Advertisement

ಆರ್‌ಸಿಬಿ-ರಾಜಸ್ಥಾನ್‌: ಸೋಲಿನ ದೋಣಿಯ ಪಯಣಿಗರು

01:02 PM Apr 02, 2019 | Sriram |

ಜೈಪುರ: ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ 12ನೇ ಐಪಿಎಲ್‌ನ ನತದೃಷ್ಟ ತಂಡಗಳಾಗಿ ಗುರುತಿಸಿಕೊಂಡಿವೆ. ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿವೆ. ಹೀಗಾಗಿ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆದರೆ ಇವುಗಳಲ್ಲಿ ಒಂದು ತಂಡ ಮಂಗಳವಾರ ರಾತ್ರಿ ಗೆಲುವಿನ ನಿಲ್ದಾಣ ತಲುಪಲಿದೆ. ಇನ್ನೊಂದು ತಂಡಕ್ಕೆ 4ನೇ ಸೋಲಿನ ಸುಳಿಯಿಂದ ಪಾರಾಗಲು ಸಾಧ್ಯವಿಲ್ಲ. ಅದೃಷ್ಟ ಯಾರಿಗಿದೆ ಎಂಬುದು ಸದ್ಯದ ಪ್ರಶ್ನೆ.

Advertisement

ಈ ಪಂದ್ಯ ಜೈಪುರದ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆಯುವುದರಿಂದ ರಾಜಸ್ಥಾನಕ್ಕೆ ಇದು ಹೋಮ್‌ ಗ್ರೌಂಡ್‌. ಅಂದಮಾತ್ರಕ್ಕೆ ಗೆಲುವು ಒಲಿಯಲೇ ಬೇಕೆಂದಿಲ್ಲ. ಪಂಜಾಬ್‌ ವಿರುದ್ಧ ಇಲ್ಲಿ ಆಡಲಾದ ಪಂದ್ಯದಲ್ಲಿ ರಾಜಸ್ಥಾನ್‌ 14 ರನ್ನುಗಳ ಸೋಲಿಗೆ ತುತ್ತಾಗಿತ್ತು. ಅಶ್ವಿ‌ನ್‌-ಬಟ್ಲರ್‌ “ಮಂಕಡ್‌ ಔಟ್‌’ ಪ್ರಕರಣದಿಂದ ಸುದ್ದಿಯಾಗಿದ್ದರು.

ಆರ್‌ಸಿಬಿಗೆ ಹೋಲಿಸಿದರೆ ರಾಜಸ್ಥಾನ್‌ ತಂಡದ ಒಟ್ಟು ನಿರ್ವಹಣೆ ತುಸು ಮೇಲ್ಮಟ್ಟದಲ್ಲೇ ಇದೆ. ರಹಾನೆ ಪಡೆಗೆ ಮೂರು ಪಂದ್ಯಗಳಲ್ಲಿ ಗೆಲುವಿನ ಸಾಧ್ಯತೆ ತೆರೆದೇ ಇತ್ತು. ಆದರೆ ನಸೀಬು ಮಾತ್ರ ಖರಾಬ್‌ ಆಗಿತ್ತು. ರವಿವಾರ ರಾತ್ರಿ ಬ್ಯಾಟಿಂಗಿಗೆ ಕಠಿನವಾದ ಚೆನ್ನೈಟ್ರ್ಯಾಕ್‌ ಮೇಲೂ ರಾಜಸ್ಥಾನ್‌ ದಿಟ್ಟ ಚೇಸಿಂಗ್‌ ನಡೆಸಿತ್ತು. ಆರಂಭಿಕ ವೈಫ‌ಲ್ಯದ ಹೊರತಾಗಿಯೂ ಗೆಲುವನ್ನು ಸಮೀಪಿಸಿತ್ತು.

ರಾಜಸ್ಥಾನ್‌ಗೆ ಟರ್ನರ್‌ ಬಲ
ಎರಡೂ ತಂಡಗಳ ಬ್ಯಾಟಿಂಗ್‌ ಬಲಿಷ್ಠವಾಗಿಯೇ ಇದೆ. ಇತ್ತಂಡಗಳಲ್ಲೂ ಬಿಗ್‌ ಹಿಟ್ಟರ್ ಇದ್ದಾರೆ. ರಾಜಸ್ಥಾನ್‌ ತಂಡ ಬಟ್ಲರ್‌, ಸ್ಯಾಮ್ಸನ್‌, ತ್ರಿಪಾಠಿ, ರಹಾನೆ, ಸ್ಮಿತ್‌, ಸ್ಟೋಕ್ಸ್‌ ಅವರನ್ನು ಹೊಂದಿದೆ. ಇವರೊಂದಿಗೆ ಆಸ್ಟ್ರೇಲಿಯದ ಹೊಡಿಬಡಿ ಆಟಗಾರ ಆ್ಯಶrನ್‌ ಟರ್ನರ್‌ ಸೇರ್ಪಡೆಗೊಳ್ಳಲಿದ್ದಾರೆ. ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿ ಮುಗಿಸಿದ ಟರ್ನರ್‌ ಈಗ ಜೈಪುರಕ್ಕೆ ಆಗಮಿಸಿದ್ದು, ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲೂಬಹುದು.

ಆರ್‌ಸಿಬಿಯಲ್ಲಿ ಕೊಹ್ಲಿ, ಸ್ಟೋಯಿನಿಸ್‌, ಎಬಿಡಿ, ಹೆಟ್‌ಮೈರ್‌, ಗ್ರ್ಯಾಂಡ್‌ಹೋಮ್‌, ದುಬೆ, ಅಲಿ ಮೊದಲಾದವರಿದ್ದಾರೆ. ಆದರೆ ಎಲ್ಲರದೂ ಫ್ಲಾಪ್‌ ಶೋ. ಎಬಿಡಿ ಅವರನ್ನು ಹೊರತುಪಡಿಸಿ ಉಳಿದವರ್ಯಾರಿಂದಲೂ ಅರ್ಧ ಶತಕ ದಾಖಲಾಗಿಲ್ಲ. ಚೆನ್ನೈ ವಿರುದ್ಧ 70 ರನ್ನಿಗೆ ಕುಸಿದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ ಕೊಹ್ಲಿ ಪಡೆ, ಹ್ಯಾಟ್ರಿಕ್‌ ಸೋಲಿನ ಬಳಿಕ ಇನ್ನಷ್ಟು “ಟ್ರೋಲ್‌’ ಆಗುತ್ತಿದೆ. 4ನೇ ಪಂದ್ಯದಲ್ಲಿ ಗೆಲ್ಲದೇ ಹೋದರೆ ಆರ್‌ಸಿಬಿ ತೀವ್ರ ಟೀಕೆಗೆ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ.

Advertisement

ಆದರೆ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳ ಸಾಧನೆ ಗಮನಾರ್ಹ. ರಹಾನೆ, ಬಟ್ಲರ್‌, ಸ್ಯಾಮ್ಸನ್‌, ಸ್ಟೋಕ್ಸ್‌ ಅವರೆಲ್ಲ ಛಾತಿಗೆ ತಕ್ಕ ಆಟವಾಡಿದ್ದಾರೆ. ಸ್ಯಾಮ್ಸನ್‌ ಅವರಿಂದ ಸೆಂಚುರಿ ಆಟವೂ ಕಂಡುಬಂದಿತ್ತು. ಹೀಗಾಗಿ ತವರಿನ ಅಂಗಳವಾದ್ದರಿಂದ ರಾಜಸ್ಥಾನ್‌ಗೆ “ರಾಯಲ್ಸ್‌’ ಪಟ್ಟ ಮೀಸಲಿಡಬಹುದು.

ಬೌಲಿಂಗ್‌ ದೌರ್ಬಲ್ಯ
ಬೌಲಿಂಗ್‌ ಬಲದ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಘಾತಕವೇನಲ್ಲ. ಎರಡೂ ಬಹಳ ದುರ್ಬಲ ದಾಳಿಗಾರರನ್ನು ಹೊಂದಿದೆ. ರಾಜಸ್ಥಾನ್‌ ಬಗ್ಗೆ ಹೇಳುವುದಾದರೆ, ರವಿವಾರದ ಚೆನ್ನೈಪಂದ್ಯವೇ ಉತ್ತಮ ನಿದರ್ಶನ ಒದಗಿಸುತ್ತದೆ. 15ನೇ ಓವರ್‌ ತನಕ ಧೋನಿ ಪಡೆಗೆ ಬ್ರೇಕ್‌ ಹಾಕಿದ ರಾಜಸ್ಥಾನ್‌, ಬಳಿಕ ಧೋನಿ ಅಬ್ಬರದಿಂದಲೇ ಲಯ ಕಳೆದುಕೊಂಡಿತ್ತು. ಹರಾಜು ಮೊತ್ತದಲ್ಲಿ ದುಬಾರಿಯಾದ ಜೈದೇವ್‌ ಉನಾದ್ಕತ್‌ ಬೌಲಿಂಗ್‌ ದಾಳಿಯಲ್ಲೂ ದುಬಾರಿ ಆಗುತ್ತಿದ್ದಾರೆ.

ರಾಜಸ್ಥಾನ್‌ ತಂಡದಲ್ಲಿ ಕರ್ನಾಟಕದ ಸಾಕಷ್ಟು ಬೌಲರ್‌ಗಳಿದ್ದಾರೆ. ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಸ್ಟುವರ್ಟ್‌ ಬಿನ್ನಿ ಪ್ರಮುಖರು. ಇವರಲ್ಲಿ ಬಿನ್ನಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಉಳಿದಿಬ್ಬರು ಮ್ಯಾಚ್‌ ವಿನ್ನರ್‌ಗಳಾಗಿಲ್ಲ. ಬೆಂಗಳೂರು ತಂಡದೆದುರು ಇವರು ಮಿಂಚಬಹುದೇ ಎಂಬ ಕುತೂಹಲವಿದೆ.

ಆರ್‌ಸಿಬಿ ಬೌಲಿಂಗ್‌ ಬಗ್ಗೆ ಹೊಗಳುವ ಯಾವ ಅಂಶಗಳೂ ಇಲ್ಲ. ಉಮೇಶ್‌ ಯಾದವ್‌, ನವದೀಪ್‌ ಸೈಮಿ, ಮೊಹಮ್ಮದ್‌ ಸಿರಾಜ್‌, ಮೊಯಿನ್‌ ಅಲಿ, ಗ್ರ್ಯಾಂಡ್‌ಹೋಮ್‌ ಎದುರಾಳಿಗೆ ಭೀತಿ ಹುಟ್ಟಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಇದ್ದುದರಲ್ಲಿ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಪರಾಗಿಲ್ಲ. ಸಮರ್ಥ ಆಲ್‌ರೌಂಡರ್‌ಗಳ ಕೊರತೆಯೂ ಆರ್‌ಸಿಬಿಯನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next