Advertisement

ಹೈದರಾಬಾದ್‌ ಕಡಿವಾಣ; ಸಿಡಿಯದ ರಾಜಸ್ಥಾನ್‌; SRH ಗೆಲುವಿಗೆ 155ರ ಗುರಿ

12:07 PM Nov 03, 2015 | mahesh |

ದುಬಾೖ: ಸನ್‌ರೈಸರ್ ಹೈದರಾಬಾದ್‌ ಎದುರಿನ ಗುರುವಾರದ ಮಹತ್ವದ ಪಂದ್ಯದಲ್ಲಿ ಸಾಮಾನ್ಯ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿದ ರಾಜಸ್ಥಾನ್‌ ರಾಯಲ್ಸ್‌ 6 ವಿಕೆಟಿಗೆ 154 ರನ್‌ ಒಟ್ಟುಗೂಡಿಸಿದೆ.

Advertisement

ರಾಬಿನ್‌ ಉತ್ತಪ್ಪ-ಬೆನ್‌ ಸ್ಟೋಕ್ಸ್‌ ಜೋಡಿಯಿಂದ ರಾಜಸ್ಥಾನ್‌ ಬಿರುಸಿನ ಆರಂಭವೇನೋ ಲಭಿಸಿತು. ಆದರೆ ಇವರಿಂದ ಇನ್ನಿಂಗ್ಸ್‌ ಬೆಳೆಸಲು ಸಾಧ್ಯವಾಗಲಿಲ್ಲ. 3.3 ಓವರ್‌ಗಳಿಂದ 30 ರನ್‌ ದಾಖಲಾದ ವೇಳೆ ಉತ್ತಪ್ಪ (19) ರನೌಟ್‌ ಆಗಿ ನಿರ್ಗಮಿಸಬೇಕಾಯಿತು. 13 ಎಸೆತ ಎದುರಿಸಿದ ಅವರು 2 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಪವರ್‌ ಪ್ಲೇ ಅವಧಿಯಲ್ಲಿ ರಾಜಸ್ಥಾನ್‌ ಒಂದು ವಿಕೆಟಿಗೆ 47 ರನ್‌ ಮಾಡಿತ್ತು.

ಅನಂತರ ಕ್ರೀಸ್‌ ಇಳಿದ ಸಂಜು ಸ್ಯಾಮ್ಸನ್‌ ಕೂಡ ಬಿರುಸಿನ ಆಟಕ್ಕಿಳಿದರು. ಸ್ಟೋಕ್ಸ್‌ಗಿಂತ ಹೆಚ್ಚು ವೇಗದಲ್ಲಿ ಬ್ಯಾಟ್‌ ಬೀಸತೊಡಗಿದರು. ಅರ್ಧ ಹಾದಿ ಕ್ರಮಿಸುವ ವೇಳೆ ತಂಡದ ಸ್ಕೋರ್‌ ಒಂದಕ್ಕೆ 74 ರನ್‌ ಆಗಿತ್ತು. ಮುಂದಿನ 10 ಓವರ್‌ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಸ್ಯಾಮ್ಸನ್‌ 26 ಎಸೆತಗಳಿಂದ 36 ರನ್‌ ಬಾರಿಸಿದರು (3 ಫೋರ್‌, 1 ಸಿಕ್ಸರ್‌). ಹೋಲ್ಡರ್‌ ಎಸೆತವನ್ನು ಮಿಡ್‌ ವಿಕೆಟ್‌ ಮೇಲಿಂದ ಸಿಕ್ಸರ್‌ಗೆ ಬಡಿದಟ್ಟಿದ ಖುಷಿ ಸ್ಯಾಮ್ಸನ್‌ ಅವರಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ಅವರು ಬೌಲ್ಡ್‌ ಆಗಿ ನಿರ್ಗಮಿಸಿದರು. ಅನಂತರದ ಓವರಿನಲ್ಲಿ ಸ್ಟೋಕ್ಸ್‌ ಕೂಡ ಔಟಾದರು.

