Advertisement
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 8 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಡೆಲ್ಲಿ 18.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಮಾಡಿತು.
ಈ ಋತುವಿನ ಆರಂಭದಿಂದಲೇ ಸತತ 6 ಪಂದ್ಯ ಎಡವಿದ ಆರ್‌ಸಿಬಿ, ಸೋಲಿನಲ್ಲೂ ಒಂದು ದಾಖಲೆಯನ್ನು ಸರಿಗಟ್ಟಿದೆ. ಐಪಿಎಲ್ ಋತುವಿನ ಆರಂಭದಿಂದ ಸತತ ಗರಿಷ್ಠ ಪಂದ್ಯಗಳನ್ನು ಸೋತ ದಾಖಲೆಯನ್ನು ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಹಂಚಿಕೊಂಡಿದೆ. ಡೆಲ್ಲಿ ತಂಡ 2013ರಲ್ಲಿ ಈ ಸಂಕಟಕ್ಕೆ ಸಿಲುಕಿತ್ತು. ಈ ಋತುವಿನಲ್ಲಿ ಇನ್ನೂ ಪಂದ್ಯಗಳು ಬಾಕಿಯಿರುವುದರಿಂದ ಆರ್‌ಸಿಬಿಗೆ ದಾಖಲೆ ಮುರಿಯಲು, ಅದನ್ನು ಬಲಪಡಿಸಲು ಇನ್ನಷ್ಟು ಅವಕಾಶವಿದೆ! ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿಕೇಂದ್ರಗಳಾದ ವಿರಾಟ್ ಕೊಹ್ಲಿ ಮತ್ತು ಡಿ ವಿಲಿಯರ್ ಈ ಪಂದ್ಯದಲ್ಲಿ ಸಿಡಿಯಲಿಲ್ಲ. ಹೀಗಾಗಿ ತಂಡದ ಮೊತ್ತ ಏರಲಿಲಿಲ್ಲ. ಆರಂಭಿಕನಾಗಿ ಕ್ರೀಸ್ ಇಳಿದ ನಾಯಕ ಕೊಹ್ಲಿ 17ನೇ ಓವರ್‌ವರೆಗೆ ಆಡಿದರೂ ವೇಗವಾಗಿ ರನ್ ಗಳಿಸಲು ಪರದಾಡಿದರು. ಅವರು 33 ಎಸೆತಗಳಲ್ಲಿ 41 ರನ್ ಗಳಿಸಿದರು. ಎಬಿಡಿ ಗಳಿಕೆ ಕೇವಲ 17 ರನ್. ಕಡೆಯಲ್ಲಿ ಮೊಯಿನ್ ಅಲಿ ಬಿರುಸಿನಿಂದ 32 ರನ್ ಗಳಿಸಿದರು.
Related Articles
ಉತ್ತಮ ಲಯದಲ್ಲಿದ್ದ ಬೆಂಗಳೂರು ಬ್ಯಾಟ್ಸಮನ್‌ಗಳಿಗೆ ವೇಗಿ ಕಾಗಿಸೊ ರಬಾಡ ಆಘಾತವಿಕಿಕ್ಕಿದರು. 18ನೇ ಓವರ್‌ನಲ್ಲಿ ಕೇವಲ 5 ರನ್ ನೀಡಿ ಕೊಹ್ಲಿ, ಅಕ್ಷದೀಪ್ ನಾಥ್ ಹಾಗೂ ಪವನ್ ನೇಗಿ ವಿಕೆಟ್ ಉರುಳಿಸಿದರು. ರಬಾಡ ಸಾಧನೆ 21 ರನ್ನಿಗೆ 4 ವಿಕೆಟ್. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
Advertisement
ಡೆಲ್ಲಿ ಚೇಸಿಂಗ್ ವೇಳೆ ಆರಂಭದಲ್ಲೇ ಜೀವದಾನ ಪಡೆದ ನಾಯಕ ಶ್ರೇಯಸ್ ಐಯ್ಯರ್, ಬಹುತೇಕ ಕೊನೆಯವರೆಗೂ ಆಡಿ ತಂಡದ ಗೆಲುವಿಗೆ ಕಾರಣವಾದರು. ಅವರು 50 ಎಸೆತ ಎದುರಿಸಿ, 8 ಬೌಂಡರಿ, 2 ಸಿಕ್ಸರ್ ಸಮೇತ 67 ರನ್ ಗಳಿಸಿದರು. ಅಯ್ಯರ್ ಹೊರತುಪಡಿಸಿದರೆ ಪೃಥ್ವಿ ಶಾ (28), ಕಾಲಿನ್ ಇಂಗ್ರಾಮ್ (22) ಅವರದ್ದೇ ಗರಿಷ್ಠ ಗಳಿಕೆ.
ಪ್ಲಾಸ್ಟಿಕ್ ತ್ಯಾಜ್ಯದ ಹಸಿರು ಜೆರ್ಸಿ ತೊಟ್ಟ ಆರ್ಸಿಬಿಪ್ರತಿವರ್ಷ ಐಪಿಎಲ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಸಮವಸ್ತ್ರ ತೊಟ್ಟು ಆಡುವುದು ಮಾಮೂಲಿ. ಪರಿಸರ ಸಂರಕ್ಷಣೆಯ ಸಂದೇಶ ಕೊಡುವುದು ಇದರ ಉದ್ದೇಶ. ಇದಕ್ಕೆ ಪೂರಕವಾಗಿ ಆರ್‌ಸಿಬಿ ನಾಯಕ ಕೊಹ್ಲಿ, ಎದುರಾಳಿ ನಾಯಕ ಶ್ರೇಯಸ್ ಅಯ್ಯರ್‌ಗೆ ಸಸ್ಯವೊಂದನ್ನು ನೀಡಿದರು. ಈ ಬಾರಿ ಇನ್ನೊಂದು ವಿಶೇಷವೂ ಇದೆ. ತ್ಯಾಜ್ಯ ಪದಾರ್ಥದ ಮರುಸಂಸ್ಕರಣೆ ಮಾಡಬೇಕಾದ ಅನಿವಾರ್ಯತೆಯ ಬಗ್ಗೆಯೂ ಮನದಟ್ಟು ಮಾಡುವ ಯತ್ನವನ್ನು ಆರ್‌ಸಿಬಿ ನಡೆಸಿದೆ. ಆದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ತಯಾರಿಸಿದ ಜೆರ್ಸಿಯನ್ನು ಧರಿಸಿ ಆರ್‌ಸಿಬಿ ಆಟಗಾರರು ಆಡಿದರು. ಮೈದಾನದಲ್ಲೂ ಹಸಿರು ಬಾವುಟಗಳು ಹಾರಾಡಿದವು. – ವೆಂ. ಸುನೀಲ್ ಕುಮಾರ್