Advertisement

ಧೋನಿ –ಸ್ಮಿತ್‌ ತಂಡಗಳ ಮೇಲಾಟ

09:33 PM Sep 21, 2020 | mahesh |

ಶಾರ್ಜಾ: ಯುಎಇಯ ತೃತೀಯ ಕ್ರೀಡಾಂಗಣವಾದ “ಶಾರ್ಜಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ ಮಂಗಳವಾರ ಐಪಿಎಲ್‌ಗೆ ತೆರೆದುಕೊಳ್ಳಲಿದೆ. ಈಗಾಗಲೇ ಉದ್ಘಾಟನಾ ಪಂದ್ಯವನ್ನು ಗೆದ್ದ ಖುಷಿಯಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಸ್ಟೀವನ್‌ ಸ್ಮಿತ್‌ ನೇತೃತ್ವದ ರಾಜಸ್ಥಾನ್‌ ರಾಯಲ್ಸ್‌ ಇಲ್ಲಿ ಮುಖಾಮುಖೀಯಾಗಲಿವೆ.

Advertisement

ಮೇಲ್ನೋಟಕ್ಕೆ ಚೆನ್ನೈ ಈ ಪಂದ್ಯದ ನೆಚ್ಚಿನ ತಂಡ. ಶನಿವಾರದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈಯನ್ನು ಮಣಿಸುವ ಮೂಲಕ ಧೋನಿ ಪಡೆ ಶುಭಾರಂಭ ಮಾಡಿದೆ. ಕಳೆದ ವರ್ಷದ ಫೈನಲ್‌ ಸೋಲಿಗೆ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ. ಯುವ ಪಡೆಯನ್ನೂ ನಾಚಿಸುವ ಸಾಮರ್ಥ್ಯ ತಮ್ಮದು ಎಂಬುದನ್ನು ಈ ಹಿರಿಯರ ಬಳಗ ಪ್ರಸಕ್ತ ಋತುವಿನಲ್ಲೂ ಸಾಬೀತುಪಡಿಸುವ ಸೂಚನೆಯೊಂದನ್ನು ರವಾನಿಸಿದೆ.

ಆದರೆ ನೆಚ್ಚಿನ ತಂಡವೇ ಗೆಲ್ಲಬೇಕಿಲ್ಲ, ಚುಟಕು ಕ್ರಿಕೆಟ್‌ನಲ್ಲಿ ಫ‌ಲಿತಾಂಶ ಉಲ್ಟಾ ಹೊಡೆಯುವ ಎಲ್ಲ ಸಾಧ್ಯತೆ ಇದೆ ಎಂಬುದನ್ನು ರವಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ತೋರಿಸಿ ಕೊಟ್ಟಿದೆ. ಹೀಗಾಗಿ ರಾಜಸ್ಥಾನ್‌ ತಂಡವನ್ನು ಲಘುವಾಗಿ ಪರಿಗಣಿಸಿದರೆ ಅದು ಚೆನ್ನೈಗೆ ಅಪಾಯ ತಂದೊಡ್ಡಲೂಬಹುದು.

ವಿದೇಶಿ ಆಟಗಾರರ ಸಮಸ್ಯೆ
ನಿಜ, ರಾಜಸ್ಥಾನ್‌ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಇತ್ತೀಚಿನ ದಿನಗಳಲ್ಲಿ ಪೂರ್ತಿ ಫಿಟ್‌ನೆಸ್‌ ಹೊಂದಿಲ್ಲ. ಅಲ್ಲದೆ ಸ್ಟಾರ್‌ ಆಟಗಾರ ಬೆನ್‌ ಸ್ಟೋಕ್ಸ್‌ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಮತ್ತೋರ್ವ ಪ್ರಮುಖ ಆಟಗಾರ ಜಾಸ್‌ ಬಟ್ಲರ್‌ ಆಗಮಿಸಿದರೂ ಅವರ ಕ್ವಾರಂಟೈನ್‌ ಅವಧಿ ಮುಗಿದಿಲ್ಲ. ಈ ಮೂರು ವಿದೇಶಿ ಕ್ರಿಕೆಟಿಗರ ಸಮಸ್ಯೆಗಳನ್ನು ನಿಭಾಯಿಸುವುದರ ಮೇಲೆ ರಾಜಸ್ಥಾನ್‌ ಯಶಸ್ಸು ಅಡಗಿದೆ.
ಉಳಿದಂತೆ ಫಾರಿನ್‌ ಕ್ರಿಕೆಟಿಗರ ಯಾದಿಯಲ್ಲಿ ಗೋಚರಿಸುವ ಪ್ರಮುಖರೆಂದರೆ ಆ್ಯಂಡ್ರೂ ಟೈ, ಜೋಫ್ರ ಆರ್ಚರ್‌, ಡೇವಿಡ್‌ ಮಿಲ್ಲರ್‌, ಟಾಮ್‌ ಕರನ್‌ ಮತ್ತು ಒಶೇನ್‌ ಥಾಮಸ್‌. 4 ಮಂದಿ ವಿದೇಶಿಗರ ಆಯ್ಕೆ ತುಸು ಜಟಿಲವಾಗಬಹುದು.