ಸ್ಟೋಕ್ಸ್‌-ಸ್ಯಾಮ್ಸನ್‌ ಜೋಡಿ 8.1 ಓವರ್‌ಗಳಿಂದ 56 ರನ್‌ ಒಟ್ಟುಗೂಡಿಸಿತು. ಸ್ಟೋಕ್ಸ್‌ ಮತ್ತೆ ನೈಜ ಆಟವಾಡಲು ವಿಫ‌ಲರಾದರು. 30 ರನ್ನಿಗೆ ಅವರು 32 ಎಸೆತ ಎದುರಿಸಿದರು. ಹೊಡೆದದ್ದು ಕೇವಲ 2 ಬೌಂಡರಿ. ರಶೀದ್‌ ಖಾನ್‌ ಎಸೆತವೊಂದು ಇಂಗ್ಲೆಂಡ್‌ ಸವ್ಯಸಾಚಿಯನ್ನು ವಂಚಿಸಿತು. ಅವರು ಬೌಲ್ಡ್‌ ಆಗಿ ವಾಪಸಾಗಬೇಕಾಯಿತು.

Advertisement

ವಿಜಯ್‌ ಶಂಕರ್‌, ರಶೀದ್‌ ಖಾನ್‌ ಅತ್ಯಂತ ಬಿಗಿ ಬೌಲಿಂಗ್‌ ನಡೆಸಿ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. 15ನೇ ಓವರಿನಲ್ಲಿ ತಂಡದ 100 ರನ್‌ ಪೂರ್ತಿಗೊಂಡಿತು.  ಇಂಗ್ಲೆಂಡಿನ ಮತ್ತೂಬ್ಬ ಆಟಗಾರ ಜಾಸ್‌ ಬಟ್ಲರ್‌ ಕೂಡ ಯಶಸ್ಸು ಕಾಣಲಿಲ್ಲ. ಕೇವಲ 9 ರನ್‌ ಮಾಡಿ ವಾಪಸಾದರು. ಸ್ಮಿತ್‌ ಗಳಿಕೆ 15 ಎಸೆತಗಳಿಂದ 19 ರನ್‌. ಹೋಲ್ಡರ್‌ ತಮ್ಮ ನೂತನ ಸ್ಪೆಲ್‌ನ ಮೊದಲ ಎಸೆತದಲ್ಲೇ ರಾಜಸ್ಥಾನ್‌ ಕಪ್ತಾನನನ್ನು ವಾಪಸ್‌ ಕಳುಹಿಸಿದರು. ಮುಂದಿನ ಎಸೆತದಲ್ಲೇ ರಿಯಾನ್‌ ಪರಾಗ್‌ ವಿಕೆಟ್‌ ಹಾರಿಸಿದರು (12 ಎಸೆತ, 20 ರನ್‌).

ಜೋಫ್ರ ಆರ್ಚರ್‌ ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸಿ ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು. ಆರ್ಚರ್‌ 7 ಎಸೆತಗಳಿಂದ ಅಜೇಯ 16 ರನ್‌ ಹೊಡೆದರು (1 ಬೌಂಡರಿ, 1 ಸಿಕ್ಸರ್‌). ತೆವಾತಿಯಾಗೆ ಎದುರಿಸಲು ಲಭಿಸಿದ್ದು 3 ಎಸೆತ ಮಾತ್ರ.

ಹೋಲ್ಡರ್‌ ಆಗಮನ
ಈ ಪಂದ್ಯಕ್ಕಾಗಿ ಹೈದರಾಬಾದ್‌ ಮಹತ್ವದ ಬದಲಾವಣೆ ಮಾಡಿಕೊಂಡಿತು. ಕೇನ್‌ ವಿಲಿಯಮ್ಸನ್‌ ಬದಲು ವೆಸ್ಟ್‌ ಇಂಡೀಸಿನ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಅವರನ್ನು ಆಡಿಸಿತು. ಗಾಯಾಳು ಮಿಚೆಲ್‌ ಮಾರ್ಷ್‌ ಜಾಗಕ್ಕೆ ಬಂದ ಹೋಲ್ಡರ್‌ ಈ ತನಕ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೆಯೇ ಬಾಸಿಲ್‌ ಥಂಪಿ ಬದಲು ಶಾಬಾಜ್‌ ನದೀಂ ಅವರಿಗೆ ಅವಕಾಶ ನೀಡಿತು.

ರಾಜಸ್ಥಾನ್‌ ತನ್ನ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next