Advertisement

ಗೆಲುವಿನ ದಾರಿ ಮರೆತ ಆರ್‌ಸಿಬಿ

12:12 AM Apr 06, 2019 | Team Udayavani |

ಬೆಂಗಳೂರು: ಆ್ಯಂಡ್ರೆ ರಸೆಲ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ರೋಮಾಂಚಕವಾಗಿ ಸೋಲಿಸಿದೆ. ಇದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಸತತ ಐದನೇ ಸೋಲನ್ನು ಕಂಡು ಆಘಾತಕ್ಕೆ ಒಳಗಾಯಿತು.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ 3 ವಿಕೆ ಟಿಗೆ 205 ರನ್‌ ಪೇರಿಸಿದರೆ, ಕೆಕೆಆರ್‌ 19.1ಓವರ್‌ಗಳಲ್ಲಿ 5 ವಿಕೆಟಿಗೆ 206 ರನ್‌ ಗಳಿಸಿ ಜಯಭೇರಿ ಬಾರಿಸಿತು. ಕ್ರಿಸ್‌ ಲಿನ್‌ ಸಾಹಸದಿಂದ ಕೆಕೆಆರ್‌ ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸ್‌ ಮಾಡಿತು. ಓವರಿಗೆ ಹತ್ತರ ಸರಾಸರಿಯಲ್ಲಿ ರನ್‌ ಬರತೊಡಗಿತು. ಉತ್ತಪ್ಪ ಅವರಿಂದ ಉತ್ತಮ ನೆರವು ಪಡೆದ ಲಿನ್‌ 2ನೇ ವಿಕೆಟಿಗೆ 8 ಓವರ್‌ಗಳಿಂದ 65 ರನ್‌ ಪೇರಿಸಿದರು. ಆಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. 17ನೇ ಓವರ್‌ ಮುಗಿದಾಗ ಕೆಕೆಆರ್‌ 5 ವಿಕೆಟಿಗೆ 153 ರನ್‌ ಗಳಿಸಿ ಸೋಲಿನತ್ನ ಮುಖ ಮಾಡಿತ್ತು. ಅಂದರೆ ಅಂತಿಮ 18 ಎಸೆತಗಳಲ್ಲಿ ಇನ್ನೂ 53 ರನ್‌ ತೆಗೆಯುವ ಸವಾಲು ಮುಂದಿತ್ತು.

ರಸೆಲ್‌ ಮೆರೆದಾಟ
18 ಮತ್ತು 19ನೇ ಓವರಿನಲ್ಲಿ ರಸೆಲ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಸಿಕ್ಸರ್‌ಗಳ ಸುರಿಮಳೆಗೈದು ಆರ್‌ಸಿಬಿಗೆ ಆಘಾತ ನೀಡಿದರು. ಈ ಎರಡು ಓವರ್‌ಗಳಲ್ಲಿ 52 ರನ್‌ ಸಿಡಿಸಿದ ಅವರು ಇನ್ನೂ 5 ಎಸೆತ ಬಾಕಿ ಇರುತ್ತಲೇ ತಂಡಕ್ಕೆ ರೋಚಕ ಗೆಲುವು ತಂದಿತ್ತರು. ರಸೆಲ್‌ 13 ಎಸೆತಗಳಲ್ಲಿ 7 ಸಿಕ್ಸರ್‌ ಮತ್ತು 1 ಬೌಂಡರಿ ನೆರವಿನಿಂದ 48 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಆರ್‌ಸಿಬಿಗೆ ಪಾರ್ಥಿವ್‌ ಪಟೇಲ್‌-ವಿರಾಟ್‌ ಕೊಹ್ಲಿ ಉತ್ತಮ ಆರಂಭ ಒದಗಿಸಿದರು. 7.5 ಓವರ್‌ಗಳಿಂದ 64 ರನ್‌ ಪೇರಿಸಿದರು. ಇದರಲ್ಲಿ ಪಾರ್ಥಿವ್‌ ಗಳಿಕೆ 25 ರನ್‌ (24 ಎಸೆತ, 3 ಬೌಂಡರಿ). ನಿತೀಶ್‌ ರಾಣಾ ಲೆಗ್‌ ಬಿಫೋರ್‌ ಮೂಲಕ ಪಟೇಲ್‌ ವಿಕೆಟ್‌ ಹಾರಿಸಿ ಕೆಕೆಆರ್‌ಗೆ ಬ್ರೇಕ್‌ ಒದಗಿಸಿದರು.

ಮುಂದಿನದು ಕೊಹ್ಲಿ-ಎಬಿಡಿ ಜೋಡಿಯ ಹೊಡಿಬಡಿ ಆಟ. ಕೆಕೆಆರ್‌ ದಾಳಿಯನ್ನು ಪುಡಿಗುಟ್ಟುತ್ತ ಸಾಗಿದ ಈ ಜೋಡಿ 2ನೇ ವಿಕೆಟಿಗೆ 108 ರನ್‌ ಪೇರಿಸಿ ಆರ್‌ಸಿಬಿ ಅಭಿಮಾನಿಗಳನ್ನು ರಂಜಿಸಿತು. 52 ಎಸೆತಗಳಲ್ಲಿ ಇವರಿಂದ ಶತಕದ ಜತೆಯಾಟ ಪೂರ್ತಿಗೊಂಡಿತು.

