ಹೊಸದಿಲ್ಲಿ: ಕೋವಿಡ್ -19 ಕಾರಣದಿಂದ ಈ ಬಾರಿಯ “ಇಂಡಿಯನ್ ಪ್ರೀಮಿಯರ್ ಲೀಗ್’ ಎನ್ನುವುದು “ಯುಎಇ ಪ್ರೀಮಿಯರ್ ಲೀಗ್’ ಎನಿಸಿಕೊಂಡಿತು ಎಂಬುದಾಗಿ ಅಭಿಮಾನಿಗಳು ತಮಾಷೆ ಮಾಡಿದ್ದಿದೆ.
ಯುಎಇಯಲ್ಲೂ ವೀಕ್ಷಕರನ್ನು ದೂರ ಇರಿಸಿಯೇ ಕೂಟವನ್ನು ಆಯೋಜಿಸಲಾಗಿತ್ತು. ಪ್ಲೇ ಆಫ್ ಪಂದ್ಯಗಳಿಗೆ ಅಥವಾ ಫೈನಲ್ ಹಣಾಹಣಿ ವೇಳೆಯಾದರೂ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ನೀಡಲಾದೀತು ಎಂಬ ನಿರೀಕ್ಷೆ ಕೂಡ ಹುಸಿಯಾಯಿತು.
ಆದರೆ ಜಗತ್ತಿನಾದ್ಯಂತ ಮಾರಕ ಕೋವಿಡ್-19 ಸೋಂಕು ತನ್ನ ಕಾರುಬಾರು ನಡೆಸುತ್ತಿರುವಾಗ ಐಪಿಎಲ್ ಟೂರ್ನಿ ಎನ್ನುವುದು ಕ್ರೀಡಾಭಿಮಾನಿಗಳ ಪಾಲಿಗೆ “ಬಿಗ್ ರಿಲೀಫ್’ ಆಗಿ ಗೋಚರಿಸಿದ್ದು ಸುಳ್ಳಲ್ಲ.
ಇದನ್ನೂ ಓದಿ:ಐಪಿಎಲ್ 2021: ಕಣಕ್ಕಿಳಿಯಲಿವೆ 9 ತಂಡಗಳು
ಈ ಬಾರಿಯ ಐಪಿಎಲ್ ವೀಕ್ಷಕರ ಅಂಕಿಅಂಶವೇ ಇದಕ್ಕೆ ಸಾಕ್ಷಿ. ಕಳೆದ ವರ್ಷಕ್ಕಿಂತ ಈ ವರ್ಷ ಟಿವಿ ಹಾಗೂ ಇತರ ಪ್ರಸಾರ ಮಾಧ್ಯಮಗಳಲ್ಲಿ ಐಪಿಎಲ್ ನೇರ ಪ್ರಸಾರವನ್ನು ವೀಕ್ಷಿಸಿದವರ ಸಂಖ್ಯೆಯಲ್ಲಿ ಶೇ. 28ರಷ್ಟು ಹೆಚ್ಚಳವಾಗಿದೆ ಎಂದು ಐಪಿಎಲ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಇದು ಐಪಿಎಲ್ ವೀಕ್ಷಣೆಯಲ್ಲಿ ನೂತನ ದಾಖಲೆಯೂ ಆಗಿದೆ.
“ಐಪಿಎಲ್ ಎನ್ನುವುದು ಅಭಿಮಾನಿಗಳ ಪಾಲಿಗೆ ವಿಶ್ವ ದರ್ಜೆಯ ಕ್ರೀಡಾಕೂಟವಾಗಿದೆ. ಈ ಬಾರಿಯ ಯಶಸ್ಸಿಗೆ ಪ್ರಾಯೋಜಕ ಸಂಸ್ಥೆಯಾದ ಡ್ರೀಮ್ ಇಲೆವೆನ್‌ಗೆ ಕೃತಜ್ಞತೆಗಳು. ಡ್ರೀಮ್ ಇಲೆವೆನ್‌ನಂಥ ಡಿಜಿಟಲ್ ಸ್ಪೋರ್ಟ್ಸ್ ಬ್ರ್ಯಾಂಡ್‌ನಿಂದಾಗಿ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ’ ಎಂಬುದಾಗಿ ಐಪಿಎಲ್ ಚೇರ್ಮನ್ ಬೃಜೇಶ್ ಪಟೇಲ್ ಹೇಳಿದ್ದಾರೆ.