Advertisement

ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ! 

09:40 PM Sep 25, 2020 | sudhir |

ದುಬಾೖ: ಮೊದಲ ಪಂದ್ಯವನ್ನು ಸೂಪರ್‌ ಓವರ್‌ನಲ್ಲಿ ಗೆದ್ದ ಖುಷಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಮುಖಾಮುಖೀಯಲ್ಲಿ 3 ವಿಕೆಟಿಗೆ 175 ರನ್‌ ಪೇರಿಸಿದೆ. ಆರಂಭಕಾರ ಪೃಥ್ವಿ ಶಾ ಅರ್ಧ ಶತಕ ಬಾರಿಸಿ ಮಿಂಚಿದರು.

Advertisement

ಮೊದಲ ಪಂದ್ಯದಲ್ಲಿ ಡೆಲ್ಲಿ ಓಪನಿಂಗ್‌ ಸಂಪೂರ್ಣ ವಿಫ‌ಲವಾಗಿತ್ತು. ಆದರೆ ಇಲ್ಲಿ ಪೃಥ್ವಿ ಶಾ-ಶಿಖರ್‌ ಧವನ್‌ ಎಡವಲಿಲ್ಲ. ಚೆನ್ನೈ ವೇಗಿಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದರು. ವಿಕೆಟ್‌ ಉಳಿಸಿಕೊಂಡರೂ ರನ್‌ ಗತಿ ತುಸು ನಿಧಾನವಾಗಿಯೇ ಇತ್ತು. ಪವರ್‌ ಪ್ಲೇ ಅವಧಿಯಲ್ಲಿ ಬಂದದ್ದು 36 ರನ್‌ ಮಾತ್ರ. ಸ್ಯಾಮ್‌ ಕರನ್‌ ಮತ್ತು ಜೋಶ್‌ ಹ್ಯಾಝಲ್‌ವುಡ್‌ ಅವರ ಮೊದಲ ಸ್ಪೆಲ್‌ ಅತ್ಯಂತ ಪರಿಣಾಮಕಾರಿಯಾಗಿತ್ತು.

ಆದರೆ ರವೀಂದ್ರ ಜಡೇಜ ಅವರ ಸ್ಪಿನ್‌ ಎಸೆತಗಳು ಮತ್ತೆ ಹಳಿ ತಪ್ಪಿದವು. ಡೆಲ್ಲಿ ಆರಂಭಿಕರು ಸೇರಿ ಬಿರುಸಿನ ಆಟಕ್ಕಿಳಿದರು. ಜಡೇಜ ಅವರ 4 ಓವರ್‌ಗಳಿಂದ 44 ರನ್‌ ಸೋರಿ ಹೋಯಿತು.

ಇದನ್ನೂ ಓದಿ :ಡ್ರಗ್ಸ್‌ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ?

Advertisement

ಲೆಗ್‌ ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಕೂಡ ಆರಂಭದಲ್ಲಿ ಪರಿಣಾಮಕಾರಿ ಆಗಿರಲಿಲ್ಲ. ಅವರ ಮೊದಲೆರಡು ಓವರ್‌ಗಳಲ್ಲಿ 24 ರನ್‌ ಹರಿದು ಹೋಯಿತು. ಆದರೆ 3ನೇ ಓವರಿನಲ್ಲಿ ಶಿಖರ್‌ ಧವನ್‌ ವಿಕೆಟ್‌ ಕೀಳುವ ಮೂಲಕ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು. 27 ಎಸೆತಗಳಿಂದ 35 ರನ್‌ ಮಾಡಿದ್ದ ಧವನ್‌ (3 ಬೌಂಡರಿ, 1 ಸಿಕ್ಸರ್‌) ಅವರನ್ನು ಚಾವ್ಲಾ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಮೊದಲ ವಿಕೆಟಿಗೆ 10.4 ಓವರ್‌ಗಳಿಂದ 94 ರನ್‌ ಒಟ್ಟುಗೂಡಿತು. ಇದು 2016ರ ಬಳಿಕ ಡೆಲ್ಲಿಯ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತವಾಗಿದೆ.

ಇದನ್ನೂ ಓದಿ :ಎಚ್ಚರ…ನಿಮ್ಮ Insta ಅಕೌಂಟ್ ಹ್ಯಾಕ್ ಆಗಬಹುದು ! ಹೇಗಂತೀರಾ ? ಇದನ್ನು ಓದಿ

ಇನ್ನೊಂದೆಡೆ ಧವನ್‌ಗಿಂತ ಬಿರುಸಿನ ಆಟವಾಡುತ್ತಿದ್ದ ಪೃಥ್ವಿ ಶಾ ಆಗಲೇ ಅರ್ಧ ಶತಕದ ಗಡಿ ದಾಟಿ ಮುನ್ನುಗ್ಗಿದ್ದರು. ಶಾ ಗಳಿಕೆ 43 ಎಸೆತಗಳಿಂದ 64 ರನ್‌. ಸಿಡಿಸಿದ್ದು 9 ಬೌಂಡರಿ ಹಾಗೂ ಒಂದು ಸಿಕ್ಸರ್‌. ಚಾವ್ಲಾ ಎಸೆತವನ್ನು ಮುನ್ನುಗ್ಗಿ ಬಾರಿಸುವ ಪ್ರಯತ್ನದಲ್ಲಿ ಎಡವಿದ ಶಾ ಅವರನ್ನು ಧೋನಿ ಸ್ಟಂಪ್ಡ್ ಮಾಡಿದರು. ಹೀಗೆ 9 ರನ್‌ ಅಂತರದಲ್ಲಿ ಆರಂಭಿಕರಿಬ್ಬರ ಆಟ ಮುಗಿಯಿತು.

3ನೇ ವಿಕೆಟಿಗೆ ಜತೆಗೂಡಿದ ರಿಷಭ್‌ ಪಂತ್‌ ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ ಉತ್ತಮ ಜತೆಯಾಟವೊಂದನ್ನು ನಿಭಾಯಿಸಿದರು. 40 ಎಸೆತಗಳಿಂದ 58 ರನ್‌ ಒಟ್ಟುಗೂಡಿಸಿದರು. ಅಯ್ಯರ್‌ 22 ಎಸೆತಗಳಿಂದ 26 ರನ್‌ ಮಾಡಿದರೆ (1 ಬೌಂಡರಿ), ಪಂತ್‌ 25 ಎಸೆತಗಳಿಂದ 37 ರನ್‌ ಮಾಡಿ ಅಜೇಯರಾಗಿ ಉಳಿದರು (6 ಬೌಂಡರಿ). ಉರುಳಿದ 3 ವಿಕೆಟ್‌ಗಳಲ್ಲಿ 2 ಚಾವ್ಲಾ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next