್‌ ಪಾಸಿಟಿವ್‌ ಕಂಡುಬಂದರೆ ಇದರ ಪರಿಣಾಮ ಗಂಭೀರವಾದೀತು. ಯಾವುದೇ ಸಂಕಟವಿಲ್ಲದೆ ಕೂಟ ಮುಗಿದರೆ ಕೋವಿಡ್‌ ಮೇಲೆ ಕ್ರಿಕೆಟ್‌ ಸವಾರಿ ಮಾಡಿದಂತೆ!

ಎಲ್ಲ ತಂಡಗಳೂ ಫೇವರಿಟ್‌!
ಈ ಸಲ ಚಾಂಪಿಯನ್‌ ಯಾರಾಗಬಹುದು ಎಂಬ ಚರ್ಚೆ ಹೆಚ್ಚು ಕಾವೇರಿದಂತಿಲ್ಲ. ಯಾರು ಬೇಕಾದರೂ ಕಪ್‌ ಎತ್ತಲಿ, ಪಂದ್ಯಾವಳಿ ನಡೆದರೆ ಸಾಕು ಎಂಬುದಷ್ಟೇ ಅಭಿಮಾನಿಗಳ ಬಯಕೆ ಆಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಈ ಸಲ ಎಲ್ಲ ತಂಡಗಳೂ ಫೇವರಿಟ್‌! ಈವರೆಗೆ ಚಾಂಪಿಯನ್‌ ಆಗದ ಆರ್‌ಸಿಬಿ, ಪಂಜಾಬ್‌ ಅಥವಾ ಡೆಲ್ಲಿ ಇತಿಹಾಸ ನಿರ್ಮಿಸಬಹುದೇ ಎಂಬುದು ಈ ತಂಡದ ಅಭಿಮಾನಿಗಳ ಕಾತರ. ಆದರೆ ಕೊನೆಯಲ್ಲಿ ನಾನಾ ಲೆಕ್ಕಾಚಾರಗಳು ಮೇಲುಗೈ ಸಾಧಿಸುತ್ತವೆ. ಅನಿರೀಕ್ಷಿತ ಫ‌ಲಿತಾಂಶವೊಂದು ದಾಖಲಾಗುತ್ತದೆ. ಇದೇ ಐಪಿಎಲ್‌ ಮಹಿಮೆ!

Advertisement

Udayavani is now on Telegram. Click here to join our channel and stay updated with the latest news.

Next