ಉಳಿದಂತೆ ಈ ತಂಡದಲ್ಲಿ ಭಾರತೀಯರದ್ದೇ ಪ್ರಾಬಲ್ಯ. ಆದರೆ ಕಳೆದ 6 ತಿಂಗಳಿಂದ ಸೂಕ್ತ ಅಭ್ಯಾಸವನ್ನೂ ನಡೆಸದ ಭಾರತದ ಕ್ರಿಕೆಟಿಗರ ಫಾರ್ಮ್ ಮೇಲೆ ಎಷ್ಟರ ಮಟ್ಟಿಗೆ ನಂಬಿಕೆ ಇಡಬಹುದೆಂಬುದೊಂದು ಪ್ರಶ್ನೆ. ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ಜೈದೇವ್‌ ಉನಾದ್ಕತ್‌, ವರುಣ್‌ ಆರೋನ್‌, ಶ್ರೇಯಸ್‌ ಗೋಪಾಲ್‌ ಅವರ ಫಾರ್ಮ್ ನಿರ್ಣಾಯಕ. ಹಾಗೆಯೇ ಯಶಸ್ವಿ ಜೈಸ್ವಾಲ್‌, ಕಾರ್ತಿಕ್‌ ತ್ಯಾಗಿ, ರಿಯಾನ್‌ ಪರಾಗ್‌ ಮೊದಲಾದ ಅಂಡರ್‌-19 ತಂಡದ ಹೀರೋಗಳ ಮೇಲೆ ಎಲ್ಲರೂ ಒಂದು ಕಣ್ಣಿಟ್ಟಿದ್ದಾರೆ.

Advertisement

ಚೆನ್ನೈ ಓಪನಿಂಗ್‌ ವೈಫ‌ಲ್ಯ
ಚೆನ್ನೈ ಮೊದಲ ಪಂದ್ಯವನ್ನು ಗೆದ್ದರೂ ಓಪನಿಂಗ್‌ ಕೈಕೊಟ್ಟಿದೆ. ಮುರಳಿ ವಿಜಯ್‌, ಶೇನ್‌ ವಾಟ್ಸನ್‌ ಒಟ್ಟು ಸೇರಿ ಗಳಿಸಿದ್ದು ಐದೇ ರನ್‌. ಆದರೆ ಅಂಬಾಟಿ ರಾಯುಡು-ಫಾ ಡು ಪ್ಲೆಸಿಸ್‌ ಸಿಡಿದು ನಿಲ್ಲುವ ಮೂಲಕ ಮುಂಬೈಗೆ ನೀರು ಕುಡಿಸಿದರು. ಸ್ಯಾಮ್‌ ಕರನ್‌ ಆಲ್‌ರೌಂಡ್‌ ಶೋ ಮೂಲಕ ಬ್ರಾವೊ ಸ್ಥಾನವನ್ನು ತುಂಬಬಲ್ಲ ಸೂಚನೆ ನೀಡಿದ್ದಾರೆ. ಗೆಲುವಿನ ಲಯದಲ್ಲಿ ಮುಂದುವರಿಯುವುದು ನಮ್ಮ ಯೋಜನೆ ಎಂದಿದ್ದಾರೆ ಧೋನಿ.

 

Advertisement

Udayavani is now on Telegram. Click here to join our channel and stay updated with the latest news.

Next