Advertisement

ಶತಕದ ನಿರೀಕ್ಷೆಯಲ್ಲಿದ್ದ ವಿರಾಟ್‌ ಕೊಹ್ಲಿಗೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅಡ್ಡಿಯಾಗಿ ಪರಿಣಮಿಸಿದರು. ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಸಲ ಐವತ್ತರ ಗಡಿ ದಾಟಿದ ಕೊಹ್ಲಿ 49 ಎಸೆತಗಳಿಂದ 84 ರನ್‌ ಬಾರಿಸಿದರು (9 ಬೌಂಡರಿ, 2 ಸಿಕ್ಸರ್‌). ಎಬಿಡಿ ಅವರಿಂದ ಈ ಕೂಟದಲ್ಲಿ 2ನೇ ಅರ್ಧ ಶತಕ ದಾಖಲಾಯಿತು. ಎಂದಿನ ಸ್ಫೋಟಕ ಬ್ಯಾಟಿಂಗ್‌ ಮೂಲಕ 32 ಎಸೆತಗಳಿಂದ 63 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌). ಇವರ ಹಾರಾಟವನ್ನು ಕೊನೆಗೊಳಿಸಿದವರು ಸುನೀಲ್‌ ನಾರಾಯಣ್‌.

ಕೊನೆಯಲ್ಲಿ ಸ್ಟೋಯಿನಿಸ್‌ ಕೂಡ ಸ್ಫೋಟಕ ಆಟವಾಡಿ 13 ಎಸೆತಗಳಿಂದ ಅಜೇಯ 28 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಆರ್‌ಸಿಬಿ ಮೊತ್ತ ಇನ್ನೂರರ ಗಡಿ ದಾಟಿತು.

ಸ್ಕೋರ್‌ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ಪಾರ್ಥಿವ್‌ ಪಟೇಲ್‌ ಎಲ್‌ಬಿಡಬ್ಲ್ಯು ರಾಣಾ 25
ವಿರಾಟ್‌ ಕೊಹ್ಲಿ ಸಿ ಮತ್ತು ಬಿ ಕುಲದೀಪ್‌ 84
ಎಬಿ ಡಿ ವಿಲಿಯರ್ ಸಿ ಗಿಲ್‌ ಬಿ ನಾರಾಯಣ್‌ 63
ಮಾರ್ಕಸ್‌ ಸ್ಟೋಯಿನಿಸ್‌ ಔಟಾಗದೆ 28
ಮೊಯಿನ್‌ ಅಲಿ ಔಟಾಗದೆ 0

ಇತರ 5
ಒಟ್ಟು (3 ವಿಕೆಟಿಗೆ) 205
ವಿಕೆಟ್‌ ಪತನ: 1-64, 2-172, 3-185.

ಬೌಲಿಂಗ್‌:
ಪ್ರಸಿದ್ಧ್ ಕೃಷ್ಣ 3-0-41-0
ಪೀಯೂಷ್‌ ಚಾವ್ಲಾ 4-0-32-0
ಸುನೀಲ್‌ ನಾರಾಯಣ್‌ 4-0-30-1
ಲಾಕೀ ಫ‌ರ್ಗ್ಯುಸನ್‌ 2-0-32-0
ಕುಲದೀಪ್‌ ಯಾದವ್‌ 4-0-31-1
ನಿತೀಶ್‌ ರಾಣಾ 2-0-22-1
ಆ್ಯಂಡ್ರೆ ರಸೆಲ್‌ 1-0-16-0

ಕೋಲ್ಕತಾ ನೈಟ್‌ ರೈಡರ್
ಕ್ರಿಸ್‌ ಲಿನ್‌ ಬಿ ನೇಗಿ 43
ಸುನೀಲ್‌ ನಾರಾಯಣ್‌ ಸಿ ನೇಗಿ ಬಿ ಸೈನಿ 10
ರಾಬಿನ್‌ ಉತ್ತಪ್ಪ ಸಿ ಸೌಥಿ ಬಿ ನೇಗಿ 33
ನಿತೀಶ್‌ ರಾಣಾ ಸಿ ಬದಲಿಗ ಬಿ ಚಾಹಲ್‌ 37
ದಿನೇಶ್‌ ಕಾರ್ತಿಕ್‌ ಸಿ ಚಾಹಲ್‌ ಬಿ ಸೈನಿ 19
ಆ್ಯಂಡ್ರೆ ರಸೆಲ್‌ ಔಟಾಗದೆ 48
ಶುಭಮನ್‌ ಗಿಲ್‌ ಔಟಾಗದೆ 3

ಇತರ 13
ಒಟ್ಟು (19.1 ಓವರ್‌ಗಳಲ್ಲಿ 5 ವಿಕೆಟಿಗೆ) 206
ವಿಕೆಟ್‌ ಪತನ: 1-28, 2-93, 3-108, 4-139, 5-153

ಬೌಲಿಂಗ್‌:
ಟಿಮ್‌ ಸೌಥಿ 4-0-61-0
ನವದೀಪ್‌ ಸೈನಿ 4-0-34-2
ಯಜುವೇಂದ್ರ ಚಾಹಲ್‌ 4-0-24-1
ಮೊಹಮ್ಮದ್‌ ಸಿರಾಜ್‌ 2.2-0-36-0
ಮಾರ್ಕಸ್‌ ಸ್ಟೋಯಿನಿಸ್‌ 1.4-0-28-0
ಪವನ್‌ ನೇಗಿ 3.1-0-21-2

Advertisement

Udayavani is now on Telegram. Click here to join our channel and stay updated with the latest news.

